ಬೆಂಗಳೂರು: ಟಾಲಿವುಡ್ ಜಕ್ಕಣ್ಣ, ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ನಟ ಮಹೇಶ್ ಬಾಬು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಧನ್ಯವಾದ ಸಲ್ಲಿಸಿರುವುದಕ್ಕೆ ಕಾರಣವಿದೆ. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಆರ್‌ಆರ್‌ಆರ್’ ಇದೇ ಜನವರಿ 7 ಕ್ಕೆ ಬಿಡುಗಡೆಯಾಗಲಿದೆ. ಇನ್ನೊಂದೆಡೆ ಪ್ರಿನ್ಸ್ ಮಹೇಶ್ ಬಾಬು ಅವರ ‘ಸರ್ಕಾರು ವಾರಿ ಪಾಟಾ’ ಸಿನಿಮಾ ಸಂಕ್ರಾಂತಿ ಸಮಯದಲ್ಲಿ ಬಿಡುಗಡೆಯಾಗುವ ಸಿದ್ಧತೆ ಮಾಡಿಕೊಂಡಿತ್ತು.
ಆದರೆ, ರಾಜಮೌಳಿ ಮನವಿ ಮೇರೆಗೆ ಮಹೇಶ್ ಬಾಬು ಹಾಗೂ ಅವರ ತಂಡ ‘ಸರ್ಕಾರು ವಾರಿ ಪಾಟಾ’ವನ್ನು ಏಪ್ರಿಲ್ 1 ಕ್ಕೆ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತ್ತು. ಸ್ವತಃ ರಾಜಮೌಳಿ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಂಡಿರುವ ರಾಜಮೌಳಿ, ‘ಸಂಕ್ರಾಂತಿಗೆ ಬಿಡುಗಡೆಯಾಗಬೇಕಿದ್ದ ಸರ್ಕಾರು ವಾರಿ ಪಾಟಾವನ್ನು ನನ್ನ ಮನವಿ ಮೇರೆಗೆ ಏಪ್ರಿಲ್‌ಗೆ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡರು. ಅಷ್ಟಕ್ಕೂ ಸಂಕ್ರಾಂತಿ ಸ್ಪೇಷಲ್ ಆಗಿ ಬರಬೇಕಾಗಿದ್ದ ಸಿನಿಮಾ ಕೂಡ ಇದು. ಆದರೆ, ಚಿತ್ರರಂಗದಲ್ಲಿ ಆರೋಗ್ಯಯುತ ಪೈಪೋಟಿ ಇರಲಿ ಎಂದು ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಥ್ಯಾಂಕ್ಸ್ ಟು ಮೈ ಹೀರೊ’ ಎಂದು ಮಹೇಶ್ ಬಾಬುಗೆ ಧನ್ಯವಾದ ಸಲ್ಲಿಸಿದ್ದಾರೆ.
ಇದೇ ರೀತಿ ಭೀಮ್ಲಾ ನಾಯಕ್ ಸಿನಿಮಾ ತಂಡಕ್ಕೂ ಅವರು ಧನ್ಯವಾದ ಸಲ್ಲಿಸಿದ್ದಾರೆ. ಈ ಮೊದಲು ಭೀಮ್ಲಾ ನಾಯಕ್ ಜನವರಿ 12 ಕ್ಕೆ ತೆರೆಗೆ ಬರಲು ಸಿದ್ದವಾಗಿತ್ತು. ಆದರೆ, ಚಿತ್ರರಂಗದಲ್ಲಿ ಆರೋಗ್ಯಯುತ ಪೈಪೋಟಿ ಇರಲಿ ಎಂದು ಫೆ.25 ಕ್ಕೆ ಬಿಡುಗಡೆಯಾಗುತ್ತಿದೆ.
2022 ರ ಜನವರಿ 7 ರಂದು ‘ಆರ್‌ಆರ್‌ಆರ್‘ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಸಂಕ್ರಾಂತಿ ಹಬ್ಬಕ್ಕೆ ಸಿನಿಪ್ರಿಯರಿಗೆ ದೊಡ್ಡ ಉಡುಗೊರೆ ಸಿಕ್ಕಂತಾಗಿದೆ.
ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ಸುಮಾರು ₹400 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ಚಿತ್ರವು 20ನೇ ಶತಮಾನದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೋಮರಂ ಭೀಮ್ ಅವರ ಜೀವನ ಕಥೆಯನ್ನು ಆಧರಿಸಿದೆ.
ಈ ಚಿತ್ರದಲ್ಲಿ ರಾಮ್‌ಚರಣ್ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ, ಎನ್‌ಟಿಆರ್ ಜೂನಿಯರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ನಾನು ಇನ್ನಷ್ಟು ಸೆಕ್ಸಿಯಾಗಿರುತ್ತೇನೆಂದು ಟೀಕಾಕಾರರ ಬಾಯಿ ಮುಚ್ಚಿಸಿದ ನಟಿ ಸಮಂತಾ