ಹೈಲೈಟ್ಸ್:
- ಪಂಜಾಬ್ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ಉಲ್ಬಣ
- ಚುನಾವಣೆ ಹೊಸ್ತಿಲಲ್ಲಿ ಕೈ ಪಾಳಯಕ್ಕೆ ಮತ್ತೊಂದು ಆಘಾತ
- ಕ್ಯಾ. ಅಮರಿಂದರ್ ಸಿಂಗ್ ಅವರ ಆಪ್ತ ರಾಣಾ ಗುರುಮೀತ್ ಸಿಂಗ್ ಸೋಧಿ ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆ
- ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ರಾಣಾ ಗುರುಮೀತ್ ಸಿಂಗ್ ಸೋಧಿ
“ಪಂಜಾಬಿನ ಕಾಂಗ್ರೆಸ್ ಸರಕಾರ ಹಾಗೂ ಪಕ್ಷದಲ್ಲಿನ ಅಸ್ಥಿರತೆಯಿಂದ ರಾಜ್ಯದ ಆಂತರಿಕ ಭದ್ರತೆ ಮತ್ತು ಕೋಮು ಸೌಹಾರ್ದತೆ ಅಪಾಯದ ಅಂಚಿಗೆ ದೂಡಲ್ಪಟ್ಟಿದೆ,” ಎಂದು ರಾಣಾ ಗುರುಮೀತ್ ಸಿಂಗ್ ಸೋಧಿ ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ಗೆ ರಾಜೀನಾಮೆ ಸಂಬಂಧ ತಾವು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿರುವ ರಾಜೀನಾಮೆ ಪತ್ರದ ಫೋಟೋವನ್ನು ರಾಣಾ ಗುರುಮೀತ್ ಸಿಂಗ್ ಸೋಧಿ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಮಲ ಪಾಳಯ ಸೇರ್ಪಡೆ ಬಳಿಕ ಪ್ರತಿಕ್ರಿಯಿಸಿದ ರಾಣಾ ಗುರುಮೀತ್ ಸಿಂಗ್ ಸೋಧಿ , ”ಪಂಜಾಬ್ ರಾಜ್ಯವನ್ನು ಉಸಿರಾಡದಂತೆ ಅಸಹಾಯಕ ಪರಿಸ್ಥಿತಿಗೆ ಕಾಂಗ್ರೆಸ್ ಆಡಳಿತ ದೂಡುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನೆ ಕೂರಲಾಗದು. ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್ನ ಹೈಕಮಾಂಡ್ ಪಂಜಾಬ್ ಮಾದರಿಯ ಗಡಿ ರಾಜ್ಯವನ್ನು ನಾಶಪಡಿಸುತ್ತಿದೆ. ಹಾಗಾಗಿ ಪಕ್ಷ ತೊರೆದು, ಕಾಂಗ್ರೆಸ್ನ ಎಲ್ಲ ಜವಾಬ್ದಾರಿಗಳನ್ನು ಹಿಂದಿರುಗಿಸಿದ್ದೇನೆ,” ಎಂದಿದ್ದಾರೆ.
ಕಳೆದ 40 ವರ್ಷಗಳಿಂದ ಕಾಂಗ್ರೆಸ್ನಲ್ಲಿ ಹಲವು ಜವಾಬ್ದಾರಿಗಳನ್ನು ರಾಣಾ ಗುರುಮೀತ್ ಸಿಂಗ್ ಸೋಧಿ ಅವರು ನಿಭಾಯಿಸಿದ್ದಾರೆ. ಪಂಜಾಬ್ ಲೋಕ ಕಾಂಗ್ರೆಸ್ ಎಂಬ ಹೊಸ ಪಕ್ಷ ಸ್ಥಾಪಿಸಿರುವ ಮಾಜಿ ಸಿಎಂ ಕ್ಯಾ. ಅಮರಿಂದರ್ ಸಿಂಗ್ ಅವರು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಯಾ. ಸಿಂಗ್ ಅವರ ಮತ್ತಷ್ಟು ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.