Karnataka news paper

ಪ್ರತಿಪಕ್ಷಗಳ ವಿರೋಧದ ನಡುವೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ, ನಾಳೆ ಚರ್ಚೆಗೆ ಅವಕಾಶ


Source : The New Indian Express

ಬೆಳಗಾವಿ: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ರಾಜ್ಯ ಸರ್ಕಾರ ಮಂಗಳವಾರ ತರಾತುರಿಯಲ್ಲಿ ವಿಧಾನಸಭೆಯಲ್ಲಿ ಮಂಡಿಸಿದೆ.

ಇಂದು ಮಧ್ಯಾಹ್ನ ಊಟದ ನಂತರ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಿದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಇದನ್ನು ಓದಿ: ಬೆಳಗಾವಿ ಅಧಿವೇಶನದಲ್ಲೇ ಮತಾಂತರ ನಿಷೇಧ ಮಸೂದೆ ಮಂಡನೆಗೆ ಸಚಿವ ಸಂಪುಟ ಅಸ್ತು​

ತಮಗೆ ಮತಾಂತರ ನಿಷೇಧ ವಿಧೇಯಕದ ಪ್ರತಿ ಕೊಟ್ಟಿಲ್ಲ ಮತ್ತು ಚರ್ಚೆ ಮಾಡಿಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇಂಥ ವಿಧೇಯಕಗಳನ್ನು ಕದ್ದುಮುಚ್ಚಿ ಏಕೆ ಮಂಡಿಸುತ್ತೀರಿ? ಸರ್ಕಾರ ಕಳ್ಳತನದಿಂದ ವಿಧೇಯಕ ಮಂಡಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದು ತಾರತಮ್ಯ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಅಧಿವೇಶನದ ದ್ವಿತೀಯಾರ್ಧಕ್ಕೆ ವಿಧಾನಸಭೆಯ ಎಲ್ಲ ಸದಸ್ಯರು ಸಭಾಂಗಣ ಪ್ರವೇಶಿಸುವ ಮುನ್ನವೇ ವಿಧೇಯಕ ಮಂಡನೆಗೆ ಸ್ಪೀಕರ್ ಅವಕಾಶ ನೀಡಿರುವುದು ಸರಿಯಲ್ಲ. ಎಲ್ಲ ಸದಸ್ಯರು ಸಭಾಂಗಣ ಪ್ರವೇಶಿಸುವವರೆಗೆ ಸ್ಪೀಕರ್ ಏಕೆ ಕಾಯಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಕರ್ನಾಟಕದ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ – 2021ನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ, ಚರ್ಚೆ ಮಾಡೋಣ. ನಾವು ಈಗಾಗಲೇ ಈ ಬಗ್ಗೆ ಹೇಳಿದ್ದೆವು ಎಂದು ಬಿಎಸ್ ವೈ ತಿಳಿಸಿದರು. ಕದ್ದುಮುಚ್ಚಿ ಮಸೂದೆಯನ್ನು ಪ್ರಸ್ತಾಪ ಮಾಡೋದೇಕೆ ಎಂದು ಡಿ.ಕೆ.ಶಿವಕುಮಾರ್  ಪ್ರಶ್ನೆಮಾಡಿದರು.

ಈ ವೇಳೆ ಸಿಟ್ಟಾದ ಸಭಾಧ್ಯಕ್ಷರು, ಕದ್ದು ಮುಚ್ಚಿ ಯಾಕೆ ಎಂದು ಹೇಳ್ತೀರಾ?  ಪೂರಕ ಕಾರ್ಯಸೂಚಿ ಹಾಕಿದ್ದೇವೆ. ಕದ್ದು ಮುಚ್ಚಿ ಮಾಡುವ ಪ್ರಶ್ನಯೇ ಇಲ್ಲ. ನಿಮ್ಮ ವಿರೋಧ ಇದ್ದರೆ; ನೀವು ಚರ್ಚೆ ಮಾಡಿ. ಸರ್ಕಾರ ಕಳ್ಳತನದಿಂದ ಮಾಡುತ್ತಿಲ್ಲ ಎಂದ ಸಭಾಧ್ಯಕ್ಷರು, ಎಲ್ಲರ ಟೇಬಲ್ ಮೇಲೆ ಬಿಲ್ ನ ಕಾಪಿ ಇದೆ. ಕದ್ದುಮುಚ್ಚಿ ಎಂಬ ಮಾತನ್ನು ಡಿ.ಕೆ.ಶಿವಕುಮಾರ್ ಹಿಂದಕ್ಕೆ ಪಡೆಯಬೇಕು ಎಂದು ಹೇಳಿದರು.

ಯಾಕೆ ಈ ಬಿಲ್ ಅನ್ನು ಬೆಳಗ್ಗೆ ಪ್ರಸ್ತಾಪ ಮಾಡಲಿಲ್ಲ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಕಾಗೇರಿ, ನಿನ್ನೆ ರಾತ್ರಿ ಕಾರ್ಯಸೂಚಿಯನ್ನು ಸಿದ್ಧಪಡಿಸುವಾಗ ಈ ಬಿಲ್ ಇನ್ನು ಪ್ರಿಂಟ್ ಆಗಿರಲಿಲ್ಲ. ಮುಂಜಾನೆ ಇದು ಪ್ರಿಂಟ್ ಆಗಿತ್ತು. ಅಲ್ಲದೆ, ಸರ್ಕಾರ ಸದನದಲ್ಲಿ ಬಿಲ್ ಅನ್ನು ಪ್ರಸ್ತಾಪಿಸಲು ಹೇಳಿದರು. ಅದರಂತೆ ಈಗ ಮಂಡನೆ ಮಾಡಲಾಗಿದೆ. ಈ ವಿಧೇಯಕವನ್ನು ಮಂಡಿಸಿರುವ ವಿಷಯದಲ್ಲಿ ನಿಮ್ಮದೆಯಾದ ಅಭಿಪ್ರಾಯವನ್ನು ಸದನದಲ್ಲಿ ವ್ಯಕ್ತಪಡಿಸಿದ್ದೀರಿ. ನಾನು ನಿಯಮಾವಳಿ ಪ್ರಕಾರ, ಈ ವಿಧೇಯಕವನ್ನು ಮಂಡಿಸಿದ್ದೇನೆ. ನಾಳೆ ಇದನ್ನು ಚರ್ಚೆಗೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು..

ಈ ಬಿಲ್ ಅನ್ನು ವಿಧಾನಸಭೆಯಲ್ಲಿ ಮಂಡಿಸುವ ಮೂಲಕ ಆರ್ಟಿಕಲ್ 25ರ ಉಲ್ಲಂಘನೆಯಾಗಿದೆ. ಇಂತಹ ಜನವಿರೋಧಿ ಕಾನೂನುಗಳನ್ನು ತಂದು ಪಾಸು ಮಾಡುವುದು ಸರಿಯಲ್ಲ. ಈ ರೀತಿ ನಡೆಯೋದಕ್ಕೆ ನಾವು ಒಪ್ಪಿಕೊಳ್ಳಲು ತಯಾರಿ ಇಲ್ಲ. ಮಸೂದೆಯ ಪ್ರಸ್ತಾವನೆಗೆ ತಮ್ಮ ವಿರೋಧ ಇದೆ. ಇಂಥ ಕೆಟ್ಟ ಸರ್ಕಾರ, ಕರ್ನಾಟಕ ಇತಿಹಾಸದಲ್ಲಿ ಬಂದಿರಲಿಲ್ಲ. ನಾಳೆ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡೋಣ ಅಂತಾ ಹೇಳಿದ್ದೀರಿ. ಈಗ ನೋಡಿದ್ರೆ ಈ ಬಿಲ್ ಅನ್ನು ಮಂಡಿಸಿ ನಾಳೆ ಚರ್ಚೆ ಮಾಡೋಣ ಅಂತಾ ಹೇಳುತ್ತಿದ್ದೀರಿ. ಇದು ಹೇಗೆ ಎಂದು ಪ್ರಶ್ನೆ ಮಾಡಿದರು.

ಈ ವೇಳೆ ಮಾತನಾಡಿದ ಸಭಾಧ್ಯಕ್ಷ, ಸದಸ್ಯರಿಗೆಲ್ಲರಿಗೂ ಚರ್ಚೆಗೆ ಅನಕೂಲವಾಗಲಿ ಎಂದು ಇವತ್ತು ಬಿಲ್ಲನ್ನು ಮಂಡಿಸಿದ್ದೇನೆ. ಆ ಬಿಲ್ ಕಾಪಿ ನಿಮ್ಗೆ ಇವತ್ತೇ ಕೊಟ್ಟಿದ್ದರಿಂದ ನಾಳೆ ನಿಮ್ಮ ಚರ್ಚೆಗೆ ಅನುಕೂಲವಾಗಲಿದೆ ಎಂದು ಹೇಳಿದರು. ಇದನ್ನು ಸದಸ್ಯರು ಅರ್ಥ ಮಾಡಿಕೊಳ್ಳಬೇಕು. ಕರ್ನಾಟಕದ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ – 2021 ರ ಬಿಲ್ ಅನ್ನು ಡಿ.ಕೆ.ಶಿವಕುಮಾರ್ ಅವರು ಹರಿದು ಹಾಕಿದ್ದು ಸದನದಿಂದ ಸರಿಯಾದ ಸಂದೇಶ ಅಲ್ಲ ಎಂದ ಸಭಾಧ್ಯಕ್ಷರು,  ವಿರೋಧ ಪಕ್ಷದ ಸಚೇತಕರನ್ನು ಕರೆದು ಈ ರೀತಿ ಅಜೆಂಡ್ ರೆಡಿ ಮಾಡಲಾಗಿದೆ. ನಿಮ್ಮ ನಾಯಕರ ಗಮನಕ್ಕೂ ತನ್ನಿ ಎಂದು ತಿಳಿಸಿದ್ದೆ. ಹೀಗಾಗಿ, ನಾಳೆ ಈ ಬಗ್ಗೆ ಚರ್ಚೆ ಮಾಡಲು ಅವಕಾಶ ಕೊಡುತ್ತೇನೆ. ಒಂದು ದಿನ ಮೊದಲೇ  ನಿಮ್ಮ ಕೈಗೆ ಮಸೂದೆ ಸಿಗುವ ಹಾಗೆ ಮಾಡಿದ್ದೇನೆ. ನೀವು ನನ್ನನ್ನು ಅಭಿನಂದಿಸಬೇಕು ಎಂದು ಸಭಾಧ್ಯಕ್ಷರು ಹೇಳಿದರು.

ಮತ್ತೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಈ ಸರ್ಕಾರ ಸಂವಿಧಾನದ ಪ್ರಕಾರ ನಡೆಯುತ್ತಿಲ್ಲ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದೀರಿ ಎಂದು ಜರಿದರು. ಈ ವೇಳೆ ಸಚಿವ ಕೆ.ಎಸ್.ಈಶ್ವರಪ್ಪ, ಸಭಾಧ್ಯಕ್ಷರು ರೂಲಿಂಗ್ ಕೊಟ್ಟ ಮೇಲೆ ಮತ್ತೆ ವಿಪಕ್ಷದ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಾಶ ಆಗಿದೆ ಎಂದು ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈಶ್ವರಪ್ಪ ಅವರ ಇಸ್ಲಾಂ, ಕ್ರಿಶ್ಚಿಯನ್ ಮತಾಂತರದ ಬಗ್ಗೆ ಲಘುವಾಗಿ ಮಾತನಾಡಿದ್ದನ್ನು ಖಂಡಿಸಿದರು. ಈ ಶಬ್ದಗಳು ಕಡತಕ್ಕೆ ಹೋಗಬಾರದು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು.



Read more