Karnataka news paper

ಕೋವಿಡ್ ಲಸಿಕೆ: ರಾಜ್ಯದಲ್ಲಿ 8 ಕೋಟಿ ಡೋಸ್‌ ವಿತರಣೆ


ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆಯ 3.33 ಲಕ್ಷ ಡೋಸ್‌ಗಳನ್ನು ಶನಿವಾರ ವಿತರಿಸಲಾಗಿದೆ. ಇದರೊಂದಿಗೆ ಈವರೆಗೆ ರಾಜ್ಯದಲ್ಲಿ ನೀಡಲಾದ ಒಟ್ಟು ಡೋಸ್‌ಗಳ ಸಂಖ್ಯೆ 8 ಕೋಟಿಯ ಗಡಿ ದಾಟಿದೆ. 

4.64 ಕೋಟಿ ಮಂದಿ ಲಸಿಕೆಯ ಮೊದಲ ಡೋಸ್ ಹಾಗೂ 3.37 ಕೋಟಿ ಮಂದಿ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಈ ವರ್ಷದ ಅಂತ್ಯದೊಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡು ಡೋಸ್ ಲಸಿಕೆ ವಿತರಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. 

‘ರಾಜ್ಯವು ಕೋವಿಡ್ ಲಸಿಕೆ ವಿತರಣೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಮೊದಲ ಡೋಸ್ ನೀಡುವಿಕೆಯಲ್ಲಿ ರಾಜ್ಯವು ದೇಶಕ್ಕೇ ಮೊದಲ ಸ್ಥಾನದಲ್ಲಿದೆ. ಎರಡನೇ ಡೋಸ್ ವಿತರಣೆಯಲ್ಲಿ ಮೂರನೇ ಸ್ಥಾನದಲ್ಲಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ. 

2021ರ ಜ.16ರಂದು ರಾಜ್ಯದಲ್ಲಿ ಲಸಿಕಾ ಅಭಿಯಾನ ಪ್ರಾರಂಭವಾಗಿದೆ. ಒಂದು ತಿಂಗಳಿನಿಂದ ಈಚೆಗೆ ದಿನವೊಂದಕ್ಕೆ ಸರಾಸರಿ 4 ಲಕ್ಷ ಡೋಸ್‌ಗಳನ್ನು ನೀಡಲಾಗುತ್ತಿದೆ.

18 ರಿಂದ 44 ವರ್ಷದೊಳಗಿನವರಲ್ಲಿ 2.65 ಕೋಟಿ ಮಂದಿ ಮೊದಲ ಡೋಸ್ ಹಾಗೂ 1.76 ಕೋಟಿ ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 45 ವರ್ಷ ಮೇಲ್ಪಟ್ಟವರಲ್ಲಿ 1.81 ಕೋಟಿ ಮಂದಿ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ಅವರಲ್ಲಿ 1.44 ಕೋಟಿ ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.

ಆರೋಗ್ಯ ಕಾರ್ಯಕರ್ತರಲ್ಲಿ 7.64 ಲಕ್ಷ ಹಾಗೂ ಕೋವಿಡ್ ಮುಂಚೂಣಿ ಯೋಧರಲ್ಲಿ 9.43 ಲಕ್ಷ ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಇವರಲ್ಲಿ ಕ್ರಮವಾಗಿ 7.11 ಲಕ್ಷ ಮಂದಿ ಹಾಗೂ 8.79 ಲಕ್ಷ ಮಂದಿ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.



Read more from source