Karnataka news paper

ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಮತದಾನ ಪ್ರಗತಿಯಲ್ಲಿ: ಏಕೈಕ ಮಹಿಳಾ ಅಭ್ಯರ್ಥಿ, ಡಿ.14ಕ್ಕೆ ಫಲಿತಾಂಶ


Source : The New Indian Express

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಇಂದು ಶುಕ್ರವಾರ (ಡಿ.10) ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದೆ. ಸಾಯಂಕಾಲ 4 ಗಂಟೆಯವರೆಗೆ ಮತದಾನ ಮುಂದುವರಿಯಲಿದೆ.

ಆಯಾ ಕ್ಷೇತ್ರಗಳ ಶಾಸಕರು, ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು, ಪಟ್ಟಣ ಪಂಚಾಯತ್, ನಗರಸಭೆ,ಗ್ರಾಮ ಪಂಚಾಯತ್ ಸದಸ್ಯರು ಇಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.

ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಇಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಜೆಡಿಎಸ್ 6 ಕಡೆಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಈ ಬಾರಿ ಚುನಾವಣಾ ಕಣದಲ್ಲಿ 90 ಅಭ್ಯರ್ಥಿಗಳಿದ್ದಾರೆ. ಚಿಕ್ಕಮಗಳೂರಿನ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ. 

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ರಾಜಕೀಯ ಪಕ್ಷಗಳ ‘ಫ್ರೆಂಡ್ಲಿ ಡೀಲ್ಸ್’!

ಗ್ರಾಮ ಪಂಚಾಯ್ತಿ ಸದಸ್ಯರು ಮತ ಚಲಾಯಿಸಲು ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರು, ಬೆಳಗಾವಿ, ಮೈಸೂರು, ಕೋಲಾರ, ತುಮಕೂರು, ಹಾಸನ, ಯಾದಗಿರಿ, ಉಡುಪಿ, ರಾಯಚೂರು, ಮಂಡ್ಯ, ಮಂಗಳೂರು, ಕೋಲಾರ, ವಿಜಯಪುರ ಸೇರಿ ಎಲ್ಲೆಡೆ ಮತದಾನ ನಡೆಯುತ್ತಿದೆ.  

ಡಿಸೆಂಬರ್ 14ಕ್ಕೆ ಫಲಿತಾಂಶ: ಡಿಸೆಂಬರ್ 14, ಮಂಗಳವಾರ ಮತ ಎಣಿಕೆ ಕಾರ್ಯ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ. 

ಕೋವಿಡ್ ಮಾರ್ಗಸೂಚಿ: ಕೋವಿಡ್ ಆತಂಕದ ಮಧ್ಯೆ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ. ಮಾಸ್ಕ್, ಸ್ಯಾನಿಟೈಸ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ.

ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆಯಿಲ್ಲ; 2023ರ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ: ಎಚ್.ಡಿ ಕೆ

ಮತ ಕೇಂದ್ರಗಳ ಸುತ್ತ 200 ಮೀ ನಿಷೇಧಾಜ್ಞೆ ಜಾರಿ‌ ಮಾಡಲಾಗಿದೆ. ಎರಡು ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಐದು ಜನರಿಗಿಂತ ಹೆಚ್ಚು ಗುಂಪು‌ಗೂಡುವಂತಿಲ್ಲ ಎಂದು ಚುನಾವಣಾ ಆಯೋಗದ ನೀತಿ ಸಂಹಿತೆಯಿದೆ. 

ರಾಜ್ಯದ ಜಿಲ್ಲೆಗಳಿಂದ ಮತದಾನದ ವರದಿಗಳು ಬರುತ್ತಿವೆ. ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ್ ಮತ್ತು ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಅವರು ಕಲಬುರಗಿ-ಯಾದಗಿರಿ ಸ್ಥಳೀಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಶುಕ್ರವಾರ ಕಲಬುರಗಿಯ ಮತಗಟ್ಟೆ ಸಂಖ್ಯೆ 190 ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಚಿತ್ರದುರ್ಗ, ದಾವಣಗೆರೆ, ಉಡುಪಿ, ಧಾರವಾಡ ಜಿಲ್ಲೆಗಳಲ್ಲಿ ಮತಗಟ್ಟಗಳಲ್ಲಿ ಮತ ಚಲಾವಣೆ ಮುಂದುವರಿದಿದೆ. ವಿಜಯಪುರದ ಜುಮನಾಳ್ ಗ್ರಾಮದ ಪಂಚಾಯತ್ ಕಚೇರಿಯಲ್ಲಿ ಚುನಾವಣಾಧಿಕಾರಿಗಳು ಮಾಸ್ಕ್ ಧರಿಸದೆ ಕುಳಿತುಕೊಂಡಿರುವುದು ಕಂಡುಬಂತು. ಮತದಾನದ ಮೊದಲ ಗಂಟೆಯಲ್ಲಿ ಅಷ್ಟೇನೂ ಮತದಾರರು ತಮ್ಮ ಹಕ್ಕು ಚಲಾಯಿಸಲು ಮುಂದಾಗಿಲ್ಲದಿರುವುದು ಇಲ್ಲಿ ಕಾಣಿಸಿತು. 

ಮಂಗಳೂರು ನಗರ ಪಾಲಿಕೆಯಲ್ಲಿ ಕಾರ್ಪೊರೇಟರ್ ಗಳು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ಹೀಗೆ: 





Read more