ಹೈಲೈಟ್ಸ್:
- ಜನವರಿ 7ರಂದು ಅದ್ದೂರಿಯಾಗಿ ತೆರೆಗೆ ಬರಲಿರುವ ‘ಆರ್ಆರ್ಆರ್’
- ಪ್ರಭಾಸ್ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ‘ರಾಧೆ ಶ್ಯಾಮ್’
- ತೆಲುಗು ನಿರ್ಮಾಪಕರ ಹೊಂದಾಣಿಕೆಗೆ ಎಲ್ಲರ ಮೆಚ್ಚುಗೆ
ಆರ್ಆರ್ಆರ್ & ರಾಧೆ ಶ್ಯಾಮ್ಗೆ ಇಲ್ಲ ಪೈಪೋಟಿ
‘ಆರ್ಆರ್ಆರ್’ ಮತ್ತು ‘ರಾಧೆ ಶ್ಯಾಮ್’ ಪ್ಯಾನ್ ಇಂಡಿಯಾ ಸಿನಿಮಾಗಳಾಗಿದ್ದು, ಮೂರು ವರ್ಷಗಳಿಂದ ಕೆಲಸಗಳು ಸಾಗುತ್ತಿವೆ. ನೂರಾರು ಬಜೆಟ್ ಹೂಡಿಕೆ ಆಗಿದೆ. ಇದೀಗ ಈ ಸಿನಿಮಾಗಳ ಜೊತೆಗೆ ತಮ್ಮ ಸಿನಿಮಾಗಳನ್ನು ತೆರೆಗೆ ತರಲು ಪವನ್ ಕಲ್ಯಾಣ್ ಅವರ ‘ಭೀಮ್ಲಾ ನಾಯಕ್’ ಮತ್ತು ಮಹೇಶ್ ಬಾಬು ಅವರ ‘ಸರ್ಕಾರು ವಾರಿ ಪಾಟ’ ಸಿನಿಮಾಗಳ ನಿರ್ಮಾಪಕರು ನಿರ್ಧಾರ ಮಾಡಿದ್ದರು. ಆದರೆ ಮಹೇಶ್ ಬಾಬು, ಜೂ. ಎನ್ಟಿಆರ್, ರಾಮ್ ಚರಣ್, ಪವನ್ ಕಲ್ಯಾಣ್ ಅವರಂತಹ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಒಂದೇ ವಾರದ ಅಂತರದಲ್ಲಿ ತೆರೆಕಂಡರೆ ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಷ್ ಆಗೋದು ಖಚಿತ. ಅದರಲ್ಲೂ ಪವನ್ಗೆ ದೊಡ್ಡಮಟ್ಟದ ಫ್ಯಾನ್ಸ್ ಇದ್ದಾರೆ. ಇದರಿಂದ ಪ್ಯಾನ್ ಇಂಡಿಯಾ ಸಿನಿಮಾಗಳ ಕಲೆಕ್ಷನ್ಗೆ ಹೊಡೆತ ಬೀಳುತ್ತಿತ್ತು. ಆ ಹಿನ್ನೆಲೆಯಲ್ಲಿ ‘ಭೀಮ್ಲಾ ನಾಯಕ್’ ಮತ್ತು ‘ಸರ್ಕಾರು ವಾರಿ ಪಾಟ’ ಸಿನಿಮಾಗಳ ನಿರ್ಮಾಪಕರು ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ಫೆ.25ಕ್ಕೆ ಭೀಮ್ಲಾ ನಾಯಕ್; ಏ.1ಕ್ಕೆ ಸರ್ಕಾರು ವಾರಿ ಪಾಟ
‘ಸರ್ಕಾರು ವಾರಿ ಪಾಟ’ ಸಿನಿಮಾವನ್ನು ಈ ಹಿಂದೆಯೇ ಏ.1ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ‘ಭೀಮ್ಲಾ ನಾಯಕ್’ ತಂಡದವರು ಕೂಡ ತಮ್ಮ ಸಿನಿಮಾವನ್ನು ಫೆ.25ಕ್ಕೆ ಮುಂದೂಡಿಕೆ ಮಾಡಿ, ‘ಆರ್ಆರ್ಆರ್’ ಮತ್ತು ‘ರಾಧೆ ಶ್ಯಾಮ್’ ಸಿನಿಮಾಗಳ ಜೊತೆಗೆ ಆಗುತ್ತಿದ್ದ ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಷ್ ಆಗೋದನ್ನು ತಪ್ಪಿಸಿದ್ದಾರೆ. ಜೊತೆಗೆ ವಿಕ್ಟರಿ ವೆಂಕಟೇಶ್ ಮತ್ತು ವರುಣ್ ತೇಜ್ ನಟನೆಯ ‘ಎಫ್ 3’ ಕೂಡ ಏ.29ಕ್ಕೆ ತೆರೆಗೆ ಬರಲಿದೆ. ಇನ್ನು, ‘ಆರ್ಆರ್ಆರ್’ ಮತ್ತು ‘ರಾಧೆ ಶ್ಯಾಮ್’ ನಿರ್ಮಾಪಕರು ‘ಭೀಮ್ಲಾ ನಾಯಕ್’ ತಂಡಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ, ಈ ಬದಲಾವಣೆ ಆಗಿದೆ.
ಧನ್ಯವಾದ ತಿಳಿಸಿದ ರಾಜಮೌಳಿ
‘ಪೊಂಗಲ್ ಸಮಯದಲ್ಲಿ ಉಂಟಾಗುತ್ತಿದ್ದ ಬಾಕ್ಸ್ ಆಫೀಸ್ ಕ್ಲ್ಯಾಷ್ ತಪ್ಪಿಸಲು ಮುಂದಾಗಿದ್ದು ಮಹೇಶ್ ಬಾಬು. ಹಾಗೇ ನೋಡಿದ್ರೆ, ಪೊಂಗಲ್ಗೆ ‘ಸರ್ಕಾರು ವಾರಿ ಪಾಟ’ ಒಂದು ಪರಿಪೂರ್ಣವಾದ ಸಿನಿಮಾವಾಗಿತ್ತು. ಆದರೆ, ತಮ್ಮ ಸಿನಿಮಾವನ್ನು ಬೇಸಿಗೆಯಲ್ಲಿ ರಿಲೀಸ್ ಮಾಡುವ ನಿರ್ಧಾರ ಮಾಡಿ, ಒಂದು ಆರೋಗ್ಯಕರ ಬೆಳವಣಿಗೆ ಸೃಷ್ಟಿಸಿದರು ಮಹೇಶ್. ಹಾಗಾಗಿ, ತನ್ನ ಹೀರೋಗೆ ಮತ್ತು ಇಡೀ ಮೈತ್ರಿ ಮೂವೀ ಮೇಕರ್ಸ್ ಬಳಗಕ್ಕೆ ಧನ್ಯವಾದಗಳು. ‘ಎಫ್3’ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಕ್ಕಾಗಿ ದಿಲ್ ರಾಜು ಮತ್ತು ತಂಡಕ್ಕೂ ಧನ್ಯವಾದಗಳು. ‘ಭೀಮ್ಲಾ ನಾಯಕ್’ ಸಿನಿಮಾವನ್ನು ಮುಂದೂಡಿದ್ದಕ್ಕಾಗಿ ಚಿನ್ನಬಾಬು ಮತ್ತು ಪವನ್ ಕಲ್ಯಾಣ್ ಅವರಿಗೂ ಧನ್ಯವಾದಗಳು’ ಎಂದಿದ್ದಾರೆ ರಾಜಮೌಳಿ. ಹಾಗೆಯೇ, ‘ರಾಧೆ ಶ್ಯಾಮ್’ ಸಿನಿಮಾದ ಕಡೆಯಿಂದಲೂ ಧನ್ಯವಾದಗಳನ್ನು ‘ಭೀಮ್ಲಾ ನಾಯಕ್’ ತಂಡಕ್ಕೆ ತಿಳಿಸಿದ್ದಾರೆ.