Karnataka news paper

ನ್ಯೂಜಿಲೆಂಡ್: ಕೋವಿಡ್ ಚಿಕಿತ್ಸೆಗೆ ಪರಿಣಾಮಕಾರಿ ‘ರೊನಾಪ್ರೀವ್’ ಔಷಧ ಅನುಮೋದನೆ


ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಔಷಧ ನಿಯಂತ್ರಕವು ಮಂಗಳವಾರ ಕೋವಿಡ್ -19 ಚಿಕಿತ್ಸೆಗೆ ಹೊಸ ಔಷಧ ‘ರೊನಾಪ್ರೀವ್’ ಅನ್ನು ಅನುಮೋದಿಸಿದೆ. ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಬಹುದಾಗಿದ್ದು, ಇದು ಲಸಿಕೆಗೆ ಪರ್ಯಾಯವಲ್ಲ ಎಂದು ಅದು ಹೇಳಿದೆ.

ಆದರೆ, ಓಮೈಕ್ರಾನ್ ರೂಪಾಂತರದ ವಿರುದ್ಧ ಈ ಔಷಧದ ಪರಿಣಾಮಕಾರಿತ್ವವನ್ನು ಇನ್ನಷ್ಟೇ ಪರೀಕ್ಷಿಸಬೇಕಿದೆ. 

ರೊನಾಪ್ರೀವ್ ಒಂದು ಮೊನೊಕ್ಲೋನಲ್ ಪ್ರತಿಕಾಯ ಔಷಧವಾಗಿದ್ದು, ಇದು ರೋಗದ ವಿರುದ್ಧ ಹೋರಾಡಲು ದೇಹದ ರಕ್ಷಣಾ ವ್ಯವಸ್ಥೆಯನ್ನು ಅನುಕರಿಸುತ್ತದೆ ಎಂದು ನ್ಯೂಜಿಲೆಂಡ್‌ನ ಆರೋಗ್ಯ ಸಚಿವಾಲಯದ ಔಷಧ ನಿಯಂತ್ರಣ ಸಂಸ್ಥೆ ಮೆಡ್‌ಸೇಫ್‌ನ ಗುಂಪು ವ್ಯವಸ್ಥಾಪಕ ಕ್ರಿಸ್ ಜೇಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಔಷಧದಿಂದ ಗಮನಾರ್ಹ ಬದಲಾವಣೆ ಕಂಡು ಬಂದಿದೆ. ಕೋವಿಡ್ ಸೋಂಕಿತರಲ್ಲಿ ರೋಗದ ತೀವ್ರತೆ ಕಡಿಮೆ ಮಾಡುವ ಮೂಲಕ ರೋಗಿಗಳು ಆಸ್ಪತ್ತ್ರೆಗೆ ದಾಖಲಾಗುವ ಸಾಧ್ಯತೆಯನ್ನು ತಪ್ಪಿಸುತ್ತಿದೆ. ರೋಗಲಕ್ಷಣಗಳು ಮತ್ತು ರೋಗದ ಅವಧಿಯನ್ನು ಕಡಿಮೆ ಮಾಡುತ್ತದೆ. ಇದು ಬೇರೆಯವರಿಗೆ ವೈರಸ್ ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಜೇಮ್ಸ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಕ್ಸಿನ್ಯೂ ವರದಿ ಮಾಡಿದೆ.

ಕೋವಿಡ್‌ನಿಂದ ಗಂಭೀರ ಸ್ಥಿತಿಗೆ ತಲುಪಿರುವವರು ಮತ್ತು ರೋಗ ಉಲ್ಬಣದ ಸಮಸ್ಯೆ ಇರುವವರ ಚಿಕಿತ್ಸೆಗೆ ಬಳಸಲು ಈ ಔಷಧಕ್ಕೆ ಅನುಮೋದನೆ ನೀಡಲಾಗಿದೆ. 
 
ವೈರಸ್‌ಗೆ ಒಡ್ಡಿಕೊಂಡ ಮತ್ತು ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ ಜನರಿಗೆ ಕೋವಿಡ್ -19 ಹರಡದಂತೆ ತಡೆಗಟ್ಟಲು ಔಷಧವನ್ನು ಬಳಸಬಹುದಾಗಿದೆ.

ಈ ವರ್ಗದಲ್ಲಿ ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವ ಕ್ಯಾನ್ಸರ್, ಅಂಗಾಂಗ ಕಸಿ ಚಿಕಿತ್ಸೆ ಮತ್ತು ರೋಗ ನಿರೋಧಕ ಶಕ್ತಿ ಕುಂದುವಿಕೆಯಂತಹ ಸಮಸ್ಯೆ ಇರುವ ಜನರು ಸೇರಿದ್ದಾರೆ. ಈ ಜನರು ಬಹು ಬೇಗ ಸೋಂಕಿಗೆ ಒಳಗಾಗುವ ಸಾಧ್ಯತೆ ಇದ್ದು, ಲಸಿಕೆಯೂ ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಜೇಮ್ಸ್ ಹೇಳಿದ್ದಾರೆ.

ಇಂದು ಮಾಡಲಾದ ಹೊಸ ಔಷಧದ ಘೋಷಣೆಯು, ಆರೋಗ್ಯ ಸಿಬ್ಬಂದಿಗೆ ಹೊಸ ಚಿಕಿತ್ಸಾ ಸಲಕರಣೆ ಒದಗಿಸುವ ಜೊತೆಗೆ ಆಸ್ಪತ್ರೆಗಳ ಮೇಲಿನ ಒತ್ತಡವನ್ನೂ ತಗ್ಗಿಸಲು ನೆರವಾಗಿದೆ ಎಂದು ಅವರು ಹೇಳಿದ್ದಾರೆ.

ರೊನಾಪ್ರೀವ್ ಔಷಧವು ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ ಎಂದು ಪ್ರಯೋಗದಲ್ಲಿ ತಿಳಿದುಬಂದಿದ್ದು, ಹೊಸ ರೂಪಾಂತರ ತಳಿ ಓಮೈಕ್ರಾನ್ ವಿರುದ್ಧ ಇದರ ಪರಿಣಾಮಕತ್ವದ ಬಗ್ಗೆ ಸಂಶೋಧಕರು ಪರಶೀಲನೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಔಷಧದ ಕುರಿತಂತೆ ಮೆಡ್‌ಸೇಫ್ ಹೆಚ್ಚಿನ ಮಾಹಿತಿ ನೀಡುತ್ತದೆ ಎಂದು ಅವರು ಹೇಳಿದ್ದಾರೆ.



Read more from source