ಹೈಲೈಟ್ಸ್:
- ಹಿಂದೂಗಳು ಮುಸ್ಲಿಮರಾಗಿ ಮತಾಂತರ ಆಗಿ ಭಾರತ ದೇಶ ಪಾಕಿಸ್ತಾನ ಆಗಬೇಕೇ?
- ಭಾರತವನ್ನು ಆ ರೀತಿ ಆಗಲು ನಾವು ಅವಕಾಶ ನೀಡುವುದಿಲ್ಲ
- ಸಂವಿಧಾನದ ಜೊತೆ ಅವರವರ ಧರ್ಮವನ್ನು ಉಳಿಸಿಕೊಳ್ಳಬೇಕು: ಸಚಿವ ಈಶ್ವರಪ್ಪ
ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗುತ್ತಿದ್ದಂತೆಯೇ ವಿಧೇಯಕವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಈಶ್ವರಪ್ಪ, ಮುಸಲ್ಮಾನರಿಗೆ ಹಾಗೂ ಕ್ರೈಸ್ತರಿಗೆ ತೃಪ್ತಿ ಪಡಿಸಲು ಕಾಂಗ್ರೆಸ್ ಪಕ್ಷ ಸಭಾತ್ಯಾಗ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಟ್ಟ ನಿರ್ಣಯದ ಮೂಲಕ ಕಾಂಗ್ರೆಸ್ ಸದಸ್ಯರು ರಾಜ್ಯಕ್ಕೆ ಅವಮಾನ ಮಾಡಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಬೇಡ, ಇವರಿಗೆ ಮತಾಂತರ ಬೇಕು. ಹಿಂದೂಗಳು ಮುಸ್ಲಿಮರಾಗಿ ಮತಾಂತರ ಆಗಿ ಭಾರತ ದೇಶ ಪಾಕಿಸ್ತಾನ ಆಗಬೇಕೇ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಭಾರತವನ್ನು ಆ ರೀತಿ ಆಗಲು ನಾವು ಅವಕಾಶ ನೀಡುವುದಿಲ್ಲ. ಸಂವಿಧಾನದ ಜೊತೆ ಅವರವರ ಧರ್ಮವನ್ನು ಉಳಿಸಿಕೊಳ್ಳಬೇಕು. ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ 24% ದಿಂದ 3% ಕ್ಕೆ ಬಂದಿದೆ ಎಂದು ಸಚಿವ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಈಶ್ವರಪ್ಪ ಮಾತಿಗೆ ಜೆಡಿಎಸ್ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಇಡೀ ಭಾರತ ದೇಶವನ್ನೇ ಬೇರೆ ಧರ್ಮಕ್ಕೆ ಮತಾಂತರ ಮಾಡುತ್ತಾರೆ ಅನ್ನೋ ಪದ ಒಪ್ಪಲು ಸಾಧ್ಯವಿಲ್ಲ ಎಂದರು.
ಇದಕ್ಕೆ ತಿರುಗೇಟು ನೀಡಿದ ಸಚಿವ ಕೆ. ಎಸ್. ಈಶ್ವರಪ್ಪ, ಏಕೆ ಹೀಗೆ ಕೇಳುತ್ತೀರಿ.. ಈ ರೀತಿ ಆಗುತ್ತಿಲ್ಲವೇ ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಆಗುತ್ತಿರಬಹುದು. ಆದ್ರೆ, ಅದಕ್ಕೆ ಕಾರಣ ಯಾರು? ಇದಕ್ಕೆಲ್ಲಾ ಕಾರಣ ನಾವು ಹಾಗೂ ನೀವು.. ಶೂದ್ರರನ್ನು ಬದುಕಲು ಬಿಡಲಿಲ್ಲ. ಹಿಂದೂ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ನಿಮಗೆ ದೇಶದ ಸಮಸ್ಯೆ ಬೇಕಿಲ್ಲ. ಜನ ಸಾಯುತ್ತಿದ್ದಾರೆ. ಅದಕ್ಕಿಂತ ದೊಡ್ಡದಾ ಇದು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ವಿಧೇಯಕ ಮಂಡನೆ ಆಗುತ್ತಿದ್ದಂತೆಯೇ ಪ್ರತಿಯನ್ನು ಹರಿದು ಹಾಕಿದ ಕಾಂಗ್ರೆಸ್ ಸದಸ್ಯರು, ಏಕಾಏಕಿ ವಿಧೇಯಕ ಮಂಡನೆ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದು ಜನ ವಿರೋಧಿ ಮಸೂದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಇಷ್ಟ ಬಂದಂತೆ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಕೆಟ್ಟ ಸರ್ಕಾರ ಕರ್ನಾಟಕದ ಇತಿಹಾಸದಲ್ಲಿ ಎಂದೂ ಬಂದಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕೂಡಾ ಮಸೂದೆ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು. ಕದ್ದು ಮುಚ್ಚಿ ವಿಧೇಯಕ ಮಂಡನೆ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳ್ಳತನದಿಂದ ವಿಧೇಯಕ ಮಂಡನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.