Karnataka news paper

ಅಂಡರ್‌ 19 ಏಷ್ಯಾ ಕಪ್‌ಗೆ ಯಂಗ್‌ ಇಂಡಿಯಾ ಪ್ರಕಟ, ಯಶ್‌ ನಾಯಕ!


ಹೈಲೈಟ್ಸ್‌:

  • ಯುಎಇ ಆತಿಥ್ಯದಲ್ಲಿ ಡಿ.23ರಿಂದ ಜ.1ರವರೆಗೆ ನಡೆಯಲಿರುವ ಕಿರಿಯರ ಏಷ್ಯಾ ಕಪ್‌ ಟೂರ್ನಿ
  • ಬಿಸಿಸಿಐ ಪ್ರಕಟ ಮಾಡಿದ ಯಂಗ್‌ ಇಂಡಿಯಾ ತಂಡಕ್ಕೆ ಯಶ್‌ ಧುಲ್‌ ನಾಯಕನಾಗಿ ನೇಮಕ.
  • ಕೋವಿಡ್‌-19 ಕಾರಣ ಐದು ಹೆಚ್ಚುವರಿ ಆಟಗಾರರನ್ನು ಕಾಯ್ದಿರಿಸಿದ ಪಟ್ಟಿಗೆ ಸೇರಿಸಲಾಗಿದೆ.

ಹೊಸದಿಲ್ಲಿ: 19 ವರ್ಷದೊಳಗಿನವರ ಎಷ್ಯಾ ಕಪ್‌ ಏಕದಿನ ಕ್ರಿಕೆಟ್‌ ಟೂರ್ನಿ ಸಲುವಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ. ಆಲ್‌ ಇಂಡಿಯಾ ಜೂನಿಯರ್‌ ಸೆಲೆಕ್ಷನ್‌ ಕಮಿಟಿ 20 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು, ಯಶ್‌ ಧುಲ್‌ ಅವರಿಗೆ ನಾಯಕನ ಪಟ್ಟ ನೀಡಿದೆ.

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಆತಿಥ್ಯದಲ್ಲಿ ಕಿರಿಯರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯು ಡಿಸೆಂಬರ್ 23ರಿಂದ ಜನವರಿ ಒಂದರವರೆಗೆ ನಡೆಯಲಿದ್ದು, ಕೊರೊನಾ ವೈರಸ್‌ ಮುನ್ನೆಚರಿಕೆಯಿಂದ ತಂಡಕ್ಕೆ 5 ಹೆಚ್ಚುವರಿ ಆಟಗಾರರು ಆಯ್ಕೆ ಮಾಡಿ ಕಾಯ್ದಿರಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಸೆಪ್ಟೆಂಬರ್‌ 28ರಿಂದ ಅಕ್ಟೋಬರ್‌ 18ರವರೆಗೆ ನಡೆದ 2021-22ರ ಸಾಲಿನ ವಿನೂ ಮಂಕಡ್‌ ಟ್ರೋಫಿ ಟೂರ್ನಿಯಲ್ಲಿ ಗರಿಷ್ಠ ರನ್‌ ಸ್ಕೋರ್‌ಗಳಲ್ಲಿ ಒಬ್ಬರಾದ ಯಶ್‌ ಧುಲ್‌ ಅವರಿಗೆ ಭಾರತ ತಂಡದ ನಾಯಕತ್ವ ನೀಡಲಾಗಿದೆ. ಟೂರ್ನಿಯಲ್ಲಿ ಡಿಡಿಸಿಎ ಪರ ಬ್ಯಾಟ್‌ ಬೀಸಿದ್ದ ಯಶ್‌, ಆಡಿದ 5 ಪಂದ್ಯಗಳಲ್ಲಿ 75.50ರ ಅದ್ಭುತ ಸರಾಸರಿಯಲ್ಲಿ 103.42 ಸ್ಟ್ರೈಕ್‌ರೇಟ್‌ನೊಂದಿಗೆ 302 ರನ್‌ಗಳನ್ನು ಬಾರಿಸಿದ್ದರು.

ಓಡಿಐ ನಾಯಕತ್ವದಿಂದ ಕೊಹ್ಲಿ ಕೆಳಗಿಳಿಸಿದ ನಿರ್ಧಾರ ಸರಿಯಿದೆ’: ಕೀರ್ತಿ ಅಜಾದ್‌!

ಇದರಲ್ಲಿ ತಲಾ ಶತಕ ಮತ್ತು ಅರ್ಧಶತಕದ ಸೇರಿದ್ದು, ಮೊಹಾಲಿಲ್ಲಿ ನಡೆದ ಛತ್ತೀಸ್‌ಗಡ ವಿರುದ್ಧದ ಪಂದ್ಯದಲ್ಲಿ 129 ರನ್‌ ಬಾರಿಸಿರುವುದು ಅವರ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನವಾಗಿದೆ. ಈ ಇನಿಂಗ್ಸ್‌ನಲ್ಲಿ 9 ಫೋರ್‌ ಮತ್ತು 3 ಸಿಕ್ಸರ್‌ಗಳು ಮೂಡಿಬಂದಿದ್ದವು. ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಯಶ್‌ 5ನೇ ಸ್ಥಾನದಲ್ಲಿದ್ದಾರೆ.

ಬೆಂಗಳೂರಿನಲ್ಲಿ ಅಭ್ಯಾಸ ಶಿಬಿರ
ಟೂರ್ನಿಗೆ ಭರ್ಜರಿ ಸಿದ್ಧತೆ ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು, ಏಷ್ಯಾ ಕಪ್‌ಗೆ ಆಯ್ಕೆ ಆಗಿರುವ ಎಲ್ಲಾ 25 ಆಟಗಾರರು ಬೆಂಗಳೂರಿನಲ್ಲಿ ಇರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಲ್ಲಿ ಡಿ.11-19ರವರೆಗೆ ನಡೆಯಲಿರುವ ಪೂರ್ವ ಸಿದ್ಧತಾ ಶಿಬಿರಕ್ಕೆ ಒಳಪಡಲಿದ್ದಾರೆ. ಭಾರತ ತಂಡದ ಮಾಜಿ ದಿಗ್ಗಜ ಆಟಗಾರ ವಿವಿಎಸ್‌ ಲಕ್ಷ್ಮಣ್‌ ಡಿ.13ರಿಂದ ಎನ್‌ಸಿಎ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದು, ಯುವ ಆಟಗಾರರಿಗೆ ಅಗತ್ಯದ ಮಾರ್ಗದರ್ಶನ ನೀಡಲಿದ್ದಾರೆ.

ಈನಡುವೆ ವಿನೂ ಮಂಕಡ್‌ ಟ್ರೋಫಿ ಟೂರ್ನಿಯಲ್ಲಿ ನಾಗಾಲೆಂಡ್‌ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್‌ ಸಾಧನೆ ಮೆರೆ ವಾಸು ವತ್ಸ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಆದರೆ, ಅವರ ಫಿಟ್ನೆಸ್‌ ಸಾಬೀತು ಪಡಿಸಿದ ಬಳಿಕವಷ್ಟೇ ತಂಡಕ್ಕೆ ಸೇರಲಿದ್ದಾರೆ.

ಹೆಡ್‌ ಕೋಚ್‌ ದ್ರಾವಿಡ್‌ರ ಕಾರ್ಯವೈಖರಿ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್‌!

ಮುಂದಿನ ವರ್ಷ ಕಿರಿಯರ ವಿಶ್ವಕಪ್‌
ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ 2022ರ ಜನವರಿ-ಫೆಬ್ರವರಿ ಅವಧಿಯಲ್ಲಿ ಐಸಿಸಿ ಕಿರಿಯರ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಇದಕ್ಕೆ ಪೂರ್ವಸಿದ್ಧತೆಯ ಟೂರ್ನಿಯಾಗಿ ಕಿರಿಯರ ಏಷ್ಯಾ ಕಪ್‌ ಟೂರ್ನಿ ನಡೆಯುತ್ತಿದೆ. 2020ರ ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಿಯಮ್‌ ಗರ್ಗ್‌ ಸಾರಥ್ಯದ ಭಾರತ ತಂಡ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಿರಾಶೆ ಅನುಭವಿಸಿ ರನ್ನರ್ಸ್‌ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು.

ಇನ್ನು ಏಷ್ಯಾ ಕಪ್‌ ಟೂರ್ನಿಯ 8 ಆವೃತ್ತಿಗಳಲ್ಲಿ 7 ಬಾರಿ ಯಂಗ್‌ ಇಂಡಿಯಾ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ. 2019ರಲ್ಲಿ ಶ್ರೀಲಂಕಾ ಆತಿಥ್ಯದಲ್ಲಿ ನಡೆದ ಕಿರಿಯರ ಏಷ್ಯಾ ಕಪ್‌ನಲ್ಲಿ ಭಾರತ ತಂಡ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ಗಳ ಜಯ ದಾಖಲಿಸಿ ಟ್ರೋಫಿ ಎತ್ತಿ ಹಿಡಿದಿತ್ತು.

ಓಡಿಐ ನಾಯಕನಾಗುತ್ತಿದ್ದಂತೆ ರೋಹಿತ್‌ರ 10 ವರ್ಷಗಳ ಹಳೇ ಟ್ವೀಟ್‌ ವೈರಲ್‌!

19 ವರ್ಷದೊಳಗಿನವರ ಏಷ್ಯಾಕಪ್‌ಗೆ ಪ್ರಕಟಿಸಲಾದ ಯಂಗ್‌ ಇಂಡಿಯಾ ತಂಡ ಹೀಗಿದೆ
ಹರ್ನೂರ್‌ ಸಿಂಗ್‌ ಪನ್ನು, ಅಂಗ್‌ಕ್ರಿಶ್‌ ರಘುವಂಶಿ, ಅನ್ಶ್ ಗೊಸಾಯ್‌, ಎಸ್‌ಕೆ ರಶೀದ್‌, ಯಶ್‌ ಧುಲ್‌ (ನಾಯಕ), ಅನೀಶ್ವರ್‌ ಗೌತಮ್‌, ಸಿದ್ಧಾರ್ಥ್‌ ಯಾದವ್‌, ಕೌಶಲ್ ತಾಂಬೆ, ನಿಶಾಂತ್‌ ಸಿಂಧೂ, ದಿನೇಶ್‌ ಬನ್ನ (ವಿಕೆಟ್‌ಕೀಪರ್‌), ಆರಾಧ್ಯ ಯಾದವ್‌ (ವಿಕೆಟ್‌ಕೀಪರ್‌), ರಾಜಾಂಗದ್‌ ಬಾವಾ, ರಾಜವರ್ಧನ್‌ ಹಂಗಾರ್ಗೇಕರ್‌, ಗರ್ವ್‌ ಸಾಂಗ್ವಾನ್‌, ರವಿ ಕುಮಾರ್‌, ರಿತೇಶ್‌ ರೆಡ್ಡಿ, ಮನವ್‌ ಪಾರಖ್, ಅಮಿತ್‌ ರಾಜ್‌ ಉಪಾಧ್ಯಾಯ, ವಿಕ್ಕಿ ಓಸ್ಟ್ವಾಲ್‌, ವಾಸು ವತ್ಸ(ಫಿಟ್ನೆಸ್‌ ಪರೀಕ್ಷರ ನಂತರ ಸೇರ್ಪಡೆ).
ಕಾಯ್ದಿರಿಸಲ್ಪಟ್ಟ ಆಟಗಾರರು
ಆಯುಶ್‌ ಸಿಂಗ್‌ ಠಾಕೂರ್‌, ಉದಯ್‌ ಸಹಾರನ್‌, ಶಾಶ್ವತ್‌ ದಂಗ್ವಾಲ್‌, ಧನುಶ್‌ ಗೌಡ, ಪಿಎಮ್‌ ಸಿಂಗ್‌ ರಾಠೋರ್‌.



Read more