Karnataka news paper

ಮೋದಿ ಫೋಟೊ ಯಾಕೆ ಎಂದು ಪ್ರಶ್ನಿಸಿದವನಿಗೆ ₹1 ಲಕ್ಷ ದಂಡ; ಆಸ್ತಿ ಮುಟ್ಟುಗೋಲು ಎಚ್ಚರಿಕೆ


ಹೈಲೈಟ್ಸ್‌:

  • ಕೋವಿಡ್‌ ಲಸಿಕೆ ಸರ್ಟಿಫಿಕೇಟ್‌ನಲ್ಲಿ ಪ್ರಧಾನಿ ಮೋದಿ ಫೋಟೋ ಬೇಡ ಎಂದು ಸಲ್ಲಿಸಲಾಗಿದ್ದ ಅರ್ಜಿ
  • ಇದೊಂದು ಕ್ಷುಲಕ ಹಾಗೂ ರಾಜಕೀಯ ಪ್ರೇರಿತ ಅರ್ಜಿ ಎಂದು ಅಭಿಪ್ರಾಯ ಪಟ್ಟ ನ್ಯಾಯಾಲಯ
  • ಒಂದು ಲಕ್ಷ ದಂಡ ವಿಧಿಸಿ ಆದೇಶ. ದಂಡ ಪಾವತಿ ಮಾಡದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆ

ತಿರುವನಂತಪುರಂ: ಕೋವಿಡ್‌ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆದು ಹಾಕಬೇಕು ಎಂದು ಮನವಿ ಸಲ್ಲಿಸಿದ್ದ ಅರ್ಜಿದಾರನಿಗೆ ಕೇರಳ ಹೈ ಕೋರ್ಟ್‌ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ವಾದ ಕ್ಷುಲಕವೂ, ರಾಜಕೀಯ ಪ್ರೇರಿತವೂ ಆಗಿರುವುದರಿಂದ ಅರ್ಜಿದಾರನ ವಾದವನ್ನು ತಳ್ಳಿ ಹಾಕಿ ಅವರಿಗೆ ಒಂದು ಲಕ್ಷದ ದಂಡವನ್ನೂ ವಿಧಿಸಿದೆ.

ಆರ್‌ಟಿಐ ಕಾರ್ಯಕರ್ತ ಪೀಟರ್‌ ಮ್ಯಾಲಿಪರಂಬಲ್‌ ಎಂಬವರು ಕೋವಿಡ್‌ ವ್ಯಾಕ್ಸಿನ್ ಸರ್ಟಿಫಿಕೇಟ್‌ಗಳಲ್ಲಿ ಮುದ್ರಣ ಮಾಡಲಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆದು ಹಾಕಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಹಣ ಕೊಟ್ಟು ವ್ಯಾಕ್ಸಿನ್‌ ಹಾಕಿಸಿಕೊಳ್ಳಲಾಗುತ್ತಿದೆ. ಅದರ ಪ್ರಮಾಣ ಪತ್ರದಲ್ಲಿ ಪ್ರಧಾನಿಯವರ ಭಾವಚಿತ್ರ ಇರುವುದು ಮೂಲಭೂತ ಹಕ್ಕಿನ ಉಲ್ಲಂಘನೆ. ಪ್ರಮಾಣ ಪತ್ರ ವೈಯಕ್ತಿಕ ವಿಚಾರವೂ ಆಗಿದ್ದು, ಪ್ರಧಾನಿ ಫೋಟೋ ಇರುವುದರಿಂದ ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸಿದಂತೆ ಎಂದು ಅವರು ತಮ್ಮ ವಾದವನ್ನು ಮುಂದಿಟ್ಟಿದ್ದರು.

ಮಾವನ ಆಸ್ತಿ ಮೇಲೆ ಅಳಿಯನಿಗೆ ಹಕ್ಕಿದೆಯೇ? ಕೇರಳ ಹೈಕೋರ್ಟ್​ ತೀರ್ಪು ಹೀಗಿದೆ!
ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ಪ್ರಧಾನ ಮಂತ್ರಿಯವರು ಕಾಂಗ್ರೆಸ್ ಅಥವಾ ಬಿಜೆಪಿಗೆ ಸೇರಿದವರು ಎಂದು ಹೇಳಲು ಆಗುವುದಿಲ್ಲ. ಪ್ರಧಾನ ಮಂತ್ರಿಯನ್ನು ಸಂವಿಧಾನಾತ್ಮಕವಾಗಿ ಆಯ್ಕೆ ಮಾಡಲಾಗುತ್ತದೆ. ಒಮ್ಮೆ ಅವರು ಪ್ರಧಾನಿಯಾಗಿ ಆಯ್ಕೆಯಾದರೆ, ಅವರು ದೇಶದ ಪ್ರಧಾನಿ. ಅ ಹುದ್ದೆ ಪ್ರತೀ ಭಾರತೀಯನ ಹೆಮ್ಮೆ’ ಎಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ ಕುಂಞಿಕೃಷ್ಣನ್‌ ಅಭಿಪ್ರಾಯ ಪಟ್ಟರು.

‘ಪ್ರಧಾನಿಯಾದವರು ತಮ್ಮ ಸ್ವಂತ ರಾಜಕೀಯ ನಿಲುವುಗಳನ್ನು ಹೊಂದಿರಬಹುದು. ಆದರೆ ಇಂಥ ಸಾಂಕ್ರಮಿಕ ರೋಗ ಇರುವ ಸಂದರ್ಭದಲ್ಲಿ, ನೈತಿಕ ಸಂದೇಶ ಮುದ್ರಿಸಲಾಗಿರುವ ಪ್ರಧಾನ ಮಂತ್ರಿಯವರ ಭಾವಚಿತ್ರ ಇರುವ ಲಸಿಕೆ ಪ್ರಮಾಣ ಪತ್ರ ಹಿಡಿದುಕೊಳ್ಳುವುದರ ಬಗ್ಗೆ ಜನ ಸಾಮಾನ್ಯರು ನಾಚಿಕೆ ಪಡಬೇಕಾಗಿಲ್ಲ’ ಎಂದು ನ್ಯಾಯಾಲಯ ತೀರ್ಪಿನ ವೇಳೆ ಹೇಳಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕರ್ನಾಟಕ ಸರ್ಕಾರಕ್ಕೆ ಆ ಅಧಿಕಾರವಿದೆ!: ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್
‘ಈ ದಾವೆ ಹೂಡಿಕೆಯ ಹಿಂದೆ ರಾಜಕೀಯ ಪ್ರೇರಣೆ ಇರುವುದು ಕಂಡು ಬರುತ್ತಿದೆ. ಇದು ಮಹತ್ವದ ಅರ್ಜಿ ಅಲ್ಲ. ಈ ಅರ್ಜಿಯ ಹಿಂದೆ ಸಾರ್ವಜನಿಕ ಹಿತಾಸಕ್ತಿಗೆ ಬದಲಾಗಿ, ಪ್ರಚಾರದ ಉದ್ದೇಶ ಕಾಣಿಸುತ್ತಿದೆ’ ಎಂದು ಕೋರ್ಟ್‌ ಅಭಿಪ್ರಾಯ ಪಟ್ಟಿದೆ.

ಅಲ್ಲದೇ ಹಲವು ಮಹತ್ವದ ಪ್ರಕರಣಗಳ ವಿಚಾರಣೆ ಬಾಕಿ ಇರುವ ವೇಳೆ, ಇಂಥ ಕ್ಷುಲ್ಲಕ ದಾವೆಗಳನ್ನು ಪರಿಗಣಿಸಲು ಅಸಾಧ್ಯ ಎಂದು ಹೇಳಿರುವ ಕೋರ್ಟ್‌, ಅರ್ಜಿದಾರರಿಗೆ ಒಂದು ಲಕ್ಷ ದಂಡ ವಿಧಿಸಿದೆ.

ಅರ್ಜಿದಾರ ಕೇರಳ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಒಂದು ಲಕ್ಷ ರೂಪಾಯಿಯನ್ನು ಆರು ವಾರಗಳ ಒಳಗಾಗಿ ಪಾವತಿ ಮಾಡಬೇಕು ಎಂದು ಸೂಚಿಸಿರುವ ಘನ ನ್ಯಾಯಾಲಯ ಒಂದು ವೇಳೆ ಸರಿಯಾದ ಸಮಯಕ್ಕೆ ಪಾವತಿ ಮಾಡಲು ವಿಫಲವಾಗಿದ್ದೇ ಆದಲ್ಲಿ ಅವರ ಆಸ್ತಿಯನ್ನು ಮಾರಿ ದಂಡ ವಸೂಲಿ ಮಾಡಬೇಕು ಎಂದು ಖಡಕ್‌ ನಿರ್ದೇಶನ ನೀಡಿದೆ.



Read more