ಬೆಳಗಾವಿ (ಸುವರ್ಣ ವಿಧಾನಸೌಧ): ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಆಗ್ರಹಿಸಿ ಜನವರಿ 9ರಿಂದ ಹತ್ತು ದಿನಗಳ ಕಾಲ ಮೇಕೆದಾಟು, ಕನಕಪುರ, ದೊಡ್ಡಾಲಹಳ್ಳಿ ಮಾರ್ಗವಾಗಿ 15 ಕ್ಷೇತ್ರದ ಮೂಲಕ ಒಟ್ಟು 169 ಕಿಮೀ ಪಾದಯಾತ್ರೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಸುದ್ದಿಗಾರರ ಜೊತೆ ಮಾತನಾಡುತ್ತ ಈ ವಿಷಯ ತಿಳಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ರಾಜ್ಯದ 10 ಜಿಲ್ಲೆಗಳ ಜನರ ಹಿತದೃಷ್ಟಿಯಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದರು.
‘ಮೇಕೆದಾಟು ಯೋಜನೆಗೆ ₹ 9,500 ಕೋಟಿ ಅಂದಾಜು ವೆಚ್ಚದ ಡಿಪಿಆರ್ ತಯಾರಿಸಲಾಗಿತ್ತು. ಹಿಂದಿನ ಮೈತ್ರಿ ಸರ್ಕಾರದಲ್ಲಿ ಈ ಯೋಜನೆ ಅಂತಿಮ ಮಾಡಲಾಗಿತ್ತು. ಈ ಯೋಜನೆಯಿಂದ ಇಡೀ ಬೆಂಗಳೂರು ನಗರ ಮತ್ತು ಸುತ್ತುಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರು ಸಿಗಲಿದೆ. ಆದರೆ, ರಾಜಕೀಯ ಕಾರಣಕ್ಕಾಗಿ ತಮಿಳುನಾಡು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ’ ಎಂದು ದೂರಿದರು.
‘2018ರಲ್ಲಿ ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಡಿಪಿಆರ್ ಮಾಡಿದ್ದರು. 66 ಟಿಎಂಸಿ ಅಡಿ ನೀರು ಯಾರಿಗೂ ಉಪಯೋಗಕ್ಕೆ ಇಲ್ಲದೆ ಸಮುದ್ರ ಸೇರುತ್ತಿದೆ. ಯೋಜನೆಗೆ ಸಂಬಂಧಿಸಿದ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಇತ್ಯರ್ಥ ಆಗಿದೆ. ನಮ್ಮದು ಡಬಲ್ ಇಂಜಿನ್ ಸರ್ಕಾರ ಅನ್ನುವರು ಯೋಜನೆ ಆರಂಭಿಸಬೇಕಿತ್ತು. ನಮ್ಮ ಸರ್ಕಾರ ಇದ್ದಿದ್ದರೆ ಯೋಜನೆ ಆರಂಭಿಸುತ್ತಿದ್ದೆವು’ ಎಂದರು.
‘ಬೆಂಗಳೂರು ನಾಗರಿಕರಿಗೆ ನೀರು ಕೊಡಲು ಈ ಯೋಜನೆ ಆಗಬೇಕು. ಚಿಕ್ಕಬಳ್ಳಾಪುರ, ಕೋಲಾರಕ್ಕೂ ಕುಡಿಯುವ ನೀರು ಕೊಡಬಹುದು. ತಮಿಳುನಾಡು ಹಾಗೂ ನಮ್ಮ ಮದ್ಯೆ ಇದ್ದ ನೀರಿನ ವ್ಯಾಜ್ಯದಲ್ಲಿ 177.23 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಕೊಡಬೇಕೆಂದು ನ್ಯಾಯಮಂಡಳಿ ಆದೇಶ ಮಾಡಿದೆ. ಸ್ವಾಭಾವಿಕವಾಗಿ ಚೆನ್ನಾಗಿ ಮಳೆಯಾದಾಗ ತಮಿಳುನಾಡಿಗೆ ಅಷ್ಟು ನೀರು ಬಿಡಬೇಕಿದೆ’ ಎಂದರು.
ಬಿಜೆಪಿಯವರ ಮಕ್ಕಳೇ ‘ಲವ್ ಜಿಹಾದ್’ನಲ್ಲಿದ್ದಾರೆ: ಬಿಕೆ ಹರಿಪ್ರಸಾದ್
‘ಮೇಕೆದಾಟು ಪ್ರಕರಣದಲ್ಲಿ ಹಸಿರು ಪೀಠದವರು ತಮಿಳುನಾಡಿನ ಅರ್ಜಿ ವಜಾ ಮಾಡಿದ್ದಾರೆ. ಹೀಗಾಗಿ, ಅವರಿಗೆ ತಕರಾರು ಮಾಡಲು ವಿಚಾರವಿಲ್ಲ. ವಿದ್ಯುತ್ ಉತ್ಪಾದನೆ ನಂತರ ನೀರು ಮತ್ತೆ ತಮಿಳುನಾಡಿಗೆ ಹೋಗುತ್ತದೆ. ಇದರಿಂದ ಅವರಿಗೆ ಹೆಚ್ಚು ಅನುಕೂಲ. ಅನಗತ್ಯವಾಗಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ’ ಎಂದರು.
‘ನಮ್ಮ ಎಲ್ಲ ನಾಯಕರು ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಆಟೋ ಸಂಘ, ದಲಿತ ಸಂಘ, ವಿದ್ಯಾರ್ಥಿ ಸಂಘ ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡುತ್ತೇವೆ. ಜೆಡಿಎಸ್‌ನವರು ಬರಲ್ಲ. ಹೀಗಾಗಿ ಅವರಿಗೆ ಆಹ್ವಾನ ಕೊಡುವುದಿಲ್ಲ’ ಎಂದರು.
ಪಾದಯಾತ್ರೆಗೆ ಮುಖ್ಯಮಂತ್ರಿ ವಿರೋಧ ವ್ಯಕ್ತಪಡಿಸಿದ ಬಗ್ಗೆ ಸಿದ್ದರಾಮಯ್ಯ, ‘ಸರ್ಕಾರ ಕೆಲಸ ಆರಂಭಿಸಲಿ. ನಾವು ಪಾದಯಾತ್ರೆ ನಿಲ್ಲಿಸುತ್ತೇವೆ. ನಾವು ಗುದ್ದಲಿ ಪೂಜೆಗೆ ಹೋಗುತ್ತೇವೆ’ ಎಂದರು.
ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ ಎಂಬ ಆರೋಪಕ್ಕೆ, ‘ರಾಜಕೀಯ ಪಕ್ಷದ ಎಂದರೆ ಎಲ್ಲವೂ ಅಡಗಿರುತ್ತದೆ. ನಾವೇನು ಸನ್ಯಾಸಿಗಳಲ್ಲ’ ಎಂದರು.
ಮತಾಂತರ ತಡೆ ಕಾಯ್ದೆ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ: ಡಿಕೆ ಶಿವಕುಮಾರ್