Source : The New Indian Express
ಬೆಂಗಳೂರು: ಕೋವಿಡ್ 3ನೇ ಅಲೆ ಆತಂಕ ನಡುವೆ 25 ವಿಧಾನ ಪರಿಷತ್ ಸ್ಥಾನಗಳಿಗೆ 20 ಚುನಾಯಿತ ಜನಪ್ರತಿನಿಧಿಗಳ ಕ್ಷೇತ್ರದಿಂದ ಇಂದು ಶುಕ್ರವಾರ ಚುನಾವಣೆ ನಡೆಯುತ್ತಿದೆ. ಇದು 20243ರ ವಿಧಾನ ಪರಿಷತ್ ಚುನಾವಣೆಗೆ ದಿಕ್ಸೂಚಿಯಾಗಬಹುದು ಎಂಬುದು ಲೆಕ್ಕಾಚಾರ.
ಈ ಪರಿಷತ್ ಚುನಾವಣೆಯ ಫಲಿತಾಂಶ ಮೂರೂ ಪ್ರಮುಖ ರಾಜಕೀಯ ಪಕ್ಷಗಳಿಗೆ ಅತ್ಯಂತ ಮಹತ್ವವಾದದ್ದು. ಅದರಲ್ಲೂ ಬಿಜೆಪಿ ಕನಿಷ್ಠ 13 ಸ್ಥಾನಗಳನ್ನು ಗೆದ್ದು ಮೇಲ್ಮನೆಯಲ್ಲಿ 75ಕ್ಕೂ ಅಧಿಕ ಸದಸ್ಯ ಬಲ ಪಡೆದು ಬಹುಮತ ಪಡೆಯುವ ಹುಮ್ಮಸ್ಸಿನಲ್ಲಿದೆ. ಕಾಂಗ್ರೆಸ್ 14 ಸೀಟುಗಳನ್ನು ಗೆಲ್ಲಬೇಕೆಂದು ಹವಣಿಸುತ್ತಿದ್ದರೆ ಜೆಡಿಎಸ್ ಸ್ಪರ್ಧಿಸಿರುವ 6 ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಜಯ ಸಾಧಿಸಬೇಕೆಂದು ಪ್ರಯತ್ನಿಸುತ್ತಿದೆ.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ 6 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಪರೀಕ್ಷೆಯ ಸಮಯ.
ಈ ಬಾರಿ ಕೂಡ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಗ್ಗೆ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದು ಕಂಡುಬಂತು. ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಯೂಸಫ್ ಶರೀಫ್ ಅವರ ಮೇಲೆ ಬಿಜೆಪಿ ಅನೇಕ ಆರೋಪಗಳನ್ನು ಮಾಡುತ್ತಾ ಬಂದಿದೆ. ಸರ್ಕಾರಿ ಜಮೀನನ್ನು ಯೂಸಫ್ ಕಬಳಿಸಿದ್ದಾರೆ ಎಂಬ ಆರೋಪ ಕೂಡ ಇದೆ. ಕೆಲವು ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಸಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆಯಿಲ್ಲ; 2023ರ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ: ಎಚ್.ಡಿ ಕೆ
ವಿಜಯಪುರದಲ್ಲಿ ಸ್ವತಂತ್ರ ಅಭ್ಯರ್ಥಿ ಮಲ್ಲಿಕಾರ್ಜುನ ಲೊನೆ ಅವರ ವಿಡಿಯೊ ವೈರಲ್ ಆಗಿದೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಬೆಂಬಲಿಗರು ದೇವರ ಮೂರ್ತಿ ಮುಂದೆ ತಮ್ಮ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂದು ಪ್ರಮಾಣ ತೆಗೆದುಕೊಳ್ಳುತ್ತಿರುವ ವಿಡಿಯೊ ವೈರಲ್ ಆಗಿದ್ದು ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಧಾರವಾಡದಲ್ಲಿ ಜಗದೀಶ್ ಶೆಟ್ಟರ್ ಸೋದರ ಪ್ರದೀಪ್ ಶೆಟ್ಟರ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಗೆಲುವು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಈ ಬಾರಿಯ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ 23 ಸಾವಿರದ 065 ಮತಗಟ್ಟೆ ಸಿಬ್ಬಂದಿಗೆ ಎರಡೂ ಡೋಸ್ ಲಸಿಕೆ ಹಾಕಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ. 99 ಸಾವಿರಕ್ಕೂ ಹೆಚ್ಚು ಮತದಾರರಲ್ಲಿ ಹೆಚ್ಚಿನವರು ಲಸಿಕೆ ಹಾಕಿದ್ದಾರೆ ಎಂದು ಅಧಿಕಾರಿಗಳು ಹೇಳಿಕೊಂಡರೂ, ಅವರು ಮತದಾನ ಕೇಂದ್ರಗಳಿಗೆ ದಾಖಲೆಗಳನ್ನು ತರಬೇಕಾಗುತ್ತದೆ.
ರಾಜ್ಯಾದ್ಯಂತ 6 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೇ 2021 ರಲ್ಲಿ ಬಸವಕಲ್ಯಾಣ ಮತ್ತು ಮಸ್ಕಿ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಶಿಕ್ಷಣ ಇಲಾಖೆಯ 50 ಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿ ಕೋವಿಡ್ ನಿಂದ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.