Karnataka news paper

ಪ್ರೇಮಿಗಳ ದಿನದಂದು ‘ನೆನಪಿರಲಿ’ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯಂ 2’ಕ್ಕೆ ಚಾಲನೆ


ಹೈಲೈಟ್ಸ್‌:

  • ವೈದ್ಯರು ಸೇರಿ ನಿರ್ಮಾಣ ಮಾಡಿರುವ ‘ಪ್ರೇಮಂ ಪೂಜ್ಯಂ’ ಸಿನಿಮಾ
  • ನೆನಪಿರಲಿ ಪ್ರೇಮ್, ಬೃಂದಾ ಆಚಾರ್ಯ ನಟನೆಯ ‘ಪ್ರೇಮಂ ಪೂಜ್ಯಂ’ ಚಿತ್ರ
  • ಫೆಬ್ರವರಿ 14ರಂದು ‘ಪ್ರೇಮಂ ಪೂಜ್ಯಂ 2’ಕ್ಕೆ ಚಾಲನೆ

‘ನೆನಪಿರಲಿ’ ಪ್ರೇಮ್ ಅಭಿನಯದ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ನಲ್ಲಿ ಅವರು ಮೆಡಿಕಲ್ ಸ್ಟೂಡೆಂಟ್ ಆಗಿ ಕಾಣಿಸಿಕೊಂಡಿದ್ದರು. ಡಾ. ಬಿಎಸ. ರಾಘವೇಂದ್ರ ನಿರ್ದೇಶನದ ‘ಪ್ರೇಮಂ ಪೂಜ್ಯಂ’ ಚಿತ್ರ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರ 50ನೇ ದಿನಕ್ಕೆ ಸನಿಹದಲ್ಲಿದ್ದು, ನೂರನೇ ದಿನದತ್ತ ದಾಪುಗಾಲು ಹಾಕಿದೆ. ಚಿತ್ರವನ್ನು ವೀಕ್ಷಿಸಿದ ತಮಿಳು, ತೆಲುಗು ನಿರ್ಮಾಪಕರಿಂದ ರೀಮೇಕ್ ಹಕ್ಕಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಅಲ್ಲದೆ ಓಟಿಟಿಯಿಂದಲೂ ಉತ್ತಮ ಆಫರ್ ಬರುತ್ತಿದ್ದು, ನಿರ್ಮಾಪಕರು ಸದ್ಯ ಯಾವುದನ್ನೂ ಒಪ್ಪಿಕೊಳ್ಳದೆ ಚಿತ್ರವು ನೂರು ದಿನಗಳ ಪ್ರದರ್ಶನವಾದ ನಂತರ ಬೇರೆ ಭಾಷೆಗೆ ಕೊಡಬೇಕೆಂಬ ನಿರ್ಧಾರ ತಳೆದಿದ್ದಾರೆ.

ಪ್ರೇಮಂ ಪೂಜ್ಯಂ 2‘ ಸಿನಿಮಾ ಕೆಲಸ ಆರಂಭ
ನಿರ್ದೇಶಕ ಡಾ.ಬಿಎಸ್ ರಾಘವೇಂದ್ರ ಅವರು ಚಿತ್ರದ ಮುಂದುವರಿದ ಭಾಗವಾಗಿ ‘ಪ್ರೇಮಂ ಪೂಜ್ಯಂ’ನ ಸಿಕ್ವೇಲ್ ಮಾಡಲು ಮುಂದಾಗಿದ್ದು, ಈಗಾಗಲೇ ಇದಕ್ಕೆ ಚಿತ್ರಕಥೆಯನ್ನೂ ಸಹ ರೆಡಿ ಮಾಡಿಕೊಂಡಿದ್ದಾರೆ. ಮುಂದಿನ ಭಾಗದಲ್ಲಿ ಒಂದಷ್ಟು ಕುತೂಹಲಕರ ಕಥೆಯನ್ನು ಬಿಚ್ಚಿಡಲು ನಿರ್ಧರಿಸಿದ್ದಾರೆ. ಪ್ರೇಮಿಗಳ ದಿನದಂದು (ಫೆ 14) ‘ಪೇಮಂ ಪೂಜ್ಯಂ’ ಚಿತ್ರದ 2ನೇ ಭಾಗಕ್ಕೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಚಿತ್ರದ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಬಹುತೇಕ ಕಲಾವಿದ, ತಂತ್ರಜ್ಞರೇ ಈ ಚಿತ್ರದಲ್ಲೂ ಸಹ ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ.

ಮೊದಲ ಬಾರಿಗೆ ಏಳು ಡಿಫರೆಂಟ್ ಗೆಟಪ್‌ಗಳಲ್ಲಿ ‘ನೆನಪಿರಲಿ’ ಪ್ರೇಮ್‌ ಮಿಂಚಿಂಗ್!

ವೈದ್ಯಕೀಯ ಕ್ಷೇತ್ರದ 28 ತಜ್ಞ ವೈದ್ಯರಿಂದ ಮೊದಲ ಬಾರಿಗೆ ಚಿತ್ರ ನಿರ್ಮಾಣ

ನಾಯಕನ ಪ್ರೀತಿಯ ಕಥೆಯ ವಿವಿಧ ಮಜಲುಗಳನ್ನು ಹೇಳುವ ಕಥೆಯಿರುವ ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾ ರೇ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರೇಮಿಗಳು, ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜನೀಯ ಭಾವನೆ ಇರಬೇಕೆಂಬ ಉತ್ತಮ ಸಂದೇಶ ಈ ಸಿನಿಮಾದಲ್ಲಿದೆ. ಡಾ.ರಕ್ಷಿತ್ ಕದಂಬಾಡಿ, ಡಾ. ರಾಜ್‌ಕುಮಾರ್ ಜಾನಕಿರಾಮನ್, ಮನೋಜ್‌ಕೃಷ್ಣನ್ ಹಾಗೂ ರಾಘವೇಂದ್ರ ಎಸ್. ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಡಾ.ಮಾಧವಕಿರಣ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಒಟ್ಟಾರೆಯಾಗಿ ವೈದ್ಯಕೀಯ ಕ್ಷೇತ್ರದ 28 ತಜ್ಞ ವೈದ್ಯರು ಮೊದಲ ಬಾರಿಗೆ ಚಿತ್ರ ನಿರ್ಮಾಣ ಮಾಡಿರುವುದು ವಿಶೇಷ. 21ನೇ ಶತಮಾನದಲ್ಲಿ ಪ್ರೀತಿಸುವ ವಿಧಾನ ಬದಲಾಗಿರಬಹುದು. ಆದರೆ ಅದರ ಪಾವಿತ್ರ್ಯ ಬದಲಾಗಿಲ್ಲ. ಅದನ್ನು ‘ಪ್ರೇಮಂ ಪೂಜ್ಯಂ’ ಸಿನಿಮಾದಲ್ಲಿ ಹಾಗೇ ಉಳಿಸಿಕೊಳ್ಳಲಾಗಿದೆ.

28 ವೈದ್ಯರು ನಿರ್ಮಾಣ ಮಾಡಿರುವ ನರರೋಗ ತಜ್ಞ ನಿರ್ದೇಶನ ಮಾಡಿರುವ ‘ಪ್ರೇಮಂ ಪೂಜ್ಯಂ’ ಪ್ರದರ್ಶನ ಇಂದಿನಿಂದ ಆರಂಭ!

12 ಹಾಡುಗಳಿರುವ ‘ಪ್ರೇಮಂ ಪೂಜ್ಯಂ’ ಸಿನಿಮಾ
ಮಾಸ್ಟರ್ ಆನಂದ್‌, ಸಾಧುಕೋಕಿಲ, ಅನು ಪ್ರಭಾಕರ್‌, ಅವಿನಾಶ್‌, ಮಾಳವಿಕಾ, ನಾಗಾಭರಣ, ಸುಮನ್‌ ಮುಂತಾದವರು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದರು. ಈ ಸಿನಿಮಾದಲ್ಲಿ 12 ಹಾಡುಗಳಿರುವುದು ವಿಶೇಷವಾಗಿತ್ತು. ರಿಹರನ್‌, ಅರ್ಮಾನ್‌ ಮಲ್ಲಿಕ್‌, ಡಾ.ಸಂದೀಪ್‌, ವಿಜಯ್‌ ಪ್ರಕಾಶ್‌, ವಿಹಾನ್‌ ಆರ್ಯ, ಸೋನು ನಿಗಮ್‌, ಮಲೆಯಾಳಂ ಸಿಂಗರ್‌ ಶಹಬಾಜ್‌ ಅಮನ್‌, ಅನುರಾಧಾ ಭಟ್‌, ಸಾಧುಕೋಕಿಲಾ, ಮೋಹಿತ್‌ ಚೌಹಾಣ್‌, ಡಾ. ಸ್ಮೃತಿ ಮತ್ತು ನಿರ್ದೇಶಕ ಡಾ. ರಾಘವೇಂದ್ರ ಹಾಡುಗಳನ್ನು ಹಾಡಿದ್ದರು.



Read more