Karnataka news paper

ಬಾಕ್ಸಿಂಗ್‌ ಡೇ ಟೆಸ್ಟ್‌ ಗೆಲ್ಲಲು ಇಂಗ್ಲೆಂಡ್‌ಗೆ 4 ಬದಲಾವಣೆ ಸೂಚಿಸಿದ ವಾರ್ನ್‌!


ಹೈಲೈಟ್ಸ್‌:

  • ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್‌ ಸರಣಿ.
  • ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-0 ಮುನ್ನಡೆ ಪಡೆದಿರುವ ಆಸ್ಟ್ರೇಲಿಯಾ ತಂಡ.
  • ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಇಂಗ್ಲೆಂಡ್‌ ಪ್ಲೇಯಿಂಗ್‌ XIನಲ್ಲಿ 4 ಬದಲಾವಣೆ ಸೂಚಿಸಿದ ವಾರ್ನ್‌.

ಅಡಿಲೇಡ್‌: ಆಸ್ಟ್ರೇಲಿಯಾ ವಿರುದ್ಧ ಮೂರನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ಗೆಲ್ಲಬೇಕೆಂದರೆ ಇಂಗ್ಲೆಂಡ್‌ ತನ್ನ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ನಾಲ್ಕು ಬದಲಾವಣೆ ಮಾಡಬೇಕೆಂದು ಆಸೀಸ್‌ ಸ್ಪಿನ್ನರ್‌ ಶೇನ್‌ವಾರ್ನ್‌ ಪ್ರವಾಸಿ ತಂಡಕ್ಕೆ ಸಲಹೆ ನೀಡಿದ್ದಾರೆ.

ಸೋಮವಾರ ಮುಕ್ತಾಯವಾಗಿದ್ದ ಆಷಸ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 275 ರನ್‌ಗಳಿಂದ ಭರ್ಜರಿ ಗೆಲುವು ಪಡೆಯುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು. ದ್ವಿತೀಯ ಇನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನ ತೋರಿದ್ದ ಜೇ ರಿಚರ್ಡ್‌ಸನ್‌ ಐದು ವಿಕೆಟ್‌ ಸಾಧನೆ ಮಾಡಿದ್ದರು. ಡಿ.26 ರಿಂದ ಮೆಲ್ಬೋರ್ನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೂರನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ಇಂಗ್ಲೆಂಡ್‌ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ.

ಈ ಪಂದ್ಯದಲ್ಲಿ ಇಂಗ್ಲೆಂಡ್‌ ಸೋತರೆ ಆಷಸ್‌ ಟೆಸ್ಟ್‌ ಸರಣಿಯನ್ನು ಕಳೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಪಂದ್ಯ ಗೆದ್ದು ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಜೀವಂತವಾಗಿರಿಕೊಳ್ಳಬೇಕಾದ ಅಗತ್ಯತೆ ಪ್ರವಾಸಿ ತಂಡಕ್ಕಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸ್ಪಿನ್‌ ದಂತಕತೆ ಶೇನ್‌ ವಾರ್ನ್‌, ಜೋ ರೂಟ್‌ ಬಳಗಕ್ಕೆ ನಾಲ್ಕು ಬದಲಾವಣೆ ಮಾಡಿಕೊಳ್ಳಬೇಕೆಂದು ಸೂಚಿಸಿದ್ದಾರೆ.

ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಗೆ 275 ರನ್‌ಗಳ ಭರ್ಜರಿ ಜಯ!

ಸತತ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿರುವ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಶೇನ್ ವಾರ್ನ್‌, ಈ ವಾರಾಂತ್ಯದಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಪಿನ್ನರ್‌ಗೆ ಅವಕಾಶ ನೀಡಬೇಕೆಂದು ಸಲಹೆ ನೀಡಿದ್ದಾರೆ.

“ಕಠಿಣ ಹೋರಾಟ ನಡೆಸಿ ಗೆಲುವು ಪಡೆದೆ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ. 0-2 ಅಂತರದಲ್ಲಿ ಭಾರೀ ಹಿನ್ನಡೆ ಅನುಭವಿಸಿರುವ ಇಂಗ್ಲೆಂಡ್‌ ತಂಡ ಸದ್ಯ ಕಠಿಣ ಸನ್ನಿವೇಶವನ್ನು ಎದುರಿಸುತ್ತಿದೆ. ಮುಂದಿನ ಪಂದ್ಯದ ಪರಿಸ್ಥಿತಿಗಳಿಗೆ ತಕ್ಕಂತೆ ಇಂಗ್ಲೆಂಡ್‌ ಒಬ್ಬ ಸ್ಪಿನ್ನರ್‌ ಸೇರಿದಂತೆ ಪರಿಪೂರ್ಣ ಪ್ಲೇಯಿಂಗ್‌ ಇಲೆವೆನ್‌ ಆಯ್ಕೆ ಮಾಡಬೇಕಾಗಿದೆ. ಝ್ಯಾಕ್‌ ಕ್ರಾವ್ಲಿ, ಮಾರ್ಕ್‌ ವುಡ್‌, ಜಾನಿ ಬೈರ್‌ಸ್ಟೋವ್‌ ಹಾಗೂ ಝ್ಯಾಕ್‌ ಲೀಚ್‌ ಅವರನ್ನು ಇಂಗ್ಲೆಂಡ್ ಆಡಿಸಬೇಕು,” ಎಂದು ಶೇನ್‌ ವಾರ್ನ್‌ ಸಲಹೆ ನೀಡಿದ್ದಾರೆ.

ಮ್ಯಾರಥಾನ್‌ ಇನಿಂಗ್ಸ್‌ ಬಳಿಕ ವಿಚಿತ್ರವಾಗಿ ವಿಕೆಟ್‌ ಒಪ್ಪಿಸಿದ ಬಟ್ಲರ್‌!

ಬ್ರಿಸ್ಬೇನ್‌ನ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಇದೀಗ ಅಡಿಲೇಡ್‌ ಟೆಸ್ಟ್ ಜಯದೊಂದಿಗೆ ಆಸೀಸ್‌ ಸರಣಿ ಗೆಲುವಿಗೆ ಮತ್ತೊಂದು ಹೆಜ್ಜೆ ಹತ್ತಿರವಾಗಿದೆ. ಬ್ಯಾಕ್‌ ಟು ಬ್ಯಾಕ್‌ ಸೋಲುಂಡ ಇಂಗ್ಲೆಂಡ್‌ ತಂಡ 2010-11ರ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಆ್ಯಷಸ್‌ ಟೆಸ್ಟ್‌ ಸರಣಿ ಗೆಲ್ಲುವಲ್ಲಿ ಮತ್ತೆ ವಿಫಲವಾಗುತ್ತಿರುವುದು ಸ್ಪಷ್ಟವಾಗಿದೆ.

‘4 ವರ್ಷಗಳ ಹಿಂದಿನ ತಪ್ಪನ್ನೇ ಮಾಡಿದ್ದೇವೆ’, ಸೋಲಿನ ಬಳಿಕ ರೂಟ್‌ ಹೇಳಿದ್ದಿದು!

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 473/9 ಡಿಕ್ಲೇರ್‌ ಮತ್ತು ಎರಡನೇ ಇನಿಂಗ್ಸ್‌ 230/9 ಡಿಕ್ಲೇರ್‌.
ಇಂಗ್ಲೆಂಡ್: ಮೊದಲ ಇನಿಂಗ್ಸ್‌ 236ಕ್ಕೆ ಆಲ್‌ಔಟ್‌ ಮತ್ತು 2ನೇ ಇನಿಂಗ್ಸ್‌ 113.1 ಓವರ್‌ಗಳಲ್ಲಿ 192ಕ್ಕೆ ಆಲ್‌ಔಟ್‌ (ರೋರಿ ಬರ್ನ್ಸ್‌ 34, ಡಾವಿಡ್‌ ಮಲಾನ್‌ 20, ಜೋ ರೂಟ್ 24, ಜೋಸ್‌ ಬಟ್ಲರ್‌ 26, ಕ್ರಿಸ್‌ ವೋಕ್ಸ್‌ 44; ಜೇ ರಿಚರ್ಡ್ಸನ್‌ 42ಕ್ಕೆ 5, ಮಿಚೆಲ್‌ ಸ್ಟಾರ್ಕ್ 43ಕ್ಕೆ 2, ನೇಥನ್‌ ಲಯಾನ್‌ 55ಕ್ಕೆ 2, ಮೈಕಲ್‌ ನೆಸೆರ್‌ 28ಕ್ಕೆ 1).
ಪಂದ್ಯ ಶ್ರೇಷ್ಠ: ಮಾರ್ನಸ್‌ ಲಾಬುಶೇನ್‌



Read more