Karnataka news paper

ಹರಿಣಗಳ ನಾಡಲ್ಲಿ ‘ಕಿಂಗ್‌ ಕೊಹ್ಲಿ’ ಬ್ಯಾಟಿಂಗ್‌ ದಾಖಲೆಗಳ ವಿವರ!


ಹೈಲೈಟ್ಸ್‌:

  • ಭಾರತ-ದಕ್ಷಿಣ ಆಫ್ರಿಕಾ ನಡುವಣ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ.
  • ಡಿ.26ರಿಂದ 3 ಪಂದ್ಯಗಳ ಟೆಸ್ಟ್‌ ಸರಣಿ ಸೆಂಚೂರಿಯನ್‌ನಲ್ಲಿ ಆರಂಭ.
  • ಹರಿಣಗಳ ನಾಡಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಜಯ ಎದುರು ನೋಡುತ್ತಿರುವ ಭಾರತ.

ಜೊಹಾನ್ಸ್‌ಬರ್ಗ್‌: ಟೆಸ್ಟ್‌ ಕ್ರಿಕೆಟ್‌, ಏಕದಿನ ಕ್ರಿಕೆಟ್‌ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಎಲ್ಲಾ ಮಾದರಿಯಲ್ಲೂ ಸ್ಥಿರ ಪ್ರದರ್ಶನ ಕಾಯ್ದುಕೊಂಡು 50ಕ್ಕೂ ಹೆಚ್ಚು ಬ್ಯಾಟಿಂಗ್‌ ಸರಾಸರಿ ಹೊಂದಿರುವ ಏಕಮಾತ್ರ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ, ವಿಶ್ವದ ವಿವಿಧ ಭಾಗಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ.

ಟೀಮ್ ಇಂಡಿಯಾ ಈಗ ಮಹತ್ವದ ಸರಣಿ ಸಲುವಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ಹರಿಣಗಳ ನಾಡಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆಲ್ಲಬೇಕಾದರೆ ಕೊಹ್ಲಿ ಬ್ಯಾಟ್‌ನಿಂದ ರನ್‌ ಹೊಳೆ ಹರಿಯುವ ಅಗತ್ಯತೆ ಇದೆ. 2019ರ ಬಳಿಕ ಒಂದು ಶತಕವನ್ನೂ ಬಾರಿಸದ ಕೊಹ್ಲಿ, ಈಗ ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳುತ್ತಾರೆ ಎಂಬುದಷ್ಟೇ ಕ್ರಿಕೆಟ್‌ ಪ್ರಿಯರ ನಿರೀಕ್ಷೆಯಾಗಿದೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ವಿರಾಟ್‌ ಕೊಹ್ಲಿ ಅವರ ಈ ಹಿಂದಿನ ದಾಖಲೆಗಳನ್ನು ಗಮನಿಸಿದರೆ, ಭಾರತ ಟೆಸ್ಟ್‌ ತಂಡದ ನಾಯಕ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಕ್ರಮವಾಗಿ 55 ಮತ್ತು 87.7ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿ ಮಿಂಚಿದ್ದಾರೆ. ಈಗ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಾಯಕತ್ವ ಕೈಬಿಟ್ಟು ಒತ್ತಡ ಮುಕ್ತರಾಗಿರುವ ಕೊಹ್ಲಿ, ಮುಂದಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗರ್ಜಿಸುವ ಸಾಧ್ಯತೆ ಇದೆ.

ಹರಿಣಗಳ ನಾಡಲ್ಲಿ ಭಾರತ ಟೆಸ್ಟ್‌ ತಂಡದ ಟಾಪ್‌ 5 ಭರ್ಜರಿ ಪ್ರದರ್ಶನಗಳಿವು!

ಟೆಸ್ಟ್ ಕ್ರಿಕೆಟ್‌ನಲ್ಲಿ 27 ಶತಕಲ ಬಾರಿಸಿರುವ ವಿರಾಟ್‌ ಕೊಹ್ಲಿ, ತಮ್ಮ 71ನೇ ಅಂತಾರಾಷ್ಟ್ರೀಯ ಶತಕ ಸಲುವಾಗಿ ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ಅವರ ಈ ಸುದೀರ್ಘ ತಪಸ್ಸಿಗೆ ಮುಂದಿನ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಫಲ ಸಿಗುವುದು ದಟ್ಟವಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಕೊಹ್ಲಿ ಟೆಸ್ಟ್‌ ಸಾಧನೆ
ದಕ್ಷಿಣ ಆಫ್ರಿಕಾದಲ್ಲಿ ಕೊಹ್ಲಿ ಈವರೆಗೆ 5 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ತಲಾ ಎರಡು ಶತಕ ಮತ್ತು ಅರ್ಧಶತಕಗಳೊಂದಿಗೆ 55.80ರ ಸರಾಸರಿಯಲ್ಲಿ 558 ರನ್‌ಗಳನ್ನು ಬಾರಿಸಿದ್ದಾರೆ. ಹೀಗಾಗಿ ಮುಂದಿನ ಸರಣಿಯಲ್ಲಿ ಕನಿಷ್ಠ 2 ಶತಕಗಳನ್ನಾದರೂ ಕೊಹ್ಲಿ ಎದುರು ನೋಡುತ್ತಿದ್ದಾರೆ.

ಹರಿಣಗಳ ನಾಡಲ್ಲಿ ಒಡಿಐ ದಾಖಲೆ
ಏಕದಿನ ಕ್ರಿಕೆಟ್‌ ದಾಖಲೆಗಳತ್ತ ಗಮನ ನೀಡಿದರೆ, ಹರಿಣಗಳ ನಾಡಲ್ಲಿ ಕೊಹ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. ಆಡಿದ 17 ಪಂದ್ಯಗಳಲ್ಲಿ (15 ಇನಿಂಗ್ಸ್‌) ಬರೋಬ್ಬರಿ 877 ರನ್‌ಗಳನ್ನು ಬಾರಿಸುವ ಮೂಲಕ 87.70ರ ಅಮೋಘ ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ. ಇದರಲ್ಲಿ 3 ಶತಕಗಳು ಮತ್ತು 4 ಅರ್ಧಶತಕಗಳು ಸೇರಿವೆ ಎಂಬುದು ವಿಶೇಷ. ಇನ್ನು ದಕ್ಷಿಣ ಆಫ್ರಿಕಾ ನೆಲದಲ್ಲಿ ಆಡಿದ ಪ್ರವಾಸಿ ಬ್ಯಾಟ್ಸ್‌ಮನ್‌ಗಳ ಪೈಕಿ 1000ಕ್ಕೂ ಹೆಚ್ಚು ರನ್‌ ಗಳಿಸಿದವರಲ್ಲಿ ಗರಿಷ್ಠ ಬ್ಯಾಟಿಂಗ್‌ ಸರಾಸರಿಯ ದಾಖಲೆ ವಿರಾಟ್‌ ಕೊಹ್ಲಿ ಅವರದ್ದು.

‘ಭಾರತದ ಪ್ಲೇಯಿಂಗ್‌ XIನಲ್ಲಿ ರಹಾನೆಗೆ ಸ್ಥಾನ ಅನುಮಾನ’: ಚೋಪ್ರಾ!

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಟೆಸ್ಟ್‌ ತಂಡ ಹೀಗಿದೆ
ವಿರಾಟ್‌ ಕೊಹ್ಲಿ (ನಾಯಕ), ಕೆಎಲ್‌ ರಾಹುಲ್, ಮಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌, ಹನುಮ ವಿಹಾರಿ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ಆರ್‌ ಅಶ್ವಿನ್‌, ಜಯಂತ್‌ ಯಾದವ್‌, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಶಾರ್ದುಲ್‌ ಠಾಕೂರ್‌, ಮೊಹಮ್ಮದ್‌ ಸಿರಾಜ್‌, ಪ್ರಿಯಾಂಕ್ ಪಾಂಚಾಲ್‌.

ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿ
ಟೆಸ್ಟ್‌ ಸರಣಿ

  • ಪ್ರಥಮ ಟೆಸ್ಟ್‌: ಡಿಸೆಂಬರ್‌ 26-30, ಸೆಂಚೂರಿಯನ್‌
  • ದ್ವಿತೀಯ ಟೆಸ್ಟ್‌: ಜನವರಿ 03-07, ಜೊಹಾನ್ಸ್‌ಬರ್ಗ್‌
  • ತೃತೀಯ ಟೆಸ್ಟ್‌: ಜನವರಿ 11-15, ಕೇಪ್‌ ಟೌನ್‌

ಒಡಿಐ ಸರಣಿ

  • ಪ್ರಥಮ ಒಡಿಐ: ಜನವರಿ 19, ಪಾರ್ಲ್‌
  • ದ್ವಿತೀಯ ಒಡಿಐ: ಜನವರಿ 21, ಪಾರ್ಲ್
  • ತೃತೀಯ ಒಡಿಐ: ಜನವರಿ 23, ಕೇಪ್‌ ಟೌನ್‌



Read more