Karnataka news paper

ಭೂಕಬಳಿಕೆ ಆರೋಪದ ಮೇಲೆ ಬೈರತಿ ಬಸವರಾಜ್ ರಾಜೀನಾಮೆಗೆ ವಿಪಕ್ಷ ಪಟ್ಟು; ಅರ್ಧದಿನ ಕಲಾಪ ವ್ಯರ್ಥ


ಬೆಳಗಾವಿ: ಭೂಕಬಳಿಕೆ ಆರೋಪ ಎದುರಿಸುತ್ತಿರುವ ಸಚಿವ ಬೈರತಿ ಬಸವರಾಜ್‌ ರಾಜೀನಾಮೆಗೆ ಪಟ್ಟು ಹಿಡಿದ ಪ್ರತಿಪಕ್ಷ ಕಾಂಗ್ರೆಸ್‌ ಧರಣಿ ಮುಂದುವರಿಸಿದ್ದರಿಂದ ಉಭಯ ಸದನಗಳಲ್ಲೂ ಅರ್ಧ ದಿನದ ಕಲಾಪ ವ್ಯರ್ಥಗೊಂಡಿತು.

ಸೋಮವಾರ ಬೆಳಗ್ಗೆ ಆರ್‌.ಎಲ್‌ ಜಾಲಪ್ಪ ನಿಧನಕ್ಕೆ ಸಂತಾಪ ಸೂಚಕ ನಿರ್ಣಯ ಮಂಡಿಸಿದ ಬೆನ್ನಿಗೇ ಕಾಂಗ್ರೆಸ್‌ ಪ್ರತಿಭಟನೆ ಆರಂಭಿಸಿತು. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಯಬೇಕು ಎಂಬ ಹಲವು ಸದಸ್ಯರ ಬೇಡಿಕೆ ಬಗ್ಗೆ ಮೇಲ್ಮನೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು 10 ನಿಮಿಷ ಕಲಾಪ ಮುಂದೂಡಿ ಆಡಳಿತ ಮತ್ತು ಪ್ರತಿಪಕ್ಷದ ಪ್ರಮುಖರ ಜತೆ ಸಭೆ ನಡೆಸಿದರು. ಆದರೆ, ಕಲಾಪ ಪುನರಾರಂಭ ಆದಾಗಲೂ ಪ್ರತಿಪಕ್ಷದ ಧರಣಿ ನಿಲ್ಲಲಿಲ್ಲ. ಈ ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪವನ್ನು ಬರಖಾಸ್ತುಗೊಳಿಸಲಾಯಿತು. ಬಳಿಕ ಸಭಾಪತಿ ಅವರು ಭೋಜನ ವಿರಾಮ ಘೋಷಿಸಿದರು.
ಸಿಎಂ‌ ಬೊಮ್ಮಾಯಿ ಭಾವನಾತ್ಮಕ ಕಣ್ಣೀರು; ಇದು ಜಾಗ ಖಾಲಿ‌ ಮಾಡುವ ಸೂಚನೆಯೆಂದ ಸಿ.ಎಂ ಇಬ್ರಾಹಿಂ!
ವಿಧಾನಸಭೆಯಲ್ಲೂ ಗದ್ದಲದ ಮಧ್ಯೆಯೇ ಪ್ರಶ್ನೋತ್ತರ ಕಲಾಪದ ಶಾಸ್ತ್ರ ಮಾಡಲಾಯಿತು. ಅದರ ಬೆನ್ನಿಗೇ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಭೋಜನ ವಿರಾಮ ಘೋಷಿಸಿದರು. ಭೋಜನದ ಬಳಿಕ ಉಭಯ ಸದನಗಳಲ್ಲೂ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿ ವಾಪಸ್‌ ಬಂದರು. ಬಳಿಕ ಸಾರ್ವಜನಿಕ ಮಹತ್ವದ ಚರ್ಚೆ ಕೈಗೆತ್ತಿಕೊಳ್ಳಲಾಯಿತು.

ಗುಂಡೂರಾವ್‌ ಪ್ರಕರಣ ಪ್ರಸ್ತಾಪ: ಈ ಮಧ್ಯೆ ಬಿಜೆಪಿ ಸದಸ್ಯ ಎನ್‌.ರವಿಕುಮಾರ್‌, ‘ಈ ಹಿಂದೆ ಕಾಂಗ್ರೆಸ್‌ ಸರಕಾರವಿದ್ದಾಗ ಅಂದಿನ ಸಚಿವ ದಿನೇಶ್‌ ಗುಂಡೂರಾವ್‌ ಭೂಕಬಳಿಕೆ ಮಾಡಿದ್ದರ ಆರೋಪದ ಬಗ್ಗೆ ಚರ್ಚಿಸಲು ಕೇಳಲಾಗಿತ್ತು. ಆಗ ಈ ಸದನದಲ್ಲಿ ಸಭಾ ನಾಯಕರಾಗಿದ್ದ ಎಸ್‌.ಆರ್‌.ಪಾಟೀಲ್‌, ನಿಯಮಾನುಸಾರ ಈ ಚರ್ಚೆಗೆ ಅವಕಾಶವಿಲ್ಲ ಎಂದಿದ್ದರು. ಈಗ ಹೇಗೆ ಚರ್ಚೆಗೆ ಅನುಮತಿ ನೀಡಲು ಸಾಧ್ಯ? ಆಗಿನ ಕಾನೂನೇ ಈಗಲೂ ಇದೆಯಲ್ಲ?’ ಎಂದು ಹೇಳಿದರು. ದಿನೇಶ್‌ ಗುಂಡೂರಾವ್‌ ಈ ಸದನದ ಸದಸ್ಯರಲ್ಲದ ಕಾರಣದ ಅವರ ಹೆಸರು ಪ್ರಸ್ತಾಪಿಸಬಾರದೆಂದು ಎಸ್‌.ಆರ್‌.ಪಾಟೀಲ್‌ ಹೇಳಿದರು.
ಕೆಲಸಕ್ಕೆ ಬಾರದವರನ್ನ ಮುಖ್ಯಮಂತ್ರಿ ಮಾಡಿದರೆ ಮುಗಿದೋಯ್ತು; ಬಸನಗೌಡ ಪಾಟೀಲ್ ಯತ್ನಾಳ್
ಚರ್ಚೆಗೆ ಸಹಕಾರ: ‘ಸಚಿವ ಬೈರತಿ ಬಸವರಾಜ್‌ ರಾಜೀನಾಮೆ ಪಡೆದಿಲ್ಲವೆಂದು ನಾವು ಧರಣಿ ಆರಂಭಿಸಿದ್ದೆವು. ಆದರೆ, ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದು ಚರ್ಚೆಯಾಗಬೇಕಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದು, ಕನ್ನಡ ಧ್ವಜ ಸುಟ್ಟು ಹಾಕಿರುವ ಪ್ರಕರಣದ ಬಗ್ಗೆ ಪ್ರಸ್ತಾಪಿಸಬೇಕಿದೆ. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಗಮನ ಸೆಳೆಯಬೇಕಿದೆ. 40 ಪರ್ಸೆಂಟ್‌ ಕಮಿಷನ್‌ ಬಗ್ಗೆಯೂ ಚರ್ಚಿಸುತ್ತೇವೆ ಹಾಗಾಗಿ ಧರಣಿ ಹಿಂಪಡೆಯಲಾಗಿದೆ’ ಎಂದು ಸಭಾತ್ಯಾಗದ ಬಳಿಕ ಮೊಗಸಾಲೆಯಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. ಈ ಮಧ್ಯೆ ಸದನದಲ್ಲಿ ಯಾವೆಲ್ಲ ವಿಚಾರ ಕೈಗೆತ್ತಿಕೊಳ್ಳಬೇಕು ಎಂಬ ಬಗ್ಗೆ ಕಾಂಗ್ರೆಸ್‌ನ ಹಿರಿಯರು ಸಭೆ ನಡೆಸಿದರು.



Read more