Karnataka news paper

‘ಕೋಚ್‌ ಸ್ಥಾನ ಬಿಡುವಂತೆ ಮಾಡಿದ ರೀತಿ ನೋವು ತಂದಿದೆ’, ಎಂದ ಶಾಸ್ತ್ರಿ!


ಹೈಲೈಟ್ಸ್‌:

  • ಶಾಸ್ತ್ರಿ ಟೀಮ್ ಇಂಡಿಯಾ ಹೆಡ್‌ ಕೋಚ್‌ ಆಗಲೇ ಬಾರದು ಎಂದು ಬಯಸಿದ್ದರು.
  • ಮುಖ್ಯ ಕೋಚ್‌ ಹುದ್ದೆಯಿಂದ ಹೊರಬರುವಾಗ ನಡೆಸಿಕೊಂಡ ರೀತಿ ಸರಿಯಿಲ್ಲ.
  • ಬಿಸಿಸಿಐ ನಡೆಯಿಂದ ಬಹಳಾ ನೋವಾಗಿದೆ ಎಂದು ಹೇಳಿಕೊಂಡ ರವಿ ಶಾಸ್ತ್ರಿ.

ಹೊಸದಿಲ್ಲಿ: ಕ್ರಿಕೆಟ್‌ಗೂ ರವಿ ಶಾಸ್ತ್ರಿಗೂ ಅವಿನಾಭಾವ ನಂಟು. ಕ್ರಿಕೆಟ್‌ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ ಬಳಿಕ ಕಾಮೆಂಟೇಟರ್‌ ಆಗಿಯೂ ಜನಮನ ಗೆದ್ದವರು. ಬಳಿಕ ಟೀಮ್ ಇಂಡಿಯಾದ ಕೋಚಿಂಗ್‌ ಬಳಗದಲ್ಲಿ ಬರೋಬ್ಬರಿ 7 ವರ್ಷಗಳ ಕಾಲ ಅಮೋಘ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಟೀಮ್ ಇಂಡಿಯಾ ಹೆಡ್‌ ಕೋಚ್‌ ಆಗಿ ಕೆಲಸ ಮಾಡಿ ತಮ್ಮ ಸೇವೆ ಅಂತ್ಯಗೊಳಿಸಿದ್ದಾರೆ.

2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನ ಎದುರು ಫೈನಲ್‌ನಲ್ಲಿ ಸೋತ ಬಳಿಕ ಅನಿಲ್‌ ಕುಂಬ್ಳೆ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ರವಿ ಶಾಸ್ತ್ರಿ ಟೀಮ್ ಇಂಡಿಯಾದ ನೂತನ ಮುಖ್ಯ ಕೋಚ್‌ ಆಗಿ ಆಯ್ಕೆಯಾಗಿ, ಇತ್ತೀಚೆಗೆ ಅಂತ್ಯಗೊಂಡ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಅಂತ್ಯದವರೆಗೂ ಸೇವೆ ಸಲ್ಲಿಸಿದ್ದಾರೆ. ಕುಂಬ್ಳೆ ಅವಧಿಗೂ ಮುನ್ನ ಶಾಸ್ತ್ರಿ ಟೀಮ್‌ ಡೈರೆಕ್ಟರ್‌ ಆಗಿ 2 ವರ್ಷ ಕಾಲ ಕೆಲಸ ಮಾಡಿದ್ದರು.

ಅಂದಹಾಗೆ ಶಾಸ್ತ್ರಿ ಮಾರ್ಗದರ್ಶನದ ಅಡಿ ಭಾರತ ತಂಡ ಪ್ರಚಂಡ ಸಾಧನೆಗಳನ್ನೇ ಮಾಡಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ನಂ.1 ತಂಡವಾಗಿ ಮೆರೆದಾಟ ನಡೆಸಿತ್ತಲ್ಲದೆ, ಆಸ್ಟ್ರೇಲಿಯಾ ನೆಲದಲ್ಲಿ ಬ್ಯಾಕ್‌ ಟು ಬ್ಯಾಟ್‌ ಟೆಸ್ಟ್‌ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ. ಆದರೆ, ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದಷ್ಟೇ ಶಾಸ್ತ್ರಿ ಅಧಿಕಾರ ಅವಧಿಗೆ ಮೆತ್ತಿಕೊಂಡ ಮಸಿಯಾಗಿದೆ.

ಟೀಮ್‌ ಇಂಡಿಯಾದ ಮೂವರು ಯುವ ಆಟಗಾರರನ್ನು ಶ್ಲಾಘಿಸಿದ ಶಾಸ್ತ್ರಿ!

ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಶಾಸ್ತ್ರಿ, ತಮ್ಮನ್ನು ಭಾರತ ತಂಡದ ಮುಖ್ಯ ಕೋಚ್‌ ಆಗಬಾರದು ಎಂದು ಬಿಸಿಸಿಐನ ಕೆಲವರು ಶತಪ್ರಯತ್ನ ಮಾಡಿದ್ದರು ಎಂಬ ಸಂಗತಿಯನ್ನು ತೆರೆದಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಕೋಚ್‌ ಸ್ಥಾನ ಬಿಡುವಾಗ ಬಿಸಿಸಿಐ ನಡೆಸಿಕೊಂಡ ರೀತಿ ಬಹಳಾ ನೋವುಂಟು ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

“ನನ್ನ ಕಾಮೆಂಟೇಟರ್‌ ವೃತ್ತಿಬದುಕನ್ನು ಕೈಬಿಟ್ಟು ಭಾರತ ತಂಡದ ಕೋಚ್‌ ಆಗಿ ಕೂಡಲೇ ಕೆಲಸ ಆರಂಭಿಸುವಂತೆ ಕೇಳಲಾಗಿತ್ತು. ಬಳಿಕ ಬೀಜ ನೆಟ್ಟು ಹೆಮ್ಮರವನ್ನಾಗಿಸಿ ಈಗ ಫಲಕೊಡುವ ಹಂತಕ್ಕೆ ತಂದಿರುವಾಗ ನನ್ನನ್ನು ಕೋಚ್‌ ಸ್ಥಾನ ಬಿಟ್ಟುಕೊಡುವಂತೆ ಕೇಳಲಾಗಿದೆ. ನನ್ನ ಸ್ಥಾನಕ್ಕೇ ಬೇರೆಯವರನ್ನು ತರಲಾಯಿತು. ಇದು ಏತಕ್ಕಾಗಿ ಎಂದು ಯಾರೊಬ್ಬರೂ ನನಗೆ ವಿವರಿಸಲಿಲ್ಲ,” ಎಂದು ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿದ ಸಂದರ್ಶನದಲ್ಲೊ ಶಾಸ್ತ್ರಿ ಹೇಳಿದ್ದಾರೆ.

ಭಾರತ ತಂಡದಲ್ಲಿ ಶಾಸ್ತ್ರಿ ತಂದ ಅದ್ಭುತ ಬೆಳವಣಿಗೆ ವಿವರಿಸಿದ ಮಾಜಿ ಬೌಲಿಂಗ್‌ ಕೋಚ್!

ಬಹಳಾ ನೋವಾಗಿದೆ ಎಂದ ಶಾಸ್ತ್ರಿ
“ಭಾರತ ತಂಡದ ಮುಖ್ಯ ಕೋಚ್‌ ಸ್ಥಾನವನ್ನು ತೊರೆಯುವಂತ್ತಾಗಿದ್ದು ಬಹಳಾ ನೋವುಂಟು ಮಾಡಿದೆ. ಬಿಸಿಸಿಐ ಈ ವಿವಾರದಲ್ಲಿ ನಡೆದುಕೊಂಡ ರೀತಿ ಹೆಚ್ಚು ನೋವು ತಂದಿದೆ. ತಂಡಕ್ಕಾಗಿ ನನ್ನ ಕೊಡುಗೆ ಬಗ್ಗೆ ಬಿಸಿಸಿಐ ಒಂದು ಮಾತನ್ನೂ ಆಡಲಿಲ್ಲ. ನೀವು ನಮಗೆ ಬೇಡ, ನೀವೆಂದರೆ ನಮಗೆ ಇಷ್ಟವಿಲ್ಲ, ನಮಗೆ ಬೇರೆ ಕೋಚ್‌ ಬೇಕಾಗಿದ್ದಾರೆ ಎಂದು ಹೇಳುವುದಕ್ಕಿಂತಲೂ ಉತ್ತಮ ವಿಧಾನಗಳಿವೆ. ಆಗಿದ್ದಾಯಿತು, ಈಗ ನನ್ನ ಅಚ್ಚು ಮೆಚ್ಚಿನ ಕೆಲಸವಾಗಿ ಮತ್ತೆ ಟೆಲಿವಿಷನ್‌ (ಕಾಮೆಂಟೇಟರ್‌) ಕಡೆಗೆ ಸಾಗಿದ್ದೇನೆ. ಕಳೆದ 9 ತಿಂಗಳಲ್ಲಿ ಭಾರತ ತಂಡದಲ್ಲಿದ್ದ ಒಳ ರಾಜಕೀಯದ ಬಗ್ಗೆ ನನಗೆ ಕಿಂಚಿತ್ತೂ ಅರಿವಿರಲಿಲ್ಲ. ಎಲ್ಲಿ ತಪ್ಪಾಗಿದೆ? ಎಂಬುದು ಗೊತ್ತಿಲ್ಲ. ನಾನು ಬಿಟ್ಟುಬಂದ ತಂಡ ಅತ್ಯುತ್ತಮ ಸ್ಥಿತಿಯಲ್ಲಿದೆ. ಹೀಗಿರುವಾಗ 9 ತಿಂಗಳಲ್ಲಿ ಆದ ತಪ್ಪಾದರೂ ಏನು? ಎಂಬುದು ತಿಳಿಯುತ್ತಿಲ್ಲ,” ಎಂದು ಶಾಸ್ತ್ರಿ ಹೇಳಿಕೊಂಡಿದ್ದಾರೆ.

‘ನಾ ಕಟ್ಟಿದ್ದ ಭಾರತ ತಂಡಕ್ಕೆ 2 ಟ್ರೋಫಿ ಗೆಲ್ಲುವ ಸಾಮರ್ಥ್ಯವಿತ್ತು’: ಶಾಸ್ತ್ರಿ!

“ಟೀಮ್ ಇಂಡಿಯಾ ಕೋಚಿಂಗ್‌ ಬಳಗಕ್ಕೆ ನಾನು ಎರಡನೇ ಬಾರಿ ಸೇರಿದಾಗ ದೊಡ್ಡ ವಿವಾದ ನಡೆದಿತ್ತು. ಆಗ ನನ್ನನ್ನು ಭಾರತ ತಂಡದ ಕೋಚ್‌ ಆಗುವಂತೆ ತಡೆದವರ ಮುಖಕ್ಕೆ ಮೊಟ್ಟೆ ಬಿದ್ದಂತ್ತಾಗಿತ್ತು. ಏಕೆಂದರೆ ಕೋಚ್‌ ಸ್ಥಾನಕ್ಕೆ ಬೇರೆ ಅವರನ್ನು ಕರೆತಂದು 9 ತಿಂಗಳ ಬಳಿಕ ಮತ್ತೆ ನನ್ನ ಬಳಿಯೇ ಕೋಚ್‌ ಆಗುವಂತೆ ಕೇಳಿ ಮರಳಿ ಬಂದಿದ್ದರು. ನಾನಿಲ್ಲಿ ಯಾವ ವ್ಯಕ್ತಿಯ ಬಗ್ಗೆಯೂ ಬೊಟ್ಟು ಮಾಡುತ್ತಿಲ್ಲ. ಬಿಸಿಸಿಐ ಬಗ್ಗೆ ಮಾತನಾಡುತ್ತಿದ್ದೇನೆ ಅಷ್ಟೆ. ಕೆಲವರು ನಾನು ಕೋಚ್‌ ಆಗಬಾರದು ಎಂದು ಶತ ಪ್ರಯತ್ನ ಮಾಡಿದ್ದರು. ಅವರ ಜೀವನ ಇಷ್ಟೇ,” ಎಂದು ತಮ್ಮಲ್ಲಿನ ಅಸಮಾಧಾನ ತೋಡಿಕೊಂಡಿದ್ದಾರೆ.



Read more