Karnataka news paper

ಪ್ರೇಕ್ಷಕರ ಮನಮುಟ್ಟುವ ‘ಶ್ರೀ ಜಗನ್ನಾಥ ದಾಸರು’ ಚಿತ್ರ; ‘ಶ್ರೀ ಜಗನ್ನಾಥ ದಾಸರು’ ಸಿನಿಮಾ ವಿಮರ್ಶೆ


ಹರಿಕಥಾಮೃತಸಾರವನ್ನು ಸರಳವಾದ ಕನ್ನಡದಲ್ಲಿ ಬರೆದು, ದ್ವೈತ ಸಿದ್ಧಾಂತದ ಈ ಪುಟ್ಟ ಕೋಶವನ್ನು ಕನ್ನಡಿಗರಿಗೆ ಅರ್ಪಿಸಿದ ದಾಸವರೇಣ್ಯರಾದ ಶ್ರೀ ಜಗನ್ನಾಥ ದಾಸರ ಕುರಿತ ‘ಶ್ರೀ ಜಗನ್ನಾಥ ದಾಸರು‘ ಚಲನಚಿತ್ರಕ್ಕೆ ನಾಡಿನಾದ್ಯಂತ ಭರ್ಜರಿ ಸ್ಪಂದನೆ ದೊರೆತಿದೆ. ದೈವಾಂಶಸಂಭೂತ ವಿಜಯದಾಸರಿಂದ ಮಾರ್ಗದರ್ಶನ ಪಡೆದು, ಗೋಪಾಲದಾಸರಿಂದ 40 ವರ್ಷಗಳ ಜೀವದಾನವನ್ನು ಪಡೆದ ಜಗನ್ನಾಥ ದಾಸರ ಜೀವನ, ಕೃತಿಗಳ ಕುರಿತ ಚಲನಚಿತ್ರವನ್ನು ವೀಕ್ಷಕರು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ. ಚಿತ್ರಮಂದಿಗಳಲ್ಲಿ ಅಕ್ಷರಶಃ ಸಂಭ್ರಮ ಮನೆಮಾಡಿದೆ. ಹರಿದಾಸ ಸಾಹಿತ್ಯವನ್ನು ಸರಳಗನ್ನಡದಲ್ಲಿ ಪ್ರಚುರಪಡಿಸಿದ ದಾಸವರೇಣ್ಯರ ಕುರಿತು ಚಲನಚಿತ್ರ ನಿರ್ಮಾಣವಾಗಿದ್ದು ಇತ್ತೀಚಿನ ದಿನಗಳಲ್ಲಿ ಬಲು ಅಪರೂಪ. ತ್ರಿವಿಕ್ರಮ ಜೋಶಿ ನಿರ್ಮಿಸಿ, ಡಾ. ಮಧುಸೂಧನ ಹವಾಲ್ದಾರ್ ಅವರು ನಿರ್ದೇಶಿಸಿರುವ ಈ ಚಿತ್ರ ಡಿಸೆಂಬರ್ 10ರಂದು ಕರ್ನಾಟಕದಾದ್ಯಂತ ವೀಕ್ಷಕರನ್ನು ಸೆಳೆಯುತ್ತಿದೆ.

ಸ್ಟಾರ್ ಗಳಿಲ್ಲದ ಚಿತ್ರಕ್ಕೆ ಕಥೆಯೇ ನಾಯಕ
ಯಾವುದೇ ಸ್ಟಾರ್ ಗಳಿಲ್ಲದಿದ್ದರೂ, ಜಗನ್ನಾಥದಾಸರ ವಿಶಿಷ್ಟಬಗೆಯ ಕಥನವನ್ನು ಅತಿರೇಕಗಳಿಲ್ಲದೆ ಅತ್ಯಂತ ಸರಳವಾಗಿ, ಮನಮುಟ್ಟುವಂತೆ ನಿರೂಪಿಸಿರುವುದು ವೀಕ್ಷಕರ ಹೃದಯಕ್ಕೆ ನೇರವಾಗಿ ನಾಟುವಂತೆ ಮಾಡಿದೆ. ವಿಜಯದಾಸರು ರಚಿಸಿದ ‘ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ’ ಸೇರಿದಂತೆ ಬಳಸಲಾಗಿರುವ ದಾಸರ ಇತರ ಹಾಡುಗಳು ಚಿತ್ರದ ಮೆರುಗನ್ನು ಹೆಚ್ಚಿಸಿವೆ.

ದಾಸರ ವಿಶಿಷ್ಟಬಗೆಯ ಕಥೆ
18ನೇ ಶತಮಾನದಲ್ಲಿ ರಾಯಚೂರು ಜಿಲ್ಲೆಯ ಮಾನ್ವಿಯ ಬ್ಯಾಗವಟ್ಟಿಯಲ್ಲಿ ಶ್ರೀನಿವಾಸನಾಗಿ ಜನಿಸಿ, ಮಂತ್ರಾಲಯದಲ್ಲಿ ಸಂಸ್ಕೃತದಲ್ಲಿ ವೇದಾಧ್ಯಯನ ಮಾಡಿದರೂ ಕನ್ನಡದ ಬಗ್ಗೆ ತಿರಸ್ಕಾರ ಭಾವನೆ ಹೊಂದಿದ್ದ ಜಗನ್ನಾಥದಾಸ (1728-1809)ರ ಕಥಾನಕವೇ ರೋಚಕವಾಗಿದೆ. ನಂತರ ಜೀವನದಲ್ಲಿ ವಿಚಿತ್ರ ತಿರುವುಗಳನ್ನು ಪಡೆದು, ಕಡೆಗಣಿಸಿದ್ದ ಕನ್ನಡದಲ್ಲಿಯೇ ‘ಜಗನ್ನಾಥ ವಿಠಲ’ ಎಂಬ ಅಂಕಿತ ಪಡೆದು ‘ಹರಿಕಥಾಮೃತಸಾರ’ದಂಥ ಮೇರುಕೃತಿಯನ್ನು ರಚಿಸಿದ ಕಥಾನಕವೇ ರೋಮಾಂಚಕಾರಿಯಾಗಿದೆ. ಮಾನ್ವಿಯಲ್ಲಿ ವೇದಪಾಠ ಮಾಡುತ್ತಿದ್ದ ಶ್ರೀನಿವಾಸಾಚಾರ್ಯರಿಗೆ ಸಂಸ್ಕೃತದ ಬಗ್ಗೆ ಅಪಾರ ಪ್ರೇಮ, ಸಾಮಾನ್ಯ ಜನರಾಡುವ ಭಾಷೆಯಾದ ಕನ್ನಡದ ಬಗ್ಗೆ ಯಾಕೋ ತಿರಸ್ಕಾರ. ಕನ್ನಡದಲ್ಲಿ ಕೃತಿಗಳನ್ನು ಖ್ಯಾತರಾಗಿದ್ದ ದಾಸರ ಬಗ್ಗೆಯೂ ಅಗೌರವ. ವಿಜಯದಾಸರು ಮತ್ತು ಗೋಪಾಲದಾಸರು ಮಾನ್ವಿಯಲ್ಲಿದ್ದಾಗ ಒಂದು ಬಾರಿ ಶ್ರೀನಿವಾಸಾಚಾರ್ಯರನ್ನು ಹರಿಪ್ರಸಾದ ಸ್ವೀಕರಿಸಲು ಆಹ್ವಾನಿಸುತ್ತಾರೆ. ಅದಕ್ಕೆ, ‘ನನಗೆ ತಡಮಾಡಿ ಊಟ ಮಾಡಿದರೆ ಹೊಟ್ಟೆ ನೋವು ಬರುತ್ತದೆ’ ಎಂಬ ಕಾರಣ ನೀಡಿ ಅಹ್ವಾನ ನಿರಾಕರಿಸುತ್ತಾರೆ. ಇದಕ್ಕೆ ಗೋಪಾಲದಾಸರು, ಅವರೆಣಿಸಿದಂತೆಯೇ ಆಗಲಿ ಎಂದು ಹೇಳುತ್ತಾರೆ.

ಯಾವುದೇ ವೈದ್ಯರೂ ಪರಿಹಾರ ನೀಡಲಾಗದಂತಹ ಹೊಟ್ಟೆನೋವಿನಿಂದ ಶ್ರೀನಿವಾಸಾಚಾರ್ಯರು ಬಳಲು ಆರಂಭಿಸುತ್ತಾರೆ. ತಿರುಪತಿ ಶ್ರೀನಿವಾಸ, ಘಟಿಕಾಚಲದ ಸಂಜೀವರಾಯ (ಆಂಜನೇಯ), ಮಂತ್ರಾಲಯದ ರಾಯರ ಮೊರೆ ಹೋದರೂ ಉದರಬೇನೆ ಕಡಿಮೆಯಾಗುವುದಿಲ್ಲ. ಆಗ ಮಂತ್ರಾಲಯದಲ್ಲಿ, ತಾವು ಅವಮಾನಿಸಿದ ವಿಜಯದಾಸರು ಮತ್ತು ಗೋಪಾಲದಾಸರಲ್ಲಿ ತಪ್ಪೊಪ್ಪಿಕೊಂಡು ಶರಣಾಗುವುದೇ ಪರಿಹಾರವೆಂದು ಸ್ವಪ್ನದಲ್ಲಿ ದೇವರ ಅಣತಿ ದೊರೆಯುತ್ತದೆ. ವಿಜಯದಾಸರಿಗೆ ಮತ್ತು ಗೋಪಾಲದಾಸರಲ್ಲಿ ತಮ್ಮ ತಪ್ಪಿನ ಅರಿಕೆಯನ್ನು ಮಾಡಿಕೊಂಡ ನಂತರ, ತಾವೂ ದಾಸರಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ ಶ್ರೀನಿವಾಸಾಚಾರ್ಯರು. ಪಂಢರಾಪುರದ ವಿಠ್ಠಲನ ಬಳಿಯೇ ಹೋಗಿ ಕೇಳು ಎಂದು, ಆಚಾರ್ಯರಿಗೆ ತಮ್ಮ 40 ವರ್ಷಗಳ ಆಯಸ್ಸನ್ನೇ ಧಾರೆಯೆರೆದ ಗೋಪಾಲದಾಸರು ಹೇಳಿ ಅಲ್ಲಿಗೆ ಕಳಿಸುತ್ತಾರೆ. ಚಂದ್ರಭಾಗಾ ನದಿಯಲ್ಲಿ ಮುಳಿಗೇಳುವಾಗ ಜಗನ್ನಾಥ ವಿಠ್ಠಲ ಎಂಬ ಕಲ್ಲು ಹರಿದುಬಂದು ಶ್ರೀನಿವಾಸಾಚಾರ್ಯರನ್ನು ಜಗನ್ನಾಥದಾಸರನ್ನಾಗಿಸುತ್ತದೆ.

‘ಶ್ರೀ ಜಗನ್ನಾಥ ದಾಸರು’ ಚಿತ್ರದ ಆಡಿಯೋ ರಿಲೀಸ್ ಮಾಡಿದ ಪೇಜಾವರ ಶ್ರೀಗಳು

ಸದ್ಯದಲ್ಲಿಯೇ ಬರಲಿದೆ ಭಾಗ 2
ಇಲ್ಲಿಗೆ ಶ್ರೀ ಜಗನ್ನಾಥ ದಾಸರು ಚಲನಚಿತ್ರದ ಮೊದಲ ಭಾಗ ಮುಕ್ತಾಯವಾಗಿದೆ. ಎರಡನೇ ಭಾಗ ಸದ್ಯದಲ್ಲಿಯೇ ಬರಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ. ಮೊದಲ ಭಾಗವನ್ನು ಅಪಾರವಾಗಿ ಮೆಚ್ಚಿರುವ ವೀಕ್ಷಕರು ಎರಡನೇ ಭಾಗಕ್ಕೆ ಕಾತುರದಿಂದ ಕಾಯುವಂತೆ ನಿರ್ದೇಶಕರು ಮಾಡಿದ್ದಾರೆ. ಚಿತ್ರದ ಯಶಸ್ಸು ನಿಂತಿರುವುದೇ ಜಗನ್ನಾಥದಾಸರ ವಿಶಿಷ್ಟಬಗೆಯ ಕಥೆ, ಆ ಕಥೆಯ ಸರಳವಾದ ನಿರೂಪಣೆ, ಅದ್ಭುತವಾದ ಸಿನೆಮಾಟೋಗ್ರಫಿ ಮತ್ತು ಕಲಾವಿದರ ಅತಿರೇಕವಿಲ್ಲದ ಅಭಿನಯದಲ್ಲಿ. ಜಗನ್ನಾಥ ದಾಸರಾಗಿ ನೀನಾಸಂ ಪ್ರತಿಭೆ ಶರತ್ ಜೋಶಿ, ಗೋಪಾಲದಾಸರಾಗಿ ಪ್ರಭಂಜನ ದೇಶಪಾಂಡೆ, ವಿಜಯದಾಸರಾಗಿ ತ್ರಿವಿಕ್ರಮ ಜೋಶಿ ಮತ್ತು ಜಗನ್ನಾಥ ದಾಸರ ಹೆಂಡತಿಯಾಗಿ ನಿಶ್ಚಿತಾ ರಾವ್ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ.

Sri Jagannatha Daasaru movie review



Read more