Karnataka news paper

ಪಾದಯಾತ್ರೆ: ನಾನಿಲ್ಲದೆ ಮೈಸೂರಿನ ಸಭೆ ಬೇಡ ಡಿಕೆಶಿಗೆ ಸಿದ್ದರಾಮಯ್ಯ ಸಲಹೆ


ಬೆಳಗಾವಿ (ಸುವರ್ಣ ವಿಧಾಸೌಧ): ‘ನಾನು ಇಲ್ಲದೆ ಮೈಸೂರಿನಲ್ಲಿ ನೀವು ಸಭೆ ಮಾಡಬೇಡಿ. ಅದು ಸರಿಯಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಮೇಕೆದಾಟು ಯೋಜನೆಯ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಹಮ್ಮಿಕೊಳ್ಳಲಿರುವ ಪಾದಯಾತ್ರೆಗೆ ಪೂರ್ವಭಾವಿಯಾಗಿ ಇದೇ 23ರಂದು ಮೈಸೂರಿನಲ್ಲಿ ಪಕ್ಷದ ಶಾಸಕರ ಸಭೆ ನಡೆಸಲು ಶಿವಕುಮಾರ್‌ ನಿರ್ಧರಿಸಿದ್ದರು. ಸದನ ನಡೆಯುತ್ತಿರುವ ಮಧ್ಯೆ ಸಭೆ ನಡೆಸಲು ಮುಂದಾಗಿರುವ ಶಿವಕುಮಾರ್ ಕ್ರಮಕ್ಕೆ ಮೈಸೂರು ಭಾಗದ ಶಾಸಕರು ಮತ್ತು ಮಾಜಿ‌ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಪಕ್ಷದ ಶಾಸಕ ಕೆ.ಜೆ. ಜಾರ್ಜ್‌ ಜೊತೆ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಡಿ.ಕೆ. ಶಿವಕುಮಾರ್‌ ಬಂದರು. ಆಗ, ಶಿವಕುಮಾರ್‌ ಅವರನ್ನು ಕರೆದು ಸಿದ್ದರಾಮಯ್ಯ,  ‘ಮೈಸೂರು – ಚಾಮರಾಜನಗರ ಭಾಗದ ಸಭೆ ಮಾಡಬೇಡಿ. ಸುದ್ದಿಗೋಷ್ಠಿಯನ್ನೂ ನಡೆಸಬೇಡಿ. ಕೊಡಗು ಜಿಲ್ಲೆಯಲ್ಲಿ ಬೇಕಾದರೆ ಸಭೆ ಮಾಡಿ’ ಎಂದರು.

ಸಿದ್ದರಾಮಯ್ಯ ಅವರಿಗೆ ಸಮಜಾಯಿಷಿ ಕೊಡಲು ಶಿವಕುಮಾರ್ ಮುಂದಾದರು. ‘ಇಲ್ಲ ಸರ್… ನಾನು ಧ್ರುವನಾರಾಯಣ್‌ ಜೊತೆ ಮಾತಾಡಿದ್ದೆ. ಹೋಗಲಿ, ಸಭೆ ಮಾಡಲ್ಲ ಬಿಡಿ’ ಎಂದರು.

‘ಎಲ್ಲರೂ ಅಧಿವೇಶನದಲ್ಲಿ ಇರುತ್ತಾರೆ. ಇಂಥ ಸಂದರ್ಭದಲ್ಲಿ ಅಲ್ಲಿ ಸಭೆ ನಡೆಸುವುದು ಬೇಡ. ನಾವಿಬ್ಬರು ಒಟ್ಟಿಗೆ ಇಲ್ಲದೇ ಇದ್ದರೆ ತಪ್ಪು ಸಂದೇಶ ರವಾನೆ ಆಗಲಿದೆ. ಬೇಕಾದರೆ ಕೊಡಗು ಭಾಗದಲ್ಲಿ ಸಭೆ ಮಾಡಿ’ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಮಧ್ಯಪ್ರವೇಶಿಸಿದ ಕೆ. ಜೆ. ಜಾರ್ಜ್, ‘ನೀವು ಸಭೆ ಕರೆಯುವಾಗ ಸಾಹೇಬ್ರ ಗಮನಕ್ಕೆ ತರಬೇಕಾಗಿತ್ತು ಸರ್’ ಎಂದು ಶಿವಕುಮಾರ್‌ಗೆ ಹೇಳಿದರು.



Read more from source