Source : The New Indian Express
ಬೆಂಗಳೂರು: ಹಲವು ವರ್ಷಗಳ ಹಿಂದೆಯೇ ತಮ್ಮ ತಾಯಿ ಮತಾಂತರಗೊಂಡಿದ್ದರೂ ಈಗೇಕೆ ಗೂಳಿಹಟ್ಟಿ ಚಂದ್ರಶೇಖರ್ ಅವರು ಮತಾಂತರ ವಿಚಾರವನ್ನು ಪ್ರಸ್ತಾಪಿಸಿದರು ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಧ್ರುವನಾರಾಯಣ್ ಅವರು, ಗೂಳಿಹಟ್ಟಿ ಚಂದ್ರಶೇಖರ್ ಅವರ ತಾಯಿ ಹಲವು ವರ್ಷಗಳ ಹಿಂದೆಯೇ ಮತಾಂತರಗೊಂಡಿದ್ದರು. ಆದರೆ, ಈಗ ಆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಆರ್’ಎಸ್ಎಸ್ ಕೈಗೊಂಬೆಯಾದ ಬಳಿಕ ಗೂಳಿಹಟ್ಟಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆಂದು ಆರೋಪಿಸಿದ್ದಾರೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿತೆ ತರಲು ಹೊರಟಿರುವುದು ಗಂಭೀರವಾದ ವಿಚಾರ. ದೇಶದಲ್ಲಿ ಕೋಮು ಸೌಹಾರ್ದ ಹಾಳು ಮಾಡಲು ಹಾಗೂ ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ಈ ಕಾಯ್ದೆ ತರಲಾಗುತ್ತಿದೆ. ಇದರಲ್ಲಿ ರಾಜ್ಯದ ಹಿತ ಇಲ್ಲ. ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ವಿರೋಧಿಸುತ್ತೇವೆ. ಅನುಮೋದನೆಗೆ ಅವಕಾಶ ನೀಡುವುದಿಲ್ಲ. ಹಾಗೊಂದು ವೇಳೆ ಮತಾಂತರ ಕಾಯ್ದೆ ಜಾರಿಗೆ ತಂದರೆ 2023ರಲ್ಲಿ ನಾವೇ ಅಧಿಕಾರಕ್ಕೆ ಬಂದು ಕಾಯ್ದೆ ಹಿಂಪಡೆಯುತ್ತೇವೆಂದು ತಿಳಿಸಿದ್ದರು.