Karnataka news paper

ಉಪ್ಪಿನಂಗಡಿ ಪ್ರಕರಣದ ಆರೋಪಿಗಳ ಮೇಲೆ ದೇಶದ್ರೋಹ ಕೇಸು ದಾಖಲಿಸಿ: ವಿಎಚ್‌ಪಿ ಆಗ್ರಹ


ಹೈಲೈಟ್ಸ್‌:

  • ಉಪ್ಪಿನಂಗಡಿಯಲ್ಲಿ ಡಿಸೆಂಬರ್ 14 ರಂದು ನಡೆದಿದ್ದ ಘಟನೆ
  • ಪಿಎಫ್‌ಐ – ಎಸ್‌ಡಿಪಿಐನ ಕಾರ್ಯಕರ್ತರು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ನುಗ್ಗಿದ್ದರು
  • ಪೊಲೀಸರ ಮೇಲೆ ದಾಳಿ ನಡೆಸಿದ್ದ ಕಾರ್ಯಕರ್ತರು

ಪುತ್ತೂರು (ದಕ್ಷಿಣ ಕನ್ನಡ): ಉಪ್ಪಿನಂಗಡಿ ಪೊಲೀಸ್‌ ಠಾಣೆಯ ಮೇಲೆ ದಾಳಿ ನಡೆಸಿದ ಆರೋಪಿಗಳ ಮೇಲೆ ದೇಶ ದ್ರೋಹದ ಕೇಸು ದಾಖಲಿಸಬೇಕು ಎಂದು ವಿಶ್ವ ಹಿಂದೂ ಪರಿಷದ್‌ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಮತ್ತು ಬಜರಂಗ ದಳದ ದಕ್ಷಿಣ ಪ್ರಾಂತ ಸಂಯೋಜಕ ಮುರಳಿ ಹಸಂತಡ್ಕ ಆಗ್ರಹಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಉಪ್ಪಿನಂಗಡಿಯಲ್ಲಿ ಡಿಸೆಂಬರ್ 14 ರಂದು ಪಿಎಫ್‌ಐ – ಎಸ್‌ಡಿಪಿಐನ ಕಾರ್ಯಕರ್ತರು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಬಹಳ ಆತಂಕಕಾರಿ ಘಟನೆಯಾಗಿದೆ. ಜನರ ರಕ್ಷಣೆ ಮಾಡುವಂತಹ ಪೊಲೀಸರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದು, ಜಿಲ್ಲೆಯ ಸಮಸ್ತ ನಾಗರಿಕ ಸಮಾಜ ಈ ಕೃತ್ಯದಿಂದ ಭಯಭೀತರಾಗಿದ್ದಾರೆ ಎಂದರು.

ವಿಎಚ್‌ಪಿ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಮಾತನಾಡಿ, ಪಿಎಫ್‌ಐ ಕಾರ್ಯಕರ್ತರು ಅವರದೇ ಅಂಬುಲೆನ್ಸ್‌ನಲ್ಲಿ ತಲವಾರು, ಸೋಡಾ ಬಾಟಲಿಗಳು, ಕಲ್ಲುಗಳು, ಇನ್ನಿತರ ಮಾರಕ ಆಯುಧಗಳ ಸಹಿತ ಪೊಲೀಸರ ಮೇಲೆ ದಾಳಿ ನಡೆಸಿ ಅವರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದು ಮಾತ್ರವಲ್ಲದೆ, ಪಕ್ಕದ ಮಸೀದಿಯಿಂದ 500ಕ್ಕಿಂತಲೂ ಹೆಚ್ಚು ಜನರು ಏಕಾಏಕಿ ಬಂದು ಪೊಲೀಸ್‌ ಸ್ಟೇಷನ್‌ನ ಕಿಟಕಿ ಗಾಜು ಪುಡಿ ಮಾಡಿ ಇಲಾಖೆಯ ವಾಹನಗಳನ್ನು ಧ್ವಂಸ ಮಾಡಿದ್ದಾರೆ.

ಈ ಘಟನೆಯಲ್ಲಿ ಡಿವೈಎಸ್ಪಿ ಗಾನ ಪಿ. ಕುಮಾರ್‌, ಎಸ್‌ಐ ಪ್ರಸನ್ನ ಮತ್ತು ಮಹಿಳಾ ಸಿಬ್ಬಂದಿ ಸೇರಿದಂತೆ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ. ಈ ಕೃತ್ಯವು ಪೂರ್ವ ಯೋಜಿತವಾಗಿದ್ದು, ಕೇರಳ ಭಾಗ ಮತ್ತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವಾರು ಜಿಹಾದಿ ಮಾನಸಿಕತೆ ಇರುವ ಯುವಕರು ಈ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಇದೊಂದು ಭಯೋತ್ಪಾದಕ ಕೃತ್ಯವಾಗಿದೆ ಎಂದು ಆರೋಪಿಸಿದರು.

ಉಪ್ಪಿನಂಗಡಿಯಲ್ಲಿ ಪ್ರತಿಭಟನೆ, ಗಲಾಟೆ: ಪೊಲೀಸರಿಂದ 3 ಪ್ರಕರಣ ದಾಖಲು.. ಬಿಗಿ ಬಂದೋಬಸ್ತ್..
ಬೆಂಗಳೂರಿನಲ್ಲಿ ಕೂಡ ಡಿ. ಜೆ. ಹಳ್ಳಿ, ಕೆ. ಜೆ. ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಇವರು ಇಂತದ್ದೇ ಕೃತ್ಯ ಎಸಗಿದ್ದು, ಅಲ್ಲಿ ಪೊಲೀಸ್‌ ವಾಹನ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದ್ದಾರಲ್ಲದೆ ಪೊಲೀಸ್‌ ಠಾಣೆ ಮತ್ತು ಹತ್ತಾರು ಮನೆಗಳನ್ನು ಧ್ವಂಸ ಮಾಡಿದ್ದಾರೆ. ಅಲ್ಲಿಯ ಘಟನೆಯನ್ನು ಖಂಡಿಸಿ ಸರಕಾರ ಆರೋಪಿಗಳ ಮೇಲೆ ದೇಶದ್ರೋಹದ ಕೇಸುಗಳನ್ನು ದಾಖಲಿಸಿತ್ತು.

ಉಪ್ಪಿನಂಗಡಿಯಲ್ಲಿ ಕೂಡ ನಡೆದಂತಹ ಈ ಭಯಾನಕ ಕೃತ್ಯ ದೇಶದ ಸುರಕ್ಷತೆ ವ್ಯವಸ್ಥೆ ಮೇಲಣ ದಾಳಿಯಾಗಿದ್ದು, ಈ ನಿಟ್ಟಿನಲ್ಲಿ ಕಾನೂನು ಬಾಹಿರ ಕೃತ್ಯವನ್ನು ಎಸಗಿದಂತಹ ಪಿಎಫ್‌ಐ – ಎಸ್‌ಡಿಪಿಐ ಸಂಘಟನೆಯ ಕಾರ್ಯಕರ್ತರ ಮೇಲೆ ದೇಶ ದ್ರೋಹದ ಕೇಸುಗಳನ್ನು ದಾಖಲಿಸಬೇಕು ಎಂದು ಆಗ್ರಹಿಸಿದರು.

ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆದ ಉಪ್ಪಿನಂಗಡಿ ಪೊಲೀಸರ ವಿರುದ್ಧ ಪ್ರತಿಭಟನೆ: ಲಾಠಿ ಚಾರ್ಜ್, ನಿಷೇಧಾಜ್ಞೆ ಜಾರಿ..!
ಮೀನು ಮಾರಾಟಗಾರರಾದ ಅಶೋಕ್‌, ಮೋಹನ್‌ ಮತ್ತು ಮಹೇಶ್‌ ಭಂಡಾರಿ ಎಂಬುವರ ಮೇಲೆ 5 ಬೈಕ್‌ಗಳಲ್ಲಿ ಬಂದ ಕಾರ್ಯಕರ್ತರು ತಲವಾರಿನಿಂದ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ 3 ಜನರನ್ನು ಮಾತ್ರ ಪೊಲೀಸರು ಬಂಧಿಸಿದ್ದು, ಇನ್ನೂ 10 ಪ್ರಮುಖ ಆರೋಪಿಗಳ ಬಂಧನವಾಗಿಲ್ಲ. ಅವರನ್ನು ಬಂಧಿಸಲು ಪೊಲೀಸರು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಪೊಲೀಸ್‌ ಠಾಣೆಗೆ ದಾಳಿ ನಡೆಸಿದ ಪ್ರಕರಣದಲ್ಲಿ ಕೇವಲ 10 ಜನರನ್ನು ಬಂಧಿಸಿದ್ದು, ನೂರಾರು ಜನರ ಬಂಧನವಾಗಬೇಕಾಗಿದೆ.

ಆರೋಪಿಗಳು ಅರೋಗ್ಯದ ಸುಳ್ಳು ನೆಪವೊಡ್ಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರನ್ನು ಬಂಧಿಸಲು ಕ್ರಮ ಕೈಗೊಂಡಿಲ್ಲ. ಪೊಲೀಸ್‌ ಇಲಾಖೆ ಎಸ್‌ಡಿಪಿಐ ಪಿಎಫ್‌ಐ ಸಂಘಟನೆಗಳ ಒತ್ತಡಕ್ಕೆ ಮಣಿದು ಎರಡು ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು. ವಿಶ್ವ ಹಿಂದೂ ಪರಿಷತ್‌ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಜಿಲ್ಲಾಕಾರ್ಯದರ್ಶಿ ಸತೀಶ್‌, ಶ್ರೀಧರ ತೆಂಕಿಲ ಉಪಸ್ಥಿತರಿದ್ದರು.

ಉಪ್ಪಿನಂಗಡಿ ಗಲಭೆ ಪ್ರಕರಣ: 10 ಮಂದಿಯ ಬಂಧನ, ಪೊಲೀಸರ ದೂರಿನಲ್ಲಿ ಏನಿದೆ?



Read more