ಹೈಲೈಟ್ಸ್:
- ಬ್ಯಾಂಕ್ ಹಗರಣ ಅಧಿವೇಶನದಲ್ಲಿ ಚರ್ಚಿಸಲು ಒತ್ತಾಯ
- 5 ಲಕ್ಷಕ್ಕಿಂತ ಹೆಚ್ಚಿನ ಠೇವಣಿ ಇಟ್ಟವರಿಗೆ ಪರಿಹಾರ ಹೇಗೆಂದು ತಿಳಿಸಲು ಆಗ್ರಹ
- ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಒತ್ತಾಯ
ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಠೇವಣಿದಾರರು ಮುಂದಾದಾಗ ಮುಖ್ಯದ್ವಾರದ ಬಳಿ ಪೊಲೀಸರು ತಡೆದು ನಿಲ್ಲಿಸಿದರು. ಠೇವಣಿದಾರರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದು ಸುವರ್ಣ ಸೌಧದ ಮುಂದೆ ಪ್ರತಿಭಟನೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದಾಗ ಎಲ್ಲರೂ ಸೇರಿ ಕಾಲ್ನಡಿಗೆಯಲ್ಲಿ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಹಿತ ರಕ್ಷಣಾ ವೇದಿಕೆಯ ಮುಖ್ಯ ಪೋಷಕ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವು ಠೇವಣಿದಾರರು ಭಾಗಿಯಾಗಿದ್ದರು. ಬ್ಯಾಂಕ್ ವ್ಯವಹಾರ ತನಿಖೆಯನ್ನು ಸಿಬಿಐಗೆ ವಹಿಸುವುದು ಮತ್ತು ಪೂರ್ತಿ ಪ್ರಮಾಣದ ಪರಿಹಾರ ಇನ್ನೂ ಬಾರದಿದ್ದರಿಂದ ಹಗರಣದ ಬಗ್ಗೆ ಸಮಗ್ರವಾಗಿ ಸದನದಲ್ಲಿ ಚರ್ಚೆ ಆಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬ್ಯಾಂಕ್ ಅಧಿಕಾರಿಗಳಾಗಲಿ, ಆಡಳಿತ ಮಂಡಳಿಯಾಗಲಿ ಡೆಪಾಸಿಟ್ ಇನ್ಸೂರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಹಣ ಬಂದ ನಂತರ ಪೂರ್ತಿ ಪ್ರಮಾಣದ ಹಣ ಯಾವ ರೀತಿ ಕೊಡಿಸುವುದು ಇದರ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಬ್ಯಾಂಕಿನಲ್ಲಿ ಹಣ ಇಟ್ಟಿರುವ ನೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಂತ್ರಸ್ತ ಕುಟುಂಬದವರಿಗೆ ಸ್ಥಳೀಯ ಶಾಸಕರು ಅಥವಾ ಸಂಸದರು ಒಂದೇ ಒಂದು ಸಾಂತ್ವಾನದ ಮಾತನಾಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
”ಡಿಐಸಿಜಿಸಿ ವಿಮೆಯ ಹಣ ಸಾರ್ವಜನಿಕರ ಹಣ. ದೇಶದ ಎಲ್ಲಾ ಬ್ಯಾಂಕ್‌ಗಳು ಈ ವಿಮೆಯನ್ನು ಗ್ರಾಹಕರ ಹಣದಿಂದಲೇ ಕಟ್ಟುತ್ತಿದೆ. ಅದರಲ್ಲೂ ಈ ವಿಮೆಯ ಹಣ ಠೇವಣಿದಾರರಿಗೆ ಸಿಕ್ಕಿರುವುದು ಹಗರಣ ಬೆಳಕಿಗೆ ಬಂದ ಎರಡು ವರ್ಷಗಳ ನಂತರ. ಈ ಎರಡು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಜನ ಠೇವಣಿದಾರರು ಸಾವನ್ನಪ್ಪಿದ್ದು, ಉಳಿದವರು ನಿತ್ಯ ಜೀವನ ಮಾಡಲು ಬೇರೆ ದಾರಿಯಿಲ್ಲದೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ.
ಇದೀಗ ಬಂದಿರುವಂತಹ ಹಣದಿಂದ ಜನ ಸಾಲವನ್ನು ತಿರಿಸಬೇಕೋ ಅಥವಾ ನಿತ್ಯ ಜೀವನ ನಿರ್ವಹಣೆಗೆ ಬಳಸಬೇಕೋ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. 5ಲಕ್ಷಕ್ಕಿಂತ ಹೆಚ್ಚು ಹಣ ಠೇವಣಿ ಇಟ್ಟಿರುವ ಸುಮಾರು 10ರಿಂದ 11 ಸಾವಿರ ಗ್ರಾಹಕರಿಗೆ ಯಾವ ರೀತಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸಬೇಕು. ಇದರ ಜೊತೆಗೆ ತಕ್ಷಣವೇ ಅವರ ಹಣ ಬಡ್ಡಿ ಸಮೇತ ಕೊಡಿಸುವ ಕೆಲಸ ಮಾಡಬೇಕಾಗಿದೆ” ಎಂದು ಡಾ. ಶಂಕರ್‌ಗುಹಾ ದ್ವಾರಕನಾಥ್ ಆಗ್ರಹಿಸಿದ್ದಾರೆ.
”ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಈ ಹಗರಣಗಳಿಂದ ಜನ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಅರಿವು ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ವಂಚಕರು ಆರಾಮವಾಗಿ ಎಲ್ಲಾ ಕಡೆ ಓಡಾಡಿಕೊಂಡು ಸುಖವಾಗಿ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ ಶಾಸಕರು, ಸಂಸದರು ಈಗಲಾದರೂ ಎಚ್ಚೆತ್ತುಕೊಂಡು ಕೇಂದ್ರ ಮತ್ತು ರಾಜ್ಯ ಸರಕಾರ ಮೇಲೆ ಒತ್ತಡ ತಂದು ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮಾಡಬೇಕು” ಎಂದು ಡಾ. ಶಂಕರ್‌ಗುಹಾ ದ್ವಾರಕನಾಥ್ ಬೆಳ್ಳೂರು ಒತ್ತಾಯಿಸಿದ್ದಾರೆ.