ಹೈಲೈಟ್ಸ್:
- ಪಿರಿಯಾಪಟ್ಟಣದ ಮಹದೇಶ್ವರ ಬಡಾವಣೆಯಲ್ಲಿ ಘಟನೆ
- ವಿಜಯೇಂದ್ರ ಎಂಬುವವರ ಮನೆಯ ಮ್ಯಾನ್‌ಹೋಲ್ ಶುಚಿಗೊಳಿಸಲು ಕರೆತಂದಿದ್ದರು
- ಮಧುವಿಗೆ ಉಸಿರಾಟಕ್ಕೆ ತೀವ್ರ ತೊಂದರೆಯಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು
ಪಿರಿಯಾಪಟ್ಟಣದ ಮಹದೇಶ್ವರ ಬಡಾವಣೆ ನಿವಾಸಿ ಮಧು (27) ಮೃತರು. ಪಟ್ಟಣದ ಕೃಷ್ಣಾಪುರ ರಸ್ತೆಯ ಬಳಿ ಇರುವ ಅಂಗನವಾಡಿ ಶಿಕ್ಷಕಿ ನಾಗರತ್ನ ಎಂಬುವವರು ಮೂವರು ಪೌರ ಕಾರ್ಮಿಕರನ್ನು ಪಟ್ಟಣದ ವಿಜಯೇಂದ್ರ ಎಂಬುವವರ ಮನೆಯ ಮ್ಯಾನ್‌ಹೋಲ್ ಶುಚಿಗೊಳಿಸಲು ಕರೆತಂದಿದ್ದರು ಎನ್ನಲಾಗಿದೆ. ಬಳಿಕ ಮಧುವಿಗೆ ಉಸಿರಾಟಕ್ಕೆ ತೀವ್ರ ತೊಂದರೆಯಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮಧು ಮೃತಪಟ್ಟಿದ್ದಾರೆ.
ಘಟನೆ ವಿವರ: ವಿಜಯೇಂದ್ರ ಅವರ ಮನೆಯಲ್ಲಿ ಬಾಡಿಗೆಗೆ ಇರುವ ನಾಗರತ್ನ ಎಂಬವವರು ಯಾವುದೇ ರಕ್ಷಣೆ ಇಲ್ಲದೆ ಪೌರ ಕಾರ್ಮಿಕರಾದ ರಾಜೇಶ್, ಮಧು, ವಿಶ್ವ ಎಂಬುವವರಿಂದ ಶುಕ್ರವಾರ ಮ್ಯಾನ್‌ಹೋಲ್ ಸ್ವಚ್ಛಗೊಳಿಸುತ್ತಿದ್ದರು ಎನ್ನಲಾಗಿದೆ. ಪುರಸಭೆಯ ಅಧಿಕಾರಿಗಳ ಗಮನಕ್ಕೆ ಬಾರದಂತೆ ಈ ಕೆಲಸ ಮಾಡಿಸುತ್ತಿರುವುದು ಸರಿಯಲ್ಲ ಎಂದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸಫಾಯಿ ಕರ್ಮಚಾರಿ ಜಾಗೃತ ಸಮಿತಿ ಸದಸ್ಯ ಎಚ್. ಕೆ. ಮಹೇಶ್ ಮತ್ತು ಪುರಸಭೆ ಆರೋಗ್ಯ ನಿರೀಕ್ಷಕ ಆದರ್ಶ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿ ಕೆಲಸವನ್ನು ಸ್ಥಗಿತಗೊಳಿಸಿದ್ದರು.
ಬಂಧನ, ಬಿಡುಗಡೆ
ಪುರಸಭೆ ಹೆಲ್ತ್ ಇನ್ಸ್‌ಪೆಕ್ಟರ್ ಆದರ್ಶ ನೀಡಿದ ದೂರಿನ ಮೇರೆಗೆ ನಾಗರತ್ನ ಅವರನ್ನು ಬಂಧಿಸಿ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜಾಮೀನು ದೊರಕಿದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಮಧು ಸಾವಿನ ನಂತರ ಪತ್ನಿ ಅಭಿರಾಮಿ ನೀಡಿರುವ ದೂರು ಆಧರಿಸಿ ನಾಗರತ್ನ ಮೇಲೆ ದಲಿತ ದೌರ್ಜನ್ಯ ಕಾಯಿದೆ ಮತ್ತು ಐಪಿಸಿ 304 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಎಸ್‌ಪಿ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿಕ್ಕು ತೋಚದಂತಾದ ಕುಟುಂಬ
ಮಧು ಅವರ ತಂದೆ ಅನಿಲ್ ರಾಜ್ ಗಾರೆ ಕೆಲಸ ಮಾಡಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಪಟ್ಟಣದ ಮಹದೇಶ್ವರ ಬಡಾವಣೆಯಲ್ಲಿ ಸರಕಾರ ನೀಡಿದ ಸೈಟ್ ಪಡೆದು ಚಿಕ್ಕದೊಂದು ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. ಮಧು ಸಣ್ಣ ಪುಟ್ಟ ಕೂಲಿ ಕೆಲಸ, ಸ್ವಚ್ಛತಾ ಕೆಲಸಗಳನ್ನು ಮಾಡುತ್ತಾ ಜೀವನ ನಡೆಸುತ್ತಿದ್ದರು. ಮೃತರಿಗೆ ಪತ್ನಿ ಅಭಿರಾಮಿ ಹಾಗೂ 6 ವರ್ಷದ ಚೈತ್ರಾ, ಮೂರು ವರ್ಷದ ಗೌತಮ್ಮ ಎಂಬ ಚಿಕ್ಕ ಮಕ್ಕಳಿದ್ದು ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.
‘ಇಂತಹ ಘಟನೆಗಳು ಮೈಸೂರು ಜಿಲ್ಲೆಯಲ್ಲಿ ಮರುಕಳಿಸುತ್ತಿರುವುದು ಅಮಾನವೀಯವಾಗಿದ್ದು, ಸರಕಾರ ಈ ಬಗ್ಗೆ ಗಮನಹರಿಸಬೇಕು. ಅನ್ಯಾಯಕ್ಕೆ ಒಳಗಾದ ಮಧು ಕುಟುಂಬಕ್ಕೆ ಸರಕಾರದಿಂದ ನೌಕರಿ ನೀಡಬೇಕು. 2013ರ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಆಕ್ಟ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ರಾಜ್ಯ ಕರ್ನಾಟಕ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಡಿ. ಆರ್. ರಾಜು ಆಗ್ರಹಿಸಿದ್ದಾರೆ.
ಪೌರ ಕಾರ್ಮಿಕನ ಮೃತದೇಹವಿಟ್ಟು ಪ್ರತಿಭಟನೆ : 10 ಲಕ್ಷ ರೂ. ಪರಿಹಾರ
ಮ್ಯಾನ್‌ಹೋಲ್ ಸ್ವಚ್ಛತೆಗೆ ಇಳಿದು ಅಸ್ವಸ್ಥಗೊಂಡು ಮೃತಪಟ್ಟ ಪೌರ ಕಾರ್ಮಿಕ ಮಧು ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮೃತದೇಹವಿಟ್ಟು ಪ್ರತಿಭಟನೆ ನಡೆಸಲಾಯಿತು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೌರ ಕಾರ್ಮಿಕರ ಅಹವಾಲು ಸ್ವೀಕರಿಸಿದರು. ಬಳಿಕ ಸಂಬಂಧಿಸಿದವರೊಂದಿಗೆ ಮಾತನಾಡಿ, 10 ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು.
ಮಾಜಿ ಮೇಯರ್ ನಾರಾಯಣ್, ಪೌರ ಕಾರ್ಮಿಕರ ಸಂಘದ ಉನ್ನತ ಸಮಿತಿ ಅಧ್ಯಕ್ಷ ಎಂ. ಮಾರ, ರಾಜ್ಯಾಧ್ಯಕ್ಷ ಡಿ. ಆರ್. ರಾಜು, ಆದಿ ದ್ರಾವಿಡ ಸಂಘದ ಅಧ್ಯಕ್ಷ ಮಂಚಯ್ಯ, ಮಾಜಿ ಅಧ್ಯಕ್ಷ ಆರ್ಮುಗಂ, ಕಾರ್ಯದರ್ಶಿ ದಿನೇಶ್, ಮಹಾ ಪ್ರಧಾನ ಕಾಯದರ್ಶಿ ಅರುಣ್ ಕುಮಾರ್, ನಾಗರಾಜು, ಸಫಾರಿ ಕರ್ಮಚಾರಿ ಆಯೋಗದ ಸದಸ್ಯ ಮಹೇಶ್, ನಗರ ಉಪಾಧ್ಯಕ್ಷ ಎಂ. ರಾಜೀವ್ ದೊರೆ ಇನ್ನಿತರರು ಉಪಸ್ಥಿತರಿದ್ದರು.