Karnataka news paper

ಬ್ರಿಟನ್ ನಲ್ಲಿ ಕ್ರಿಸ್ಮಸ್ ನಂತರ ಎರಡು ವಾರಗಳ ಲಾಕ್ ಡೌನ್!


Source : Online Desk

ಲಂಡನ್: ವೇಗವಾಗಿ ಹರಡುತ್ತಿರುವ ಕೊರೋನಾ ಓಮಿಕ್ರಾನ್ ರೂಪಾಂತರಿಯನ್ನು ನಿಗ್ರಹಿಸಲು ಕ್ರಿಸ್ಮಸ್ ನ ಎರಡು ವಾರಗಳ ನಂತರ ಲಾಕ್ ಡೌನ್ ಜಾರಿಗೊಳಿಸಲು ಬ್ರಿಟನ್ ಸರ್ಕಾರ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಕೋವಿಡ್-19 ತಡೆಗೆ ವೈಜ್ಞಾನಿಕ ಸಲಹಾ ಗುಂಪು, ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಮುಂದೆ ಇರಿಸಲಾದ ಹಲವಾರು ಪ್ರಸ್ತಾಪಗಳಲ್ಲಿ ಎರಡು ವಾರಗಳ ಲಾಕ್ ಡೌನ್ ಶಿಫಾರಸು ಒಂದಾಗಿದೆ.

ಬ್ರಿಟನ್ ನಲ್ಲಿ ಗುರುವಾರ 88,376, ಶುಕ್ರವಾರ 93,045 ಪ್ರಕರಣಗಳು ಕಂಡುಬಂದಿವೆ. ಲಂಡನ್ ನಲ್ಲಿ ಶುಕ್ರವಾರ ಒಂದೇ ದಿನ 26,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿರುವುದರಿಂದ ನಗರ ಮೇಯರ್ ಸಾದಿಕ್ ಖಾನ್ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಒಂದೆಡೆ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮತ್ತೊಂದು ಕಡೆ ಸಿಬ್ಬಂದಿ ಕೊರತೆ ತೀವ್ರವಾಗುತ್ತಿದೆ. ಜೊತೆಗೆ ಲಂಡನ್, ಸ್ಕಾಟ್ಲೆಂಡ್ ಗಳಲ್ಲಿ ಅತಿ ಹೆಚ್ಚು ಓಮಿಕ್ರಾನ್ ಪ್ರಕರಣಗಳು ವರದಿಯಾಗುತ್ತಿವೆ.

ನೆದರ್ಲೆಂಡ್ಸ್ ನಲ್ಲಿ ಭಾನುವಾರದಿಂದ ಕಟ್ಟು ನಿಟ್ಟಾದ ಲಾಕ್ ಡೌನ್ ಹೇರುವುದಾಗಿ ಹಂಗಾಮಿ ಪ್ರಧಾನಿ ಮಾರ್ಕ್ ರುಟ್ಟೆ ಘೋಷಿಸಿದ್ದಾರೆ. ಓಮಿಕ್ರಾನ್ ನೊಂದಿಗೆ ಐದನೇ ಅಲೆ ಅನಿವಾರ್ಯ್ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಫ್ರಾನ್ಸ್ ಹೊಸ ವರ್ಷದ ಆಚರಣೆಗಳನ್ನು ನಿಷೇಧಿಸಿದೆ. ಜನವರಿ ಆರಂಭದ ವೇಳೆಗೆ ಓಮಿಕ್ರಾನ್ ಹೆಚ್ಚುವ ಸಾಧ್ಯತೆಯಿದೆ. ಐದನೇ ಅಲೆ ಬಂದೇ ಬಿಟ್ಟಿದೆ ಎಂದು ಫ್ರಾನ್ಸ್ ಪ್ರಧಾನಿ ಜೀನ್ – ಕೋಸ್ಟಾಕ್ಸ್ ಘೋಷಿಸಿದ್ದಾರೆ. 

ಕೊರೋನಾ ಹೊಸ ರೂಪಾಂತರಿ ಓಮಿಕ್ರಾನ್ 89 ದೇಶಗಳಲ್ಲಿ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದು ಡೆಲ್ಟಾಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ಎಚ್ಚರಿಸಿದೆ. ಹರಡುವಿಕೆ ಹೆಚ್ಚಿರುವ ಪ್ರದೇಶಗಳಲ್ಲಿ 1.5-3 ದಿನಗಳಲ್ಲಿ ದ್ವಿಗುಣಗೊಳ್ಳುತ್ತದೆ. ಲಭ್ಯವಿರುವ ಅಂಕಿ ಅಂಶಗಳ ಆಧಾರದ ಮೇಲೆ ಸಂಸ್ಥೆ ಶುಕ್ರವಾರ ವರದಿ ಬಿಡುಗಡೆ ಮಾಡಿದೆ.



Read more