ಹೈಲೈಟ್ಸ್:
- ಮಂಡ್ಯ ನಗರದ ಕಲ್ಲಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ನಡೆದಿದ್ದ ಕೊಲೆ
- ಶನಿವಾರ ರಾತ್ರಿ ನಡೆದಿದ್ದ ಯುವಕ ರಕ್ಷಿತ್ ಕೊಲೆ ಪ್ರಕರಣ
- ಕೊಲೆಯಾದ ರಕ್ಷಿತ್ ಮತ್ತು ಐದು ಮಂದಿ ಆರೋಪಿಗಳೆಲ್ಲರೂ ಸ್ನೇಹಿತರು
ತಾಲೂಕು ಹೊಳಲು ಗ್ರಾಮದ ಮಾದೇಶ, ಕಾಶಿ, ಮಂಜು, ಕಾರ್ತಿಕ್ ಎಂಬುವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಇತರ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಲೆಯಾದ ರಕ್ಷಿತ್ ಮತ್ತು ಐದು ಮಂದಿ ಆರೋಪಿಗಳೆಲ್ಲರೂ ಸ್ನೇಹಿತರು. ಆದರೆ, ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ 2 – 3 ದಿನಗಳ ಹಿಂದೆ ರಕ್ಷಿತ್ ಜತೆ ಗಲಾಟೆ ಮಾಡಿಕೊಂಡಿದ್ದರು. ಅಲ್ಲದೆ ಕಾರ್ತಿಕ್‌ನ ಚಿಕ್ಕಪ್ಪನಿಗೆ ರಕ್ಷಿತ್ ಹಲ್ಲೆ ಮಾಡಿದ್ದ. ಇದರಿಂದ ಅಸಮಾಧಾನಗೊಂಡ ಆರೋಪಿಗಳು, ನಿನ್ನ ಬಳಿ ಮಾತನಾಡಬೇಕಿದೆ ಎಂದು ಹೇಳಿ ಮಂಡ್ಯ ನಗರದ ಕಲ್ಲ ಹಳ್ಳಿ ರೈಲ್ವೆ ಹಳಿ ಬಳಿಗೆ ರಕ್ಷಿತ್‌ನನ್ನು ಕರೆಸಿಕೊಂಡಿದ್ದಾರೆ. ರಾತ್ರಿ 10.30ರ ಸಮಯದಲ್ಲಿ ಬೈಕ್‌ನಲ್ಲಿ ಬಂದ ರಕ್ಷಿತ್ ಮತ್ತು ಸಂಬಂಧಿಯನ್ನು ಅಡ್ಡಗಟ್ಟಿ ಡ್ರ್ಯಾಗರ್‌ನಿಂದ ರಕ್ಷಿತ್ ಹೊಟ್ಟೆಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ವಿವರಿಸಿದರು.
ಈ ಸಂಬಂಧ ಮೃತ ರಕ್ಷಿತ್ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪಶ್ಚಿಮ ಠಾಣೆ ಪೊಲೀಸರು, ಎಎಸ್ಪಿ ವಿ. ಧನಂಜಯ, ಡಿವೈಎಸ್ಪಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡಗಳನ್ನು ರಚಿಸಿ ಪರಾರಿಯಾಗಿದ್ದ ಮೇಲ್ಕಂಡ ಆರೋಪಿಗಳನ್ನು ಹೊಳಲು ಗ್ರಾಮದಲ್ಲಿ ಭಾನುವಾರ ರಾತ್ರಿ ಬಂಧಿಸಿದ್ದಾರೆ. ಆರೋಪಿಗಳ ಪತ್ತೆ ಕಾರ‍್ಯದಲ್ಲಿ ಇನ್ಸ್‌ಪೆಕ್ಟರ್ ಜಿ. ಎಂ. ರಮೇಶ್, ಎಎಸ್‌ಐ ಮಾದೇಶ, ಸಿಬ್ಬಂದಿಗಳಾದ ಲೋಕೇಶ್, ಸಿದ್ದಪ್ಪ ಹೂಗಾರ್, ಮಹೇಶ್, ಸತ್ಯಪ್ಪ, ಸಿ. ಆರ್. ಸತೀಶ್, ರಮೇಶ್, ಸುರೇಶ್ ಸೇರಿದಂತೆ ಇತರು ಭಾಗವಹಿಸಿದ್ದರು ಎಂದು ತಿಳಿಸಿದರು.
ರೌಡಿಸಂ ಮರುಕಳಿಸದಂತೆ ಮುನ್ನಚ್ಚರಿಕೆ
ಮಂಡ್ಯ ಜಿಲ್ಲೆಯಲ್ಲಿ ರೌಡಿಸಂ ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಎಲ್ಲ ರೌಡಿ ಶೀಟರ್‌ಗಳಿಗೂ ಸೂಚನೆ ನೀಡಿದ್ದು, ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಎಸ್ಪಿ ಎನ್. ಯತೀಶ್ ತಿಳಿಸಿದರು.
ಮಂಡ್ಯ ನಗರದಲ್ಲಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಅಗತ್ಯವಿರುವ ಕಡೆಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು. ಅಲ್ಲದೆ, ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಸಿಗ್ನಲ್ ಲೈಟ್‌ಗಳೂ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಎಸ್ಪಿ ಹೇಳಿದರು.
ಅಕ್ಕಿ ಪ್ರಕರಣ ತನಿಖೆ
ಮಂಡ್ಯ ನಗರದ ಕೈಗಾರಿಕಾ ಪ್ರದೇಶದಲ್ಲಿ ಪತ್ತೆಯಾದ ಪಡಿತರ ಅಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಳವಳ್ಳಿ ವೃತ್ತ ನಿರೀಕ್ಷಕ ಸುನೀಲ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ವಿ. ಧನಂಜಯ, ಡಿವೈಎಸ್‌ಪಿ ಟಿ. ಮಂಜುನಾಥ್ ಹಾಜರಿದ್ದರು.