Karnataka news paper

‘ಕನ್ನಡ ಭಾಷೆಗಾಗಿ ನಾನು ಪ್ರಾಣ ನೀಡಲು ಸಿದ್ಧ’- ಧ್ವಜ ಸುಟ್ಟ ಪುಂಡರ ವಿರುದ್ಧ ಶಿವಣ್ಣ ಗರಂ


ಹೈಲೈಟ್ಸ್‌:

  • ಬೆಳಗಾವಿಯಲ್ಲಿ ಮಿತಿಮೀರಿದ ಭಾಷಾ ವಿರೋಧಿಗಳ ಪುಂಡಾಟಿಕೆ
  • ಕನ್ನಡ ಧ್ವಜಕ್ಕೆ ಬೆಂಕಿ, ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಹಾನಿ
  • ಭಾಷಾ ವಿರೋಧಿಗಳಿಗೆ ಎಚ್ಚರಿಕೆ ನೀಡಿದ ಶಿವರಾಜ್‌ಕುಮಾರ್‌

ಬೆಳಗಾವಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಧ್ವಜ ಸುಟ್ಟ ದುಷ್ಕೃತ್ಯದ ಬಗ್ಗೆ ಈಗಾಗಲೇ ಅವರು ಟ್ವೀಟ್ ಮೂಲಕ, ‘ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ’ ಎಂದು ಪ್ರತಿಕ್ರಿಯೆ ನೀಡಿದ್ದರು. ಭಾನುವಾರ (ಡಿ.19) ನಡೆದ ‘ಬಡವ ರಾಸ್ಕಲ್‌‘ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ವೇಳೆ ಭಾಗಿಯಾಗಿದ್ದ ಅವರು, ‘ನಮ್ಮ ಭಾಷೆಗೆ ನಾವು ಪ್ರಾಣ ಕೊಡೋಕೂ ರೆಡಿ ಇದ್ದೇವೆ. ನಮಗೂ ಮರ್ಯಾದೆ ಕೊಡಬೇಕು. ನಾವು ಮರ್ಯಾದೆ ಕೊಡುತ್ತೇವೆ’ ಎಂದು ಖಡಕ್ ಆಗಿ ಹೇಳಿದ್ದಾರೆ.

ನಾನು ಹುಟ್ಟಿದ್ದು ಚೆನ್ನೈನಲ್ಲಿ

‘ಭಾರತದಲ್ಲಿರುವ ಎಲ್ಲರಿಗೂ ಅವರವರ ಭಾಷೆ ಮುಖ್ಯ. ನಾವು ಯಾವ ರಾಜ್ಯದಲ್ಲಿ ಇರುತ್ತಿವೋ ಆ ರಾಜ್ಯದ ಭಾಷೆಗೆ, ಧ್ವಜಕ್ಕೆ ಮರ್ಯಾದೆ ಕೊಡೋದು ಎಲ್ಲರ ಧರ್ಮ. ನಾನು ಹುಟ್ಟಿದ್ದು ಚೆನ್ನೈನಲ್ಲಿ. ನಾನು ಶಾಲೆಯಲ್ಲಿ ಮೂರನೇ ಭಾಷೆಯನ್ನಾಗಿ ತಮಿಳನ್ನು ಕಲಿತಿದ್ದೇನೆ. ನಂಗೆ ಅಲ್ಲಿ ಫ್ರೆಂಡ್ಸ್ ಇದ್ರು. ತಮಿಳು ಸಿನಿಮಾ ನೋಡ್ತಾ ಇದ್ವಿ. ಅಷ್ಟೇ ಅಲ್ಲ, ತೆಲುಗು, ಹಿಂದಿ, ಪಂಜಾಬಿ, ಮರಾಠಿ, ಗುಜರಾತಿ.. ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತೇನೆ. ಯಾಕೆ ನೋಡುತ್ತೇವೆಂದರೆ, ಕಲಿಬೇಕು ಅನ್ನೋ ಕಾರಣಕ್ಕೆ. ಅದಕ್ಕೊಂದು ಮರ್ಯಾದೆ ಕೊಡಬೇಕು. ಹಾಗೆಯೇ ನಾವೆಲ್ಲರೂ ಕರ್ನಾಟಕದಲ್ಲಿ ಇದ್ದಾಗ, ಕರ್ನಾಟಕವನ್ನು ಪ್ರೀತಿ ಮಾಡಬೇಕು’ ಎಂದು ಶಿವಣ್ಣ ಹೇಳಿದ್ದಾರೆ.

ಕೋಪ ಬಂದ್ರೆ ಯಾವ ಮಟ್ಟಕ್ಕೆ ಬೇಕಾದ್ರೂ ಹೋಗತ್ತೆ

‘ನಮಗೆ ಪವರ್ ಇಲ್ಲ ಅಂತ ಯಾರು ಅಂದುಕೊಳ್ಳಬಾರದು. ಮನುಷ್ಯಂಗೆ ಕೋಪ ಬಂದ್ರೆ ಯಾವ ಮಟ್ಟಕ್ಕೆ ಬೇಕಾದ್ರೂ ಹೋಗತ್ತೆ. ಮತಗಳಿಗಾಗಿ ಸರ್ಕಾರ ಹಿಂದೆ ಮುಂದೆ ನೋಡಬಾರದು. ಸರ್ಕಾರ ಇದರ ವಿರುದ್ಧ ಹೋರಾಟ ಮಾಡಬೇಕು. ನಮ್ಮ ಭಾಷೆಗಾಗಿ ನಾವು ಹೋರಾಡಬೇಕು. ಈಗೆಲ್ಲ ಟ್ವೀಟ್ ಮಾಡೋದು ಪ್ಯಾಷನ್ ಆಗಿಹೋಗಿದೆ. ಅದನ್ನು ಮಾಡೋದ್ರಿಂದ ಏನೂ ಯೂಸ್ ಆಗಲ್ಲ. ಬೇರೆ ಥರ ಆಗಬೇಕು. ನಮಗೂ ಮರ್ಯಾದೆ ಕೊಡಬೇಕು. ನಾವು ಮರ್ಯಾದೆ ಕೊಡುತ್ತೇವೆ. ನಮ್ಮ ಭಾಷೆಗೆ ನಾವು ಪ್ರಾಣ ಕೋಡೋಕು ರೆಡಿ ಇದ್ದೇವೆ’ ಎಂದು ಶಿವಣ್ಣ ಹೇಳಿದರು. ಆಗ ನೆರೆದಿದ್ದವರು, ‘ಹಾಗೆಲ್ಲ ಹೇಳಬೇಡಿ ಶಿವಣ್ಣ..’ ಎಂದು ಬೇಸರ ಮಾಡಿಕೊಂಡರು. ನಂತರ ಮಾತನಾಡಿದ ಶಿವಣ್ಣ, ‘ನಾನಿನ್ನೂ 100 ವರ್ಷ ಇರಬೇಕು ಅಂತ ಆಸೆ ಪಡ್ತಿನಿ. ಜೀವನ ಅನ್ನೋದು ಗಿಫ್ಟ್‌. ವಿನಾಕಾರಣ ಹೋಗಬಾರದು. ಬೇರೆ ಥರ ಹೋದಾಗ ಏನೂ ಮಾಡೋಕೆ ಆಗಲ್ಲ’ ಎಂದರು.

Kannada Flag: ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳ ವಿರುದ್ಧ ಶಿವಣ್ಣ, ಜಗ್ಗೇಶ್ ಕೆಂಡಾಮಂಡಲ
ಯಾರೇ ತಪ್ಪು ಮಾಡಿದ್ದರೂ, ಬಿಡಬೇಡಿ
‘ಸರ್ಕಾರದಲ್ಲಿ ನನ್ನ ಮನವಿ ಇಷ್ಟೇ, ದಯವಿಟ್ಟು ನೀವು ಸ್ಟ್ರಾಂಗ್ ಆಗಿರಿ. ಯಾರೇ ತಪ್ಪು ಮಾಡಿದ್ದರೂ, ಬಿಡಬೇಡಿ. ನಮ್ಮೋರು ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿ, ಬೇರೆಯವರು ತಪ್ಪು ಮಾಡಿದ್ದರು ಶಿಕ್ಷೆ ಆಗಲಿ. ನಮ್ಮೋರು ತಪ್ಪು ಮಾಡಿದ್ದನ್ನು ನಾನು ಕೇಳಿಲ್ಲ. ನಾವು ಎಲ್ಲರಿಗೂ ಜಾಗ ಕೊಡುತ್ತೇವೆ. ನಾವು ಯಾರನ್ನೂ ದ್ವೇಷ ಮಾಡಲ್ಲ. ನಾನೇ ಮೊದಲ ದಿನ ನಂದಮೂರಿ ಬಾಲಕೃಷ್ಣ ಅವರ ‘ಅಖಂಡ’ ಸಿನಿಮಾಕ್ಕೆ ಹೋಗಿದ್ದೆ. ಯಾಕೆ ಹೋಗ್ತಿನಿ? ಬಾಲಕೃಷ್ಣ ಮೇಲಿರುವ ಒಂದು ಮರ್ಯಾದೆ. ಎಲ್ಲ ಸಿನಿಮಾಗಳನ್ನು ಎಲ್ಲರೂ ನೋಡಬೇಕು. ಜಾಸ್ತಿ ಕನ್ನಡ ಸಿನಿಮಾಗಳನ್ನು ನೋಡಬೇಕು. ಇದಕ್ಕೆ ಎಲ್ಲರ ಸಪೋರ್ಟ್ ಇರಬೇಕು’ ಎಂದರು ಶಿವರಾಜ್‌ಕುಮಾರ್.

ಎಂಇಎಸ್ ಪುಂಡಾಟಿಕೆ: ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ; ಬಿಗಿ ಪೊಲೀಸ್ ಬಂದೋಬಸ್ತ್!



Read more