Karnataka news paper

ಕೆ.ಎಲ್‌ ರಾಹುಲ್‌ ಭಾರತ ಟೆಸ್ಟ್‌ ತಂಡದ ಭವಿಷ್ಯದ ನಾಯಕ ಎಂದ ಬಟ್‌!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ.
  • ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್ ಭಾರತ ಟೆಸ್ಟ್‌ ತಂಡದ ಭವಿಷ್ಯದ ನಾಯಕ: ಬಟ್‌.
  • ಡಿಸೆಂಬರ್‌ 26 ರಿಂದ ಸೆಂಚೂರಿಯನ್‌ನಲ್ಲಿ ಆರಂಭವಾಗಲಿರುವ ಮೊದಲನೇ ಟೆಸ್ಟ್.

ಹೊಸದಿಲ್ಲಿ: ಭಾರತ ಟೆಸ್ಟ್‌ ತಂಡದ ಭವಿಷ್ಯದ ನಾಯಕ ಕೆ.ಎಲ್‌ ರಾಹುಲ್‌ ಎಂದು ಪಾಕಿಸ್ತಾನ ಮಾಜಿ ನಾಯಕ ಸಲ್ಮಾನ್‌ ಬಟ್‌ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದಕ್ಕೆ ಕಾರಣವೇನೆಂಬುದನ್ನು ಅವರು ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಸ್ನಾಯುಸೆಳೆತದ ಗಾಯಕ್ಕೆ ತುತ್ತಾಗಿದ್ದರಿಂದ ನೂತನ ಉಪ ನಾಯಕ ರೋಹಿತ್‌ ಶರ್ಮಾ ಡಿಸೆಂಬರ್‌ 26 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ಅವರಿಗೆ ಉಪ ನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ.

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಸಲ್ಮಾನ್‌ ಬಟ್‌ ಟೀಮ್‌ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ಅವರ ಹೋರಾಟದ ಸ್ವಭಾವ ಹಾಗೂ ಯೋಗ್ಯ ನಾಯಕತ್ವವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಕನ್ನಡಿಗರೇ ಓಪನರ್ಸ್‌! ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಭಾರತ ಸಂಭಾವ್ಯ ಪ್ಲೇಯಿಂಗ್‌ XI ಇಂತಿದೆ..

“ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್‌ ತಂಡವನ್ನು ಕೆ.ಎಲ್‌ ರಾಹುಲ್‌ ಮುನ್ನಡೆಸಿದ್ದರು. ಅವರು ಸಭ್ಯ ನಾಯಕ. ಆಟದ ಬಗ್ಗೆ ಅವರಿಗೆ ಅತ್ಯುತ್ತಮ ಜ್ಞಾನವಿದೆ. ಪಂಜಾಬ್‌ ತಂಡ ಅಷ್ಟೊಂದು ಶಕ್ತಿಯುತವಾಗಿಲ್ಲವಾದರೂ ಅವರು ಏಕಾಂಗಿಯಾಗಿ ಹೋರಾಟ ನಡೆಸಿದ್ದರು. ವಿಕೆಟ್‌ ಕೀಪಿಂಗ್‌ ಜೊತೆಗೆ ಇನಿಂಗ್ಸ್ ಆರಂಭಿಸುತ್ತಿದ್ದ ಅವರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಭವಿಷ್ಯದ ನಾಯಕನನ್ನಾಗಿ ನೋಡಿದಾಗ ಮಾತ್ರ ನೀವು ಅವರನ್ನು ಉಪ ನಾಯಕನನ್ನಾಗಿ ಮಾಡುತ್ತೀರಿ. ಈ ನಿಟ್ಟಿನಲ್ಲಿ ರಾಹುಲ್‌ ಟೆಸ್ಟ್‌ ತಂಡದ ಭವಿಷ್ಯದ ನಾಯಕ,” ಎಂದು ಬಟ್‌ ತಿಳಿಸಿದ್ದಾರೆ.

ದ. ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಗೆಲುವಿನ ಭಾರವನ್ನು ಬೌಲರ್‌ಗಳ ಮೇಲೆ ಹೊರಿಸಿದ ಪೂಜಾರ!

ಭಾರತ ಟೆಸ್ಟ್‌ ಸರಣಿ ಗೆಲ್ಲಲಿದೆ: ಬಟ್‌

ದಕ್ಷಿಣ ಆಫ್ರಿಕಾ ಮಣ್ಣಿನಲ್ಲಿ ಈ ಬಾರಿ ಭಾರತ ತಂಡ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ಸೃಷ್ಟಿಸಲಿದೆ ಎಂದು ಭವಿಷ್ಯ ನುಡಿದ ಸಲ್ಮಾನ್‌ ಬಟ್‌, ಆತಿಥೇಯ ತಂಡದ ಬೌಲಿಂಗ್‌ ಲೈನ್ ಅಪ್‌ ಅತ್ಯಂತ ಬಲಶಾಲಿಯಾಗಿದ್ದು ಕೊಹ್ಲಿ ಬಳಗದ ಬ್ಯಾಟ್ಸ್‌ಮನ್‌ಗಳು ಅತ್ಯಂತ ಎಚ್ಚರದಿಂದ ಬ್ಯಾಟಿಂಗ್‌ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಆರಂಭಿಕ ಹಾಗೂ ಅನುಭವಿ ಬ್ಯಾಟ್ಸ್‌ಮನ್ ರೋಹಿತ್‌ ಶರ್ಮಾ ಅನುಪಸ್ಥಿತಿ ಭಾರತ ತಂಡಕ್ಕೆ ಕಾಡಲಿದೆ ಎಂದು ಅವರು ಹೇಳಿದರು. 1992/93ರ ಆವೃತ್ತಿಯಿಂದ ಇಲ್ಲಿಯವರೆಗೂ ಭಾರತ ತಂಡ, ದಕ್ಷಿಣ ಆಫ್ರಿಕಾ ನೆಲದಲ್ಲಿ 7 ಟೆಸ್ಟ್‌ ಪಂದ್ಯಗಳಾಡಿದ್ದು, 6ರಲ್ಲಿ ಸೋತು ಇನ್ನೊಂದೆ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

‘ಭಾರತದ ಪ್ಲೇಯಿಂಗ್‌ XIನಲ್ಲಿ ರಹಾನೆಗೆ ಸ್ಥಾನ ಅನುಮಾನ’: ಚೋಪ್ರಾ!

“ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಯಲ್ಲಿ ಈ ಬಾರಿ ಭಾರತ ಗೆಲುವು ಪಡೆಯಲಿದೆ. ಆದರೆ, ಇದು ಅಷ್ಟೊಂದು ಸುಲಭವಲ್ಲ. ದಕ್ಷಿಣ ಆಫ್ರಿಕಾ ತಂಡ ತುಂಬಾ ಆಕ್ರಮಣಕಾರಿಯಾಗಿದ್ದು, ಅವರ ಕಡೆ ಅತ್ಯುತ್ತಮ ಫಾಸ್ಟ್ ಬೌಲರ್‌ಗಳಿದ್ದಾರೆ. ಆದರೆ ಭಾರತ ತಂಡಕ್ಕೆ ಟೆಸ್ಟ್‌ ಸರಣಿ ಗೆಲ್ಲುವ ಎಲ್ಲಾ ಸಾಮರ್ಥ್ಯವಿದೆ. ಅಂದಹಾಗೆ ರೋಹಿತ್‌ ಶರ್ಮಾ ಅಲಭ್ಯತೆ ಖಂಡಿತಾ ತಂಡಕ್ಕೆ ಕಾಡಲಿದೆ,” ಎಂದು ಸಲ್ಮಾನ್‌ ಬಟ್‌ ಅಭಿಪ್ರಾಯ ಪಟ್ಟರು.

ರೋಹಿತ್‌ ಶರ್ಮಾ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಭಾರತ ‘ಎ’ ತಂಡದ ನಾಯಕ ಪ್ರಿಯಾಂಕ್‌ ಪಾಂಚಲ್‌ಗೆ ಮುಖ್ಯ ತಂಡದಲ್ಲಿ ಚೊಚ್ಚಲ ಅವಕಾಶ ನೀಡಲಾಗಿದೆ. ಡಿಸೆಂಬರ್‌ 26ರಿಂದ ಸೆಂಚೂರಿಯನ್ ಮೈದಾನದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಸೆಣಸಲಿವೆ.

‘ದಕ್ಷಿಣ ಆಫ್ರಿಕಾ ಪ್ರವಾಸ ರಾಹುಲ್ ದ್ರಾವಿಡ್‌ಗೂ ಅಗ್ನಿ ಪರೀಕ್ಷೆ’ ಎಂದ ಸೋಢಿ!



Read more