Karnataka news paper

ಮೇಕೆದಾಟು ಯೋಜನೆ ಆರಂಭಿಸಲು ಸರ್ಕಾರ ನಿರ್ಲಕ್ಷ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌


ಹೈಲೈಟ್ಸ್‌:

  • ಕಾಂಗ್ರೆಸ್‌ ಅಧಿಕಾರದಲ್ಲಿದ್ದ ವೇಳೆ ಮೇಕೆದಾಟು ಯೋಜನೆ ಕಾಮಗಾರಿಗೆ ಡಿಪಿಆರ್‌
  • ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ
  • ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಖ್ಯಮಂತ್ರಿಗಳು ಹಾಗೂ ಸಚಿವರು ವಿಫಲ: ಧ್ರುವನಾರಾಯಣ್ ಆರೋಪ

ಮದ್ದೂರು (ಮಂಡ್ಯ): ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದರೂ ಮೇಕೆದಾಟು ಯೋಜನೆಯನ್ನು ತ್ವರಿತ ಗತಿಯಲ್ಲಿ ಆರಂಭಿಸಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಆರೋಪಿಸಿದರು.

ಮದ್ದೂರು ಪಟ್ಟಣದ ಶಿವಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದ ವೇಳೆ ಮೇಕೆದಾಟು ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಡಿಪಿಆರ್‌ ರಚನೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾದರೂ ಬಳಿಕ ಬಂದ ಬಿಜೆಪಿ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು.

ಕೇಂದ್ರ ಪರಿಸರ ಇಲಾಖೆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಇದುವರೆಗೂ ಅನುಮೋದನೆ ನೀಡಿಲ್ಲವೆಂದರಲ್ಲದೇ, ಕೇಂದ್ರದ ಸಚಿವರೊಟ್ಟಿಗೆ ಚರ್ಚಿಸಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಖ್ಯಮಂತ್ರಿಗಳು ಹಾಗೂ ಸಚಿವರು ವಿಫಲರಾಗಿದ್ದು, ಸರಕಾರ ಕೂಡಲೇ ತ್ವರಿತಗತಿಯಲ್ಲಿ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಂಡು ಕಾವೇರಿ ಕೊಳ್ಳದ ರೈತರಿಗೆ, ಜನತೆಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಈ ಯೋಜನೆಯಿಂದಾಗಿ ಬೆಂಗಳೂರು ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವ ಜತೆಗೆ ದೂರದೃಷ್ಟಿ ಮುಂದಾಲೋಚನೆ ಪರಿಣಾಮವಾಗಿ 20 ರಿಂದ 30 ವರ್ಷದ ಸಮಗ್ರ ಯೋಜನೆ ಇದಾಗಲಿದ್ದು, ಸುಮಾರು 60 ಟಿಎಂಸಿ ನೀರು ಶೇಖರಣೆ ಮಾಡಿ ವಿದ್ಯುತ್‌ ಉತ್ಪಾದನೆ ಮಾಡುವ ಜತೆಗೆ ಹಲವಾರು ಅನುಕೂಲಗಳನ್ನು ಕಲ್ಪಿಸಬಹುದಾಗಿದೆ ಎಂದರು.

ಮೇಕೆದಾಟು ಯೋಜನೆ ಜಾರಿಗೆ ಪ್ರತಿಪಕ್ಷಗಳ ಒತ್ತಡ: ಪ್ರಧಾನಿಯನ್ನು ಭೇಟಿಯಾಗಲಿರುವ ಬಸವರಾಜ ಬೊಮ್ಮಾಯಿ
ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ನೇತೃತ್ವದಲ್ಲಿ ಜನವರಿ 9 ರಿಂದ 19 ರವರೆಗೆ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದು, ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುವುದಾಗಿ ಹೇಳಿದರು.

ಸ್ಥಳ ಪರಿಶೀಲನೆ: ಡಿಸೆಂಬರ್ 28 ರಂದು ಶಿವಪುರದ ಐತಿಹಾಸಿಕ ಧ್ವಜ ಸತ್ಯಾಗ್ರಹ ಸೌಧದ ಆವರಣದಲ್ಲಿ ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆಯನ್ನು ಆಯೋಜಿಸಲು ಮುಂದಾಗಿದ್ದು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌, ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್‌, ಮುನಿಯಪ್ಪ ಇನ್ನಿತರೆ ನಾಯಕರು ಸಭೆಯಲ್ಲಿ ಭಾಗವಹಿಸಲಿರುವುದಾಗಿ ಹೇಳಿದರು.

ಮೇಕೆದಾಟು ಯೋಜನೆಗಾಗಿ ಹೊಸ ಹೋರಾಟ; ಡಿಸೆಂಬರ್‌ನಲ್ಲಿ ವಾಟಾಳ್‌ ನಾಗರಾಜ್‌ ಮೇಕೆಗಳ ಮೆರವಣಿಗೆ
ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಲಿದ್ದು, ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಶಿವಪುರದಿಂದ ಪಟ್ಟಣದ ಪೇಟೆ ಬೀದಿಯುದ್ಧಕ್ಕೂ ಬೈಕ್‌ ಸಮಾವೇಶ ನಡೆಸಿ ಬಳಿಕ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ವಿತರಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಸಿ. ಡಿ. ಗಂಗಾಧರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ಕೆಪಿಸಿಸಿ ಸದಸ್ಯ ಎಸ್‌. ಗುರುಚರಣ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿ. ಸಂದರ್ಶ, ಎಸ್‌. ಸಿ. ವಿಭಾಗದ ಜಿಲ್ಲಾಧ್ಯಕ್ಷ ಸುರೇಶ್‌ ಕಂಠಿ, ಕಾರ್ಮಿಕ ವಿಭಾಗದ ಅಧ್ಯಕ್ಷ ಸತೀಶ್‌, ಮಹಿಳಾ ಅಧ್ಯಕ್ಷ ಅಂಜನಾ ಶ್ರೀಕಾಂತ್‌, ಯಶೋಧಗೌಡ, ಅಪ್ಪಾಜೀ ಗೌಡ ಇತರರಿದ್ದರು.

ಕಾಂಗ್ರೆಸ್ ಪಾದಯಾತ್ರೆ: ಮೇಕೆದಾಟು, ಸಂಗಮಕ್ಕೆ ಭಾನುವಾರ ಭೇಟಿ ನೀಡಿ ಡಿಕೆಶಿ ಪರಿಶೀಲನೆ



Read more