
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನಗಳನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಹುಟ್ಟಿಕೊಂಡ ಪೀಪಲ್ಸ್ ಅಲೆಯನ್ಸ್ ಫಾರ್ ಗುಪ್ಕಾರ್ ಡಿಕ್ಲೆರೇಷನ್ (ಪಿಎಜಿಡಿ) ಇನ್ನೂ ಅಸ್ತಿತ್ವದಲ್ಲಿದ್ದು, ತನ್ನದೇ ಆದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದರು.
ಬಾರಾಮುಲ್ಲಾದಲ್ಲಿ ಶನಿವಾರ ನಡೆದ ಪಕ್ಷದ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಜಿಸಿ ಮುಖಂಡರು ಮುಂದಿನ ಕಾರ್ಯತಂತ್ರ ರೂಪಿಸಲು ಇತ್ತೀಚೆಗೆ ಸಭೆ ಮಾಡಿದ್ದಾರೆ. ಅದರ ಅಸ್ತಿತ್ವ ಫಲಿತಾಂಶದಲ್ಲಿ ಕಾಣಿಸಬೇಕೆ ಹೊರತು ಇಡೀ ದಿನ ಪ್ರತಿದಿನ ಸಭೆ ನಡೆಸುವುದರಿಂದಲ್ಲ ಎಂದು ಹೇಳಿದರು.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅಸ್ವಿತ್ವಕ್ಕೆ ಬಂದ ಗುಪ್ಕಾರ್ ಒಕ್ಕೂಟದಲ್ಲಿ ಎನ್‌ಸಿ ಹಾಗೂ ಪಿಡಿಪಿ ಪ್ರಮುಖ ಪಕ್ಷಗಳಾಗಿದ್ದು, ಪಿಎಜಿಡಿ ಆದಾಗಿನಿಂದಲೂ ಎರಡೂ ಪಕ್ಷಗಳ ನಡುವೆ ವಿರೋಧಾಭಾಸಗಳು ಅನೇಕ ಸಲ ಮುನ್ನೆಲೆಗೆ ಬಂದಿವೆ.
ಪಿಡಿಪಿ ಮುಖ್ಯಸ್ಥರಾಗಿದ್ದ ದಿವಂಗತ ಮುಫ್ತಿ ಮೊಹಮ್ಮದ್ ಸಯ್ಯದ್ ಅವರು 2014 ರ ವಿಧಾನಸಭೆ ಚುನಾವಣೆ ನಂತರ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಉಳಿಸಬಹುದಿತ್ತು ಎಂದು ಇತ್ತೀಚೆಗೆ ಒಮರ್ ಅಬ್ದುಲ್ಲಾ ಟೀಕಿಸಿದ್ದರು.
ಆದಾದ ಕೆಲವೇ ದಿನಗಳಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದ ಎನ್‌ಸಿ ಮಹಿಳಾ ಘಟಕದ ಅಧ್ಯಕ್ಷೆ ಶಮೀನಾ ಫಿರ್ದೋಶ್ ಅವರು, ‘ಮೆಹಬೂಬ ಮುಫ್ತಿ ಜಮ್ಮು ಕಾಶ್ಮೀರವನ್ನು ಹಾಳು ಮಾಡಿದರು’ ಎಂದು ಟೀಕಿಸಿದ್ದರು.