
ಮನಿಲಾ: ಫಿಲಿಪ್ಪೀನ್ಸ್‌ನಲ್ಲಿ ರೈ ಚಂಡಮಾರುತದ ಪರಿಣಾಮ ಮೃತಪಟ್ಟವರ ಸಂಖ್ಯೆ 208ಕ್ಕೆ ಏರಿದ್ದು, ಇನ್ನೂ 52 ಮಂದಿ ನಾಪತ್ತೆಯಾಗಿದ್ದಾರೆ.
ವಿವಿಧ ಪಟ್ಟಣಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡಿದ್ದು, ಸಂಪರ್ಕ ಮತ್ತು ಸಂವಹನ ಕಡಿತವಾಗಿದೆ. ನೀರು, ಆಹಾರ ಪೂರೈಸುವಂತೆ ಸಂತ್ರಸ್ತ ನಾಗರಿಕರು ಒತ್ತಾಯಿಸುತ್ತಿದ್ದಾರೆ.
ಚಂಡಮಾರುತದ ತೀವ್ರತೆ ಹೆಚ್ಚಿದ್ದು, ಗಂಟೆಗೆ 195 ಕಿ.ಮೀ. ವೇಗವಿತ್ತು. ದಕ್ಷಿಣ ಚೀನಾದ ಸಮುದ್ರದ ಭಾಗದಲ್ಲಿ ಕುಗ್ಗುವ ಮುನ್ನ ವೇಗ ಗಂಟೆಗೆ 270 ಕಿ.ಮೀವರೆಗೂ ಮುಟ್ಟಿತ್ತು.
239 ಜನರು ಗಾಯಗೊಂಡಿದ್ದಾರೆ. ವಿವಿಧ ಬಾಧಿತ ಪಟ್ಟಣಗಳಿಂದ ವರದಿ ಬರಬೇಕಿದೆ. ಸಾವಿನ ಸಂಖ್ಯೆ ಏರಬಹುದು ಎಂದು ಫಿಲಿಪ್ಪೀನ್ಸ್ ಪೊಲೀಸ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮರಗಳು ಉರುಳಿ, ಗೋಡೆ ಕುಸಿದು ಹಲವರು ಮೃತಪಟ್ಟಿದ್ದಾರೆ. ಪ್ರವಾಹಕ್ಕೆ ಸಿಲುಕಿಯೂ ಕೆಲವರು ಸತ್ತಿದ್ದಾರೆ. ಚಂಡಮಾರುತದ ತೀವ್ರತೆ ಹೆಚ್ಚಿದ್ದು, ವ್ಯಕ್ತಿಯೊಬ್ಬರ ಶವ ಮರಕ್ಕೆ ಸಿಲುಕಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.