Karnataka news paper

ಬಿಹಾರ ಚುನಾವಣೆ ಬಳಿಕ ನಿತೀಶ್‌ ಕುಮಾರ್ ಮತ್ತೆ ಬಣ ಬದಲಿಸಲಿದ್ದಾರೆ; ಪ್ರಶಾಂತ್‌ ಕಿಶೋರ್‌ ಭವಿಷ್ಯವಾಣಿ!


ಪಾಟ್ನಾ: “ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮುಂಬರುವ ವಿಧಾನಸಭೆ ಚುನಾವಣೆ ಬಳಿಕ ಮತ್ತೆ ಬಣ ಬದಲಿಸಿದ್ದಾರೆ..” ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಭವಿಷ್ಯವಾಣಿ ನುಡಿದಿದ್ದಾರೆ.”ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ. ಆದರೆ ನಂತರ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಆಸೆಯಿಂದ ಬಣ ಬದಲಿಸಿ, ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಳ್ಳಲಿದ್ದಾರೆ..” ಎಂದು ಪ್ರಶಾಂತ್‌ ಕಿಶೋರ್‌ ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜನ ಸುರಾಜ್ ಪಕ್ಷದ ಸಂಸ್ಥಾಪ ಪ್ರಶಾಂತ್‌ ಕಿಶೋರ್‌, “74 ವರ್ಷದ ನಿತೀಶ್‌ ಕುಮಾರ್‌ ಯಾವ ಮೈತ್ರಿಕೂಟದ ಭಾಗವಾಗಿದ್ದರೂ ಐದನೇ ಅವಧಿಗೆ ಮುಖ್ಯಮಂತ್ರಿಯಾಗುವಷ್ಟು ಜನಪ್ರಿಯತೆಯನ್ನು ಉಳಿಸಿಕೊಂಡಿಲ್ಲ..” ಎಂದು ಹೇಳಿದರು.

“ಮುಂಬರುವ ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆಗಳು ಮುಗಿದ ನಂತರ, ನಿತೀಶ್ ಕುಮಾರ್ ಅವರನ್ನು ಹೊರತುಪಡಿಸಿ ಬೇರೆ ಯಾರಾದರೂ ಮುಖ್ಯಮಂತ್ರಿಯಾಗಲಿದ್ದಾರೆ. ನಾನು ಈ ದಾವೆಯನ್ನು ಅತ್ಯಂತ ಖಚಿತವಾಗಿ ಹೇಳುತ್ತಿದ್ದು, ಬೇಕಿದ್ದರೆ ನೀವು ನನ್ನಿಂದ ಇಂದೇ ಈ ವಿಚಾರವಾಗಿ ಲಿಖಿತ ರೂಪದಲ್ಲಿ ಹೇಳಿಕೆ ದಾಖಲಿಸಬಹುದು..” ಎಂದು ಪ್ರಶಾಂತ್‌ ಕಿಶೋರ್‌ ಪತ್ರಕರ್ತರನ್ನುದ್ದೇಶಿಸಿ ಹೇಳಿದರು.

“ನಿತೀಶ್‌ ಕುಮಾರ್‌ ಐದನೇ ಬಾರಿಗೆ ಮುಖ್ಯಮಂತ್ರಿಯಾಗುವುದಿಲ್ಲ ಎಂಬುದು ನನ್ನ ಖಚಿತ ನಿಲುವು. ಒಂದು ವೇಳೆ ನಾನು ತಪ್ಪು ಎಂದು ಸಾಬೀತಾದರೆ, ನಾನು ನನ್ನ ರಾಜಕೀಯ ಪ್ರಚಾರವನ್ನು ಬಿಟ್ಟುಬಿಡುತ್ತೇನೆ..” ಎಂದು ಪ್ರಶಾಂತ್‌ ಕಿಶೋರ್‌ ಇದೇ ವೇಳೆ ಸವಾಲು ಹಾಕಿದರು.

“ಬಿಜೆಪಿ ನಿತೀಶ್‌ ಕುಮಾರ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಹಿಂಜರಿಯುತ್ತಿದೆ. ಇದಕ್ಕೆ ನಿತೀಶ್‌ ಕುಮಾರ್‌ ಅವರ ಜನಪ್ರಿಯತೆ ಕುಗ್ಗಿರುವುದೇ ಕಾರಣ. ಇದನ್ನು ಮನಗಂಡಿರುವ ನಿತೀಶ್‌ ಕುಮಾರ್‌ ಮತ್ತೆ ಮುಖ್ಯಮಂತ್ರಿಯಾಗುವ ತಮ್ಮ ಕನಸನ್ನು ಈಡೇರಿಸಿಕೊಳ್ಳಲು, ಎನ್‌ಡಿಎ ಬಿಟ್ಟು ಮಹಾಘಟಬಂಧನ್‌ ಮೈತ್ರಿಕೂಟದ ಜೊತೆ ಕೈಜೋಡಿಸಲಿದ್ದಾರೆ..” ಎಂದು ಪ್ರಶಾಂತ್‌ ಕಿಶೋರ್‌ ಭವಿಷ್ಯವಾಣಿ ನುಡಿದರು.

ಬಿಹಾರ ಚುನಾವಣೆಗೂ ಮುನ್ನ ಎನ್‌ಡಿಎಗೆ ಎಚ್ಚರಿಕೆ ಗಂಟೆ, ಮೈತ್ರಿಗಳ ನಿದ್ದೆಗೆಡಿಸಿದೆ ಸಿ-ವೋಟರ್‌ ಸಮೀಕ್ಷೆ
“ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಬಿಹಾರ ವಿಧಾನಸಭೆ ಚುನಾವಣೆ ನಂತರ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಿಸುವಂತೆ ನಾನು ಸವಾಲು ಹಾಕುತ್ತೇನೆ. ಒಂದು ವೇಳೆ ಅವರು ಹಾಗೆ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಸಂಖ್ಯೆ ಗಣನೀಯವಾಗಿ ಕುಸಿಯಲಿದೆ..” ಎಂದು ಚುನಾವಣಾ ತಂತ್ರಜ್ಞ ಎಚ್ಚರಿಕೆ ನೀಡಿದರು.

“ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಅತ್ಯಂತ ಕಳಪೆ ಸಾಧನೆ ಮಾಡಲಿದೆ. ನಿತೀಶ್‌ ಕುಮಾರ್‌ ಯಾವ ಬಣದಲ್ಲಿದ್ದರೂ ಅವರು ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿಯಾಗುವುದಿಲ್ಲ. ನಿತೀಶ್ ಕುಮಾರ್ ದೈಹಿಕವಾಗಿ ದಣಿದಿದ್ದಾರೆ ಮತ್ತು ಮಾನಸಿಕವಾಗಿ ನಿವೃತ್ತರಾಗಿದ್ದಾರೆ..”ಎಂದು ಪ್ರಶಾಂತ್‌ ಕಿಶೋರ್‌ ಇದೇ ವೇಳೆ ಅಭಿಪ್ರಾಯಪಟ್ಟರು.

“ನಿತೀಶ್‌ ಕುಮಾರ್‌ ದೀರ್ಘಕಾಲದವರೆಗೆ ಅಧಿಕಾರದಲ್ಲಿ ಉಳಿಯುವಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳ ಪಾತ್ರ ಬಹಳಷ್ಟಿದೆ. ಆದರೆ ಈ ಪಕ್ಷಗಳು ಈಗ ನಿತೀಶ್‌ ಕುಮಾರ್‌ ಅವರಿಂದ ಬಿಹಾರಕ್ಕೆ ಮುಕ್ತಿ ದೊರೆಯುವಂತೆ ಮಾಡಲು ಸಜ್ಜಾಗಬೇಕಿದೆ..” ಎಂದು ಪ್ರಶಾಂತ್‌ ಕಿಶೋರ್‌ ಕರೆ ನೀಡಿದರು.



Read more

[wpas_products keywords=”deal of the day sale today offer all”]