Karnataka news paper

ಟ್ರೇಡ್‌ ವಾರ್‌ 2.0 ಗೆ ಚಾಲನೆ ನೀಡಿದ ಡೊನಾಲ್ಡ್ ಟ್ರಂಪ್;‌‌ ಚೀನಾ, ಕೆನಡಾ, ಮೆಕ್ಸಿಕೋ ಪ್ರತಿಕ್ರಿಯೆಯಿಂದ ಜಗತ್ತಿಗೆ ನಡುಕ!


ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೆಕ್ಸಿಕೊ, ಕೆನಡಾ ಮತ್ತು ಚೀನಾಗಳ ಮೇಲೆ ಸುಂಕ ಹೆಚ್ಚಳವನ್ನು ಅಧಿಕೃತವಾಗಿ ಜಾರಿಗೆ ತಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆನಡಾ ಮತ್ತು ಚೀನಾ ತಮ್ಮ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪ್ರತಿಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿವೆ.ಈ ಕುರಿತು ಮಾತನಾಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ಅಮೆರಿಕ ವಿಧಿಸಿರುವ ಸುಂಕಗಳಿಗೆ ಪ್ರತಿಯಾಗಿ ಕೆನಡಾ ಕೂಡ ಯುಎಸ್ ಆಮದುಗಳ ಮೇಲೆ ಸುಂಕಗಳನ್ನು ವಿಧಿಸಲಿದೆ‌ ಎಂದು ಸ್ಪಷ್ಟಪಡಿಸಿದ್ದಾರೆ.

ಅದರಂತೆ ಡೊನಾಲ್ಡ್‌ ಟ್ರಂಪ್ ಕ್ರಮಕ್ಕೆ ಪ್ರತಿಕ್ರಮವಾಗಿ ಚೀನಾ ಕೂಡ ಅಮೆರಿಕದ ಕೃಷಿ ಮತ್ತು ಆಹಾರ ಉತ್ಪನ್ನಗಳನ್ನು ಗುರಿಯಾಗಿಸಿಕೊಂಡು, ಹೆಚ್ಚಿನ ಸುಂಕ ವಿಧಿಸುವ ತೀರ್ಮಾನ ಮಾಡಿದೆ.

ಅಮೆರಿಕಕ್ಕೆ ಚೀನಾ ತಿರುಗೇಟು: ಟ್ರಂಪ್‌ ನೀತಿಗೆ ಅಮೆರಿಕದಲ್ಲೇ ಶುರುವಾಯ್ತು ಅಪಸ್ವರ
ಇನ್ನು ಮೆಕ್ಸಿಕೋ ಅಧ್ಯಕ್ಷೆ ಕ್ಲಾಡಿಯಾ ಶೀನ್‌ಬಾಮ್ ಕೂಡ, ಡೊನಾಲ್ಡ್ ಟ್ರಂಪ್‌‌ ಅವರ ಸುಂಕ ಕ್ರಮಗಳಿಗೆ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ. “ನಮ್ಮಲ್ಲಿ ಪ್ಲಾನ್ ಬಿ, ಸಿ, ಡಿ ರೆಡಿ ಇದೆ..” ಎಂಬ ಶೀನ್‌ಬಾಮ್‌ ಹೇಳಿಕೆ ಇದೀಗ ಜಾಗತಿಕವಾಗಿ ಗಮನ ಸೆಳೆದಿದೆ.

“ಡೊನಾಲ್ಡ್‌ ಟ್ರಂಪ್‌ ಅವರ ಸುಂಕ ಹೇರಿಕೆ ನಿರ್ಧಾರ ಸಮರ್ಥನೆಗೆ ಅರ್ಹವಲ್ಲ..” ಎಂದಿರುವ ಈ ಮೂರೂ ದೇಶಗಳು, “ಅಮೆರಿಕದ ಏಕಪಕ್ಷೀಯ ನಿರ್ಧಾರವನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ನಮಗಿಲ್ಲ..” ಎಂದು ಸ್ಪಷ್ಟಪಡಿಸಿವೆ.

“ಯುಎಸ್‌ ವಿಧಿಸಿರುವ ಸುಂಕಗಳಿಗೆ ಪ್ರತಿಯಾಗಿ ನಾವೂ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುತ್ತೇವೆ. ಇದರಿಂದ ಅಮೆರಿಕನ್ನರು ದಿನಸಿ, ಗ್ಯಾಸ್ ಮತ್ತು ಕಾರುಗಳಿಗೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಇದರಿಂದ ಅಮೆರಿಕ ಸಾವಿರಾರು ಉದ್ಯೋಗಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ..” ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಎಚ್ಚರಿಕೆ ನೀಡಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೂಡ ಡೊನಾಲ್ಡ್‌ ಟ್ರಂಪ್‌ ಅವರ ಹೆಚ್ಚುವರಿ ಸುಂಕ ನಿರ್ಧಾರದ ವಿರುದ್ಧ ತ್ವರಿತವಾಗಿ ಪ್ರತೀಕಾರ ತೀರಿಸಿಕೊಳ್ಳುವ ಕುರಿತು ಮಾತನಾಡಿದ್ದಾರೆ.

ಅಮೆರಿಕದಿಂದ ಚೀನಾಗೆ ಆಮದಾಗುವ ಕೃಷಿ ಮತ್ತು ಆಹಾರ ಉತ್ಪನ್ನಗಳ ಮೇಲೆ ಶೇ. 10 ರಿಂದ ಶೇ. 15ರಷ್ಟು ಹೆಚ್ಚುವರಿ ಸುಂಕಗಳನ್ನು ವಿಧಿಸುವುದಾಗಿ ಕ್ಸಿ ಜಿನ್‌ಪಿಂಗ್‌ ಘೋಷಿಸಿದ್ದಾರೆ.

ಮೆಕ್ಸಿಕೊದ ಆರ್ಥಿಕ ಸಚಿವಾಲಯವು ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ತೀರ್ಮಾನ ಘೋಷಣೆ ಮಾಡಲಿದ್ದು, “ಅಮೆರಿಕ ನಮ್ಮೊಂದಿಗೆ ಹೇಗೆ ವರ್ತಿಸುತ್ತದೆಯೋ ನಾವೂ ಕೂಡ ಹಾಗೆ ಅಮೆರಿಕದೊಂದಿಗೆ ವರ್ತಿಸುತ್ತೇವೆ..” ಎಂದು ಸ್ಪಷ್ಟಪಡಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕೆನಡಾ ಮತ್ತು ಮೆಕ್ಸಿಕೋದಿಂದ ಆಮದಾಗುವ ಸರಕುಗಳ ಮೇಲೆ ಶೇ.25ರಷ್ಟು ಮತ್ತು ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಶೇ. 20ರಷ್ಟು ಹೆಚ್ಚುವರಿ ಸುಂಕ ವಿಧಿಸುವ ತೀರ್ಮಾನವನ್ನು ಘೋಷಿಸಿದ್ದಾರೆ.

ಇದು ಅಮೆರಿಕದ ಜಾಗತಿಕ ವ್ಯಾಪಾರ ಯುದ್ಧಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ಇದಕ್ಕೆ ಕೆನಡಾ, ಮೆಕ್ಸಿಕೋ ಮತ್ತು ಚೀನಾ ಕೂಡ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿವೆ.



Read more

[wpas_products keywords=”deal of the day sale today offer all”]