Karnataka news paper

`ಪಾಕ್ ಪಿಚ್ ಗಳಲ್ಲಿ ಭಾರತ ಆಡಿದ್ದಿದ್ದರೆ ಕತೆ ಬೇರೆ ಇರ್ತಿತ್ತು’: ಕೊಂಕು ಮಾತನಾಡಿದವರಿಗೆ ಸೌರವ್ ಗಂಗೂಲಿ ತಿರುಗೇಟು


ಭಾರತ ದುಬೈನಲ್ಲಿ ಆಡುತ್ತಿರುವುದರಿಂದ ಈ ಬಾರಿಯ ಚಾಂಪಿಯನ್ ಟ್ರೋಫಿಯಲ್ಲಿ ಆಡುತ್ತಿರುವುದರಿಂದ ಅದಕ್ಕೆ ಉಳಿದ ತಂಡಗಳಿಗಿಂತ ಲಾಭ ಆಗುತ್ತಿದೆ ಎಂಬ ವಿಚಾರ ಬಹಳ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.ಸಮಾರಂಭವೊಂದರಲ್ಲಿ ಮಾತನಾಡುವ ವೇಳೆ ಅವರು ಈ ವಿಚಾರವನ್ನು ಎತ್ತಿದರು. ಪಾಕಿಸ್ತಾನದ ಪಿಚ್ ಗಳು ದುಬೈಗಿಂತಲೂ ಬ್ಯಾಟಿಂಗ್ ಸ್ನೇಹಿಯಾಗಿವೆ. ಒಂದು ವೇಳೆ ಅಲ್ಲಿ ಭಾರತ ಆಡಿದ್ದಿದ್ದರೆ ಹೆಚ್ಚು ರನ್ ಗಳನ್ನು ಗಳಿಸುತ್ತಿತ್ತು. ಹೀಗಾಗಿ ದುಬೈನಲ್ಲಿ ಆಡುತ್ತಿರುವುದರಿಂದ ಭಾರತಕ್ಕೆ ಲಾಭ ಆಗುತ್ತಿದೆ ಎಂಬ ಹೇಳಿಕೆಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಇದೇ ವೇಳೆ ವೈಟ್ ಬಾಲ್ ಕ್ರಿಕೆಟ್ ನಲ್ಲಿ ಭಾರತ ತಂಡ ಬಲಿಷ್ಠವಾಗಿದ್ದು ವಿಶ್ವದ ಯಾವ ತಂಡವನ್ನು ಬೇಕಾದರೂ ಮಣಿಸಬಲ್ಲುದು. ಕಳೆದ ವರ್ಷ ಟಿ20 ವಿಶ್ವಕಪ್ ನ ಗೆಲುವೇ ಇದಕ್ಕೆ ಸಾಕ್ಷಿ ಎಂದು ಸಹ ಅಭಿಪ್ರಾಯಪಟ್ಟಿದ್ದಾರೆ.

ಪಾಕ್ ನಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ಗಳು

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈವರೆಗೆ ಭಾರತ ತಂಡ ಆಡಿದ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಯಾವ ತಂಡವೂ 250 ರನ್ ಗಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ. ಚೇಸಿಂಗ್ ಸಹ ಸುಲಭವಾಗಿರಲಿಲ್ಲ. ಬೌಲರ್ ಗಳು ಅದರಲ್ಲೂ ಸ್ಪಿನ್ನರ್ ಗಳು ಕರಾಮತ್ತು ತೋರಿದ್ದಾರೆ. ಅದೇ ಪಾಕಿಸ್ತಾನದ ಪಿಚ್ ಗಳಲ್ಲಿ 300 ರನ್ ಸಲೀಸಾಗಿ ಮಾಡಬಹುದು, ಮಾತ್ರವಲ್ಲದೆ ಬೆಂಬತ್ತಿ ಗೆಲುವು ಕೂಡ ಸಾಧಿಸಬಹುದು. ಇದನ್ನೇ ಸೌರವ್ ಗಂಗೂಲಿ ಅವರು ಉಲ್ಲೇಖಿಸಿ ಮೇಲಿನ ಮಾತನ್ನು ಹೇಳಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಇರುವ ಭಾರತ ತಂಡ ರನ್ ಹೊಳೆಯನ್ನೇ ಹರಿಸುತ್ತಿತ್ತು ಎಂದು ಹೇಳುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಈ ವಿಚಾರವಾಗಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು, ದುಬೈ ಏನೂ ನಮ್ಮ ಮನೆ ಅಲ್ಲ, ನಾವೂ ಇಲ್ಲಿಗೆ ಹೊಸಬರೇ. ಪ್ರತಿ ಪಂದ್ಯದಲ್ಲೂ ಇಲ್ಲಿನ ಪಿಚ್ ವಿಭಿನ್ನವಾಗಿ ವರ್ತಿಸುತ್ತಿದೆ. ಮೊದಲೆರಡು ಪಂದ್ಯಗಳಲ್ಲಿ ಪಿಚ್ ಸ್ವಿಂಗ್ ಗೆ ಅನುಕೂಲಕಾರಿಯಾಗಿರಲಿಲ್ಲ. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಚೆಂಡು ಕೊಂಚ ಸ್ವಿಂಗ್ ಆಗುತ್ತಿತ್ತು. ಹೀಗಾಗಿ ಇಲ್ಲಿನ ಪಿಚ್ ಬಗ್ಗೆ ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ. ಸೆಮಿಫೈನಲ್ ಗೆ ಯಾವ ಪಿಚ್ ನೀಡುತ್ತಾರೆ ಎಂಂಬ ಬಗ್ಗೆ ಇನ್ನೂ ಖಾತ್ರಿಯಿಲ್ಲ ಎಂದೂ ಅವರು ತಿಳಿಸಿದ್ದರು.

ಹೈಬ್ರಿಡ್ ಮಾದರಿ ಚಾಂಪಿಯನ್ಸ್ ಟ್ರೋಫಿ

ಭಯೋತ್ಪಾದನೆ ಮತ್ತು ಭದ್ರತಾ ಕಾರಣಗಳಿಗಾಗಿ ಟೀಂ ಇಂಡಿಯಾಗೆ ಪಾಕಿಸ್ತಾನಕ್ಕೆ ತೆರಳಲು ಭಾರತ ಸರ್ಕಾರ ಅನುಮತಿ ನೀಡಿಲ್ಲ. ಈ ಕಾರಣಕ್ಕಾಗಿ 8 ತಂಡಗಳು ಭಾಗವಹಿಸುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದೆ. ಲಾಹೋರ್, ರಾವಲ್ಪಿಂಡಿ, ಕರಾಚಿ ಮತ್ತು ದುಬೈಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ.

ಭಾರತ ತಂಡ ಆಡುವ ಎಲ್ಲಾ ಪಂದ್ಯಗಳೂ ದುಬೈನಲ್ಲೇ ನಡೆಯುತ್ತಿವೆ. ಒಂದು ವೇಳೆ ಭಾರತ ತಂಡ ಫೈನಲ್ ಗೆ ಬಂದಲ್ಲಿ ಆಗ ಪ್ರಶಸ್ತಿ ಸುತ್ತಿನ ಪಂದ್ಯ ಸಹ ಲಾಹೋರ್ ನ ಗಡಾಫಿ ಕ್ರೀಡಾಂಗಣಕ್ಕೆ ಬದಲಾಗಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಎ ಗುಂಪಿನಲ್ಲಿರುವ ಭಾರತ ತಂಡ ಈಗಾಗಲೇ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಸೋಲಿಸಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಗೆ ಜಿಗಿದಿದೆ. ಇದು ಪಾಕಿಸ್ತಾನದ ಮತ್ತು ಅನೇಕ ವಿದೇಶಿ ಆಟಗಾರರ ಕಣ್ಣು ಕೆಂಪಾಗಿಸಿದೆ. ಹೀಗಾಗಿ ಇಂಗ್ಲೆಂಡ್ ನ ಮಾಜಿ ನಾಯಕರಾದ ನಾಸೀರ್ ಹುಸೇನ್ ಮತ್ತು ಮೈಕೆಲ್ ಅಥರ್ಟನ್ ಅವರು ದುಬೈನಲ್ಲಿ ಆಡುತ್ತಿರುವುದರಿಂದ ಭಾರತಕ್ಕೆ ಲಾಭ ಆಗುತ್ತಿದೆ ಎಂದು ಅಪಸ್ವರ ಎತ್ತಿದ್ದರು. ಇದಕ್ಕೆ ಈಗ ಸೌರವ್ ಗಂಗೂಲಿ ಅವರು ತಕ್ಕನಾಗಿ ತಿರುಗೇಟು ನೀಡಿದ್ದಾರೆ.



Read more

[wpas_products keywords=”deal of the day sale today offer all”]