Karnataka news paper

ಮಂಡ್ಯದಲ್ಲಿಂದು ವಿಜಯೇಂದ್ರ ಭತ್ತ ನಾಟಿ : ಕುಮಾರಸ್ವಾಮಿ ಹಾದಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಇದರ ಹಿಂದಿನ ಉದ್ದೇಶ ಏನು?


ಮಂಡ್ಯ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಬಳಿಕ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜಿಲ್ಲೆಯಲ್ಲಿ ಭತ್ತ ನಾಟಿ ಕಾರ‍್ಯಕ್ಕೆ ಮುಂದಾಗಿದ್ದಾರೆ. ಆರು ತಿಂಗಳ ಹಿಂದಷ್ಟೇ ಎಚ್‌ಡಿಕೆ ಅವರು ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಭತ್ತ ನಾಟಿ ಮಾಡಿದ್ದರು. ಇದೀಗ ಮಾರ್ಚ್ 4 ರಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಸರದಿ ಆರಂಭವಾಗಿದೆ.ಮಂಡ್ಯ ತಾಲೂಕು ಕೊತ್ತತ್ತಿ ಗ್ರಾಮದಲ್ಲಿನ ರೈತರಾದ ಸುಖೇಂದ್ರ ಮತ್ತು ಶಿವಬಸಪ್ಪ ಅವರ ಜಮೀನಿನಲ್ಲಿ ಮಾ.4ರಂದು ಭತ್ತ ನಾಟಿ ಕಾರ‍್ಯಕ್ಕೆ ಸಿದ್ಧತೆ ನಡೆಸಲಾಗಿದೆ. ನಾಟಿ ಕಾರ‍್ಯಕ್ಕಾಗಿ ಮಂಡ್ಯ-ಕೊತ್ತತ್ತಿ ಮಾರ್ಗದ ರಸ್ತೆ ಬದಿಯಲ್ಲಿನ ಜಮೀನನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಜಮೀನಿನ ಮಾಲೀಕರು ಮತ್ತು ಸ್ಥಳೀಯ ಬಿಜೆಪಿ ಕಾರ‍್ಯಕರ್ತರು ಜತೆಗೂಡಿ ಭತ್ತ ನಾಟಿ ಕಾರ‍್ಯಕ್ಕೆ ಪೂರಕವಾಗಿ ಜಮೀನನ್ನು ಹದಗೊಳಿಸಿ ನೀರುಗದ್ದೆ ಮಾಡಿದ್ದಾರೆ.

ಮಂಡ್ಯ: ಭತ್ತದ ಪೈರು ನಾಟಿ ಮಾಡಿದ ಎಚ್‌ಡಿ ಕುಮಾರಸ್ವಾಮಿ, ಪಂಚೆ ಕಟ್ಟಿ ಗದ್ದೆಗಿಳಿದ ನಿಖಿಲ್‌
ಸೋಮವಾರ ಜಮೀನಿಗೆ ಭತ್ತದ ಪೈರುಗಳನ್ನು ಸಹ ತಂದು ಬಿಡಲಾಗಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಭತ್ತದ ನಾಟಿ ಕಾರ‍್ಯ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪಕ್ಷದ ನಾಯಕರೊಂದಿಗೆ ಭತ್ತ ನಾಟಿ ಮಾಡುವ ಸಲುವಾಗಿ 50 ಮಂದಿ ಕೃಷಿ ಕಾರ್ಮಿಕರನ್ನು ಗೊತ್ತುಪಡಿಸಲಾಗಿದೆ.

ಎಚ್‌.ಡಿ.ಕುಮಾರಸ್ವಾಮಿ ಅವರು 2018ರಲ್ಲಿಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಪಾಂಡವಪುರ ತಾಲೂಕು ಸೀತಾಪುರ ಗ್ರಾಮದಲ್ಲಿ ಭತ್ತ ನಾಟಿ ಮಾಡಿ ಗಮನ ಸೆಳೆದಿದ್ದರು. ಜತೆಗೆ, ಕಟಾವು ಕಾರ‍್ಯಕ್ಕೂ ಬಂದಿದ್ದರು. ಪ್ರಸ್ತುತ ಆರು ತಿಂಗಳ ಹಿಂದೆ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಬಳಿಕವೂ ಮಂಡ್ಯ ಸಂಸದರಾಗಿ ಪುನಃ ಭತ್ತ ನಾಟಿ ಮಾಡಿದ್ದರು.

ಎರಡು ವರ್ಷಗಳ ಹಿಂದೆ ಕೇಂದ್ರದಲ್ಲಿ ಕೃಷಿ ಖಾತೆ ರಾಜ್ಯ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದಲ್ಲಿ ಭತ್ತ ನಾಟಿ ಮಾಡಿದ್ದರು. ಆಗ ಸ್ವತಃ ಪವರ್‌ ಟಿಲ್ಲರ್‌ ಚಾಲನೆ ಮಾಡಿ ಶೋಭಾ ಕರಂದ್ಲಾಜೆ ಗಮನ ಸೆಳೆದಿದ್ದರು. ಇದೀಗ ಎಚ್‌ಡಿಕೆ, ಶೋಭಾ ಅವರಂತೆಯೇ ಬಿ.ವೈ.ವಿಜಯೇಂದ್ರ ಅವರು ಜಿಲ್ಲೆಯಲ್ಲಿ ಭತ್ತ ನಾಟಿ ಕಾರ‍್ಯಕ್ಕೆ ಮುಂದಾಗಿರುವುದು ರಾಜಕೀಯ ಚರ್ಚೆಯನ್ನೂ ಹುಟ್ಟುಹಾಕಿದೆ.

ವಿಜಯೇಂದ್ರ ಅವರಿಂದ ನಾಟಿ ಏಕೆ?

ಕೃಷಿಯಿಂದ ದೂರ ಸರಿಯುತ್ತಿರುವ ರೈತರನ್ನು ಮತ್ತೆ ಕೃಷಿಯತ್ತ ಮರಳುವಂತೆ ಪ್ರೇರೇಪಿಸುವ ಹಾಗೂ ರೈತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಭತ್ತ ನಾಟಿ ಕಾರ‍್ಯ ಹಮ್ಮಿಕೊಳ್ಳಲಾಗಿದೆ ಎನ್ನುವ ಕಾರಣವನ್ನು ಸ್ಥಳೀಯ ಬಿಜೆಪಿ ಮುಖಂಡರು ನೀಡಿದ್ದಾರೆ.

”ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ್ದ ರೈತಪರ ಕಾರ‍್ಯಕ್ರಮಗಳನ್ನು ಈಗಿನ ಕಾಂಗ್ರೆಸ್‌ ಸರಕಾರ ರದ್ದುಗೊಳಿಸಿದೆ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕುವ ಜತೆಗೆ ಆರ್ಥಿಕ ನಷ್ಟಕ್ಕೂ ಒಳಗಾಗುತ್ತಿದ್ದಾರೆ. ಸಾಕಷ್ಟು ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಅವರನ್ನು ಮತ್ತೆ ಕೃಷಿಗೆ ಮರಳಿ ಕರೆ ತರುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ,” ಎಂದು ಬಿಜೆಪಿ ಯುವ ಮುಖಂಡ ಎಸ್‌.ಸಚ್ಚಿದಾನಂದ ಇಂಡುವಾಳು ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಅಂತಿಮ ಘಟ್ಟ ತಲುಪಿದ ಕಾಂಗ್ರೆಸ್ ಪವರ್ ಫೈಟ್, ಮುಂದಿನ 2 ದಿನ ಅತ್ಯಂತ ನಿರ್ಣಾಯಕ : ವಿಜಯೇಂದ್ರ

ರಾಜಕೀಯ ಚರ್ಚೆ

ರಾಜಕೀಯ ಪಕ್ಷಗಳು, ರಾಜಕಾರಣಿಗಳು ಏನೇ ಮಾಡಿದರೂ ಅದರ ಹಿಂದೆ ರಾಜಕೀಯ ಕಾರಣವೊಂದು ಇರುತ್ತದೆಂಬುದು ಬಹಿರಂಗ ಸತ್ಯ. ಮುಂದಿನ 2-3 ತಿಂಗಳಲ್ಲಿ ಜಿ.ಪಂ, ತಾ.ಪಂ. ಚುನಾವಣೆ ಎದುರಾಗಲಿದೆ. ಹೀಗಾಗಿ ಪಕ್ಷ ಸಂಘಟನೆ ಹಾಗೂ ಜನರನ್ನು ಬಿಜೆಪಿಯತ್ತ ಸೆಳೆಯುವುದು ಭತ್ತ ನಾಟಿ ಕಾರ‍್ಯದ ಹಿಂದಿನ ಉದ್ದೇಶವಿರಬಹುದೆಂಬ ಚರ್ಚೆಯು ಜಿಲ್ಲೆಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಭತ್ತ ನಾಟಿ ಕಾರ‍್ಯಕ್ಕೆ ಆಗಮಿಸುವ ಸಾವಿರಾರು ಜನರಿಗೆ ಗ್ರಾಮಸ್ಥರೆ ರಾಗಿ ಮುದ್ದೆ-ಅವರೆಕಾಳು ಕೂಟು, ಅನ್ನ-ಸಾಂಬಾರ್‌ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರೊಂದಿಗೆ ಪಕ್ಷದ ಹಲವಾರು ನಾಯಕರು, ಮುಖಂಡರು ಭತ್ತ ನಾಟಿ ಕಾರ‍್ಯಕ್ರಮದಲ್ಲಿ ಭಾಗವಹಿಸುವರು ಎಂದಿದ್ದಾರೆ ಡಾ.ಎನ್‌.ಎಸ್‌.ಇಂದ್ರೇಶ್‌, ಜಿಲ್ಲಾಧ್ಯಕ್ಷ, ಬಿಜೆಪಿ, ಮಂಡ್ಯ.

ರೈತರನ್ನು ಬಿಜೆಪಿ ಯಾವತ್ತೂ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಕೃಷಿಕರಲ್ಲಿಆತ್ಮಸ್ಥೈರ್ಯ ತುಂಬಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಅದರಂತೆ ಮಂಡ್ಯಕ್ಕೆ ಬರುತ್ತಿದ್ದಾರೆ. ಪ್ರಸ್ತುತ ಭತ್ತ ನಾಟಿ ಕಾರ‍್ಯ ನಡೆಯುತ್ತಿರುವುದರಿಂದ ಅವರನ್ನು ಈ ನಾಟಿ ಕಾರ್ಯಕ್ರಮದೊಂದಿಗೆ ಜೋಡಿಸಿಕೊಳ್ಳಲಾಗಿದೆ ಎಂದಿದ್ದಾರೆ ಎಸ್‌.ಸಚ್ಚಿದಾನಂದ ಇಂಡುವಾಳು, ಯುವ ಮುಖಂಡ, ಬಿಜೆಪಿ, ಮಂಡ್ಯ.



Read more

[wpas_products keywords=”deal of the day sale today offer all”]