Karnataka news paper

ಸರಕಾರಿ ನೌಕರರ ಆಸ್ತಿ ವಿವರ ನೀಡಲು ಹಿಂದೇಟು, ಲೋಕಾಯುಕ್ತ – ಸರಕಾರದ ನಡುವೆ ‘ಸಂಘರ್ಷ’!


ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಸರಕಾರಿ ನೌಕರರ ಆಸ್ತಿ ವಿವರ ನೀಡಲು ಇಲಾಖೆಗಳ ಮುಖ್ಯಸ್ಥರು ಸುತಾರಾಂ ಒಪ್ಪುತ್ತಿಲ್ಲ. ಈ ಕುರಿತು ಲೋಕಾಯುಕ್ತ ಬರೆದಿರುವ ಎರಡು ಪತ್ರಗಳಿಗೂ ಉತ್ತರ ನೀಡದೇ ಕಾರ್ಯಾಂಗ ಮೌನ ವಹಿಸಿದೆ. ಹೀಗಾಗಿ ಸರಕಾರ ಮತ್ತು ಲೋಕಾಯುಕ್ತದ ನಡುವೆ ‘ಸಂಘರ್ಷ’ದ ವಾತಾವರಣ ನಿರ್ಮಾಣವಾಗಿದೆ.ಲೋಕಾಯುಕ್ತರು ಪತ್ರ ಬರೆದು ಎರಡೂವರೆ ತಿಂಗಳು ಕಳೆದರೂ ಪ್ರತಿಕ್ರಿಯೆ ನೀಡಿಲ್ಲ. ಈ ಬೆನ್ನಲ್ಲೇ ಲೋಕಾಯುಕ್ತ ಬೆಂಗಳೂರು ಘಟಕದ ಪೊಲೀಸರು ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಒಳಪಡುವ ಬಿಬಿಎಂಪಿ, ಜಲಮಂಡಳಿ, ಬಿಡಿಎ ಸೇರಿದಂತೆ ಇತರೆ ಪ್ರಾಧಿಕಾರಗಳ ನೌಕರರ ಸೇವಾಪುಸ್ತಕ ಹಾಗೂ ಆಸ್ತಿದಾಯಿತ್ವ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಈ ಪ್ರಯತ್ನಕ್ಕೂ ಕಾರ್ಯಾಂಗ ಸಹಕಾರ ನೀಡುತ್ತಿಲ್ಲ. ಇದರಿಂದ ಲೋಕಾಯುಕ್ತ ಪೊಲೀಸ್‌ ವಿಭಾಗ ಕೂಡ ಇಕ್ಕಟ್ಟಿಗೆ ಸಿಲುಕಿದೆ. ಆದಾಯ ಮೀರಿ ಆಸ್ತಿ ಗಳಿಕೆ ಸಂಪಾದನೆ ಮಾಡಿದ ಆರೋಪ ಎದುರಿಸುತ್ತಿರುವ ನೌಕರರ ಆಸ್ತಿಗಳ ಕುರಿತು ಖಚಿತ ಮಾಹಿತಿ ಸಿಗದೆ ತನಿಖೆಯೂ ವಿಳಂಬವಾಗುತ್ತಿದೆ.

”ರಾಜ್ಯ ಸರಕಾರದ ಎಲ್ಲಾ ಅಧಿಕಾರಿ ಹಾಗೂ ನೌಕರರ ಆಸ್ತಿ ವಿವರಗಳ ಮಾಹಿತಿ ನೀಡಬೇಕು. ಜತೆಗೆ, ಸರಕಾರಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವುದಕ್ಕೆ ಕ್ರಮ ವಹಿಸಲು ಇಲಾಖಾ ಮುಖ್ಯಸ್ಥರಿಗೆ ನಿರ್ದೇಶಿಸಬೇಕು,” ಎಂದು ಕೋರಿ ಲೋಕಾಯುಕ್ತರ ಪರವಾಗಿ ಲೋಕಾಯುಕ್ತ ರಿಜಿಸ್ಟ್ರಾರ್‌ ಎಂ. ಚಂದ್ರಶೇಖರ್‌ ರೆಡ್ಡಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಡಿ.18ರಂದು ಪತ್ರ ಬರೆದಿದ್ದರು.

“ಎರಡು ವಾರಗಳಲ್ಲಿಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಅಗತ್ಯವಿದ್ದರೆ ಈ ಬಗ್ಗೆ ಖುದ್ದು ಲೋಕಾಯುಕ್ತರೇ ಚರ್ಚೆ ನಡೆಸಲಿದ್ದಾರೆ,” ಎಂದೂ ತಿಳಿಸಿದ್ದರು. ಆದರೆ, ಪತ್ರ ಬರೆದು ಎರಡೂವರೆ ತಿಂಗಳು ಕಳೆದರೂ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಲೋಕಾಯುಕ್ತಕ್ಕೆ ಈ ಕುರಿತು ಪ್ರತಿಕ್ರಿಯೆ ಬಂದಿಲ್ಲ.

ಬಿಬಿಎಂಪಿ, ಜಲಮಂಡಳಿ, ಬಿಡಿಎ ಸೇರಿದಂತೆ ಇತರೆ ಪ್ರಾಧಿಕಾರಗಳ ನೌಕರರ ಸೇವಾಪುಸ್ತಕ ಮತ್ತು ಆಸ್ತಿದಾಯಿತ್ವ ಪರಿಶೀಲನೆ ಸಲುವಾಗಿ ಡಿವೈಎಸ್ಪಿ ಸಿ. ವಸಂತ್‌, ಇನ್ಸ್‌ಪೆಕ್ಟರ್‌ ಎ.ಎಸ್‌. ಗುದಿಗೊಪ್ಪ ಅವರನ್ನು ನೇಮಕ ಮಾಡಲಾಗಿದೆ. ಇವರಿಬ್ಬರಿಗೂ ಮಾಹಿತಿ ಪರಿಶೀಲಿಸಲು ಅವಕಾಶ ನೀಡಬೇಕು ಎಂದು ಕೋರಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಎಸ್ಪಿ ಶ್ರೀನಾಥ ಜೋಶಿ ಕಳೆದ ಜನವರಿಯಲ್ಲಿಯೇ ಪತ್ರ ಬರೆದಿದ್ದಾರೆ. ಅದಕ್ಕೂ ಉತ್ತರ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತದ ವಾದ ಏನು?

ರಾಜ್ಯ ಸರಕಾರಿ ನೌಕರರು ಹಾಗೂ ಅಖಿಲ ಭಾರತ ಸೇವೆಗಳ ನಿಯಮಗಳು 1968ರ (16) ಅನ್ವಯ ಸರಕಾರಿ ನೌಕರರು ನೇಮಕಾತಿ ಹೊಂದಿದ ದಿನದಿಂದಲೇ ಪ್ರತಿ 12 ತಿಂಗಳ ಅವಧಿಯಲ್ಲಿ ಅವರ ಹಾಗೂ ಕುಟುಂಬದ ಎಲ್ಲ ಸದಸ್ಯರ ಆಸ್ತಿ ಹಾಗೂ ಹೊಣೆಗಾರಿಕೆ ವಿವರ ಸಲ್ಲಿಸಬೇಕೆಂಬ ನಿಯಮ ಪಾಲಿಸುವಂತಾಗಬೇಕು. ಈ ನಿಯಮ ಪಾಲನೆಯಾಗದಿದ್ದರೆ ಅಧಿಕಾರಿ/ನೌಕರರ ದುರ್ನಡತೆಯಾಗಲಿದೆ ಎನ್ನುವುದು ಲೋಕಾಯುಕ್ತರ ವಾದ.

ಆದಾಯ ಮೀರಿ ಆಸ್ತಿ ಸಂಪಾದನೆ ಪ್ರಕರಣಗಳಲ್ಲಿ ಸಿಲುಕಿರುವ ಸರಕಾರಿ ನೌಕರರ ಆಸ್ತಿ ಹಾಗೂ ಉತ್ತರದಾಯಿತ್ವ ವಿವರಗಳನ್ನು ನೀಡುವಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಮಾಹಿತಿಯನ್ನೂ ನೀಡುತ್ತಿಲ್ಲ. ಈ ಕಾರಣದಿಂದ ತನಿಖೆಯೂ ವಿಳಂಬವಾಗುತ್ತಿದ್ದು, ಆರೋಪಿತರಿಗೆ ರಕ್ಷಣೆ ಸಿಕ್ಕಂತಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಸರಕಾರಿ ನೌಕರರ ಆಸ್ತಿ ಮತ್ತು ಹೊಣೆಗಾರಿಕೆ ವಿವರ ಕೊಡಿಸಬೇಕು ಎಂದು ಲೋಕಾಯುಕ್ತ ಪಟ್ಟು ಹಿಡಿದಿದೆ.

ನೌಕರರ ಒತ್ತಡದ ಹಿಡಿತ?

‘ತಮ್ಮ ಆಸ್ತಿ, ಕುಟುಂಬಸ್ಥರ ಹೆಸರಿನಲ್ಲಿರುವ ಆಸ್ತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಬಾರದು. ಒಂದು ವೇಳೆ ಸಾರ್ವಜನಿಕವಾಗಿ ವೆಬ್‌ಹೋಸ್ಟ್‌ ಮೂಲಕ ಮಾಹಿತಿ ನೀಡಿದರೆ ಈ ಮಾಹಿತಿಯೂ ಸೋರಿಕೆಯಾಗಿ ದುರ್ಬಳಕೆ ಆಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕಗೊಳಿಸಬಾರದು,’ ಎಂದು ಸರಕಾರಿ ನೌಕರರು ಒತ್ತಡ ಹೇರುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಸಮಸ್ಯೆ ಕಗ್ಗಂಟಾಗಿದೆ ಎಂದು ಹೇಳಲಾಗುತ್ತಿದೆ.

ಸರಕಾರಿ ನೌಕರರ ಆಸ್ತಿ ವಿವರ ಮಾಹಿತಿ ಒದಗಿಸುವ ಸಂಬಂಧ ಮುಖ್ಯಕಾರ್ಯದರ್ಶಿಗಳಿಗೆ ಬರೆದಿದ್ದ ಪತ್ರಕ್ಕೆ ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತರಾದ ನ್ಯಾ.ಬಿ.ಎಸ್‌. ಪಾಟೀಲ್‌ ಹೇಳಿದ್ದಾರೆ.



Read more

[wpas_products keywords=”deal of the day sale today offer all”]