Karnataka news paper

ICC Champions Trophy – ಆಸ್ಟ್ರೇಲಿಯಾ ವಿರುದ್ಧ `ನಾಕೌಟ್‌ ಫೋಬಿಯಾ’ ದಿಂದ ಹೊರಬರುವುದೇ ಭಾರತ ?


ದುಬೈ: ಜಗತ್ತಿನ ಎರಡು ಬಲಾಢ್ಯ ಕ್ರಿಕೆಟ್‌ ತಂಡಗಳಾದ ಭಾರತ ಮತ್ತು ಆಸ್ಪ್ರೇಲಿಯಾ ಮಂಗಳವಾರ ಚಾಂಪಿಯನ್ಸ್‌ ಟ್ರೋಫಿಯ ಏಕದಿನ ಕ್ರಿಕೆಟ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಆಸ್ಟ್ರೇಲಿಯಾ ವಿರುದ್ಧ ನಾಕೌಟ್‌ ಹಂತದ ಪಂದ್ಯಗಳಲ್ಲಿ ಮುಗ್ಗರಿಸುವ ಭಾರತ, ಈ ಬಾರಿ ಆ ಒತ್ತಡವನ್ನು ಮೀರಿ ನಿಲ್ಲುವುದೇ ಎಂಬುದು ಕೋಟ್ಯಂತರ ಅಭಿಮಾನಿಗಳ ಕುತೂಹಲವಾಗಿದೆ.ಭಾರತ ಅಜೇಯ ದಾಖಲೆಯೊಂದಿಗೆ ‘ಎ’ ಗುಂಪಿನ ಅಗ್ರಸ್ಥಾನಿಯಾಗಿ ಸೆಮೀಸ್‌ ಪ್ರವೇಶಿಸಿದರೆ, ‘ಬಿ’ ಗುಂಪಿನ ದ್ವಿತೀಯ ಸ್ಥಾನಿಯಾಗಿ ಆಸ್ಪ್ರೇಲಿಯಾ ಉಪಾಂತ್ಯ ತಲುಪಿದೆ. ಅಸೀಸ್‌ನ ಸ್ಟಾರ್‌ ಬೌಲರ್‌ಗಳಾದ ಪ್ಯಾಟ್‌ ಕಮ್ಮಿನ್ಸ್‌, ಜೋಸ್‌ ಹೇಜಲ್‌ವುಡ್‌ ಮತ್ತು ಮಿಚೆಲ್‌ ಸ್ಟಾರ್ಕ್ ಅನುಪಸ್ಥಿತಿಯಲ್ಲಿಯೂ ತಂಡ ಅಪಾಯಕಾರಿ ಎನಿಸಿದೆ. ಕೆಲ ದಿನಗಳ ಹಿಂದಷ್ಟೇ ಲಾಹೋರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 352 ರನ್‌ಗಳ ಗುರಿ ಬೆನ್ನಟ್ಟಿ ಯಶಸ್ವಿಯಾಗಿರುವ ಆಸ್ಪ್ರೇಲಿಯಾ, ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇನ್ನೊಂದೆಡೆ ಕಿವೀಸ್‌ ವಿರುದ್ಧ ಸಾಧಾರಣ ಮೊತ್ತಕ್ಕೆ ಸೀಮಿತಗೊಂಡಿದ್ದ ಭಾರತ, ಒಂದು ಹಂತದಲ್ಲಿ ಸೋಲುವ ಭೀತಿ ಎದುರಿಸಿತು. ಆದಾಗ್ಯೂ ಶ್ರೇಯಸ್‌ ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಕೆಚ್ಚೆದೆಯ ಹೋರಾಟದ ಜತೆಗೆ ಸ್ಪಿನ್‌ ಬೌಲರ್‌ಗಳ ಸಾಹಸದಿಂದ ಗೆಲುವು ದಾಖಲಿಸಿತ್ತು.

2011ರ ವಿಶ್ವಕಪ್ ಗೆಲುವೇ ಕೊನೆ!

2011ರ ವಿಶ್ವಕಪ್‌ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾವು ಆಸ್ಪ್ರೇಲಿಯಾ ವಿರುದ್ಧ ಜಯ ಸಾಧಿಸಿದ್ದೇ ಕೊನೆ, ಅದಾದ ಬಳಿಕ ಯಾವುದೇ ಐಸಿಸಿ ಟೂರ್ನಿಗಳ ನಾಕೌಟ್‌ ಪಂದ್ಯದಲ್ಲಿ ಆಸೀಸ್‌ ವಿರುದ್ಧ ಜಯ ಸಾಧಿಸಿಲ್ಲ. 2015ರ ಏಕದಿನ ವಿಶ್ವಕಪ್‌ ಸೆಮಿಫೈನಲ್ಸ್‌ನಲ್ಲಿ ಭಾರತ ಆಸ್ಪ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. 2023ರ ಏಕದಿನ ವಿಶ್ವಕಪ್‌ನಲ್ಲಿ ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದ ರೋಹಿತ್‌ ಪಡೆ ಅಂತಿಮ ಪಂದ್ಯದಲ್ಲಿ ಆಸ್ಪ್ರೇಲಿಯಾ ವಿರುದ್ಧ ಸೋಲು ಕಂಡಿದ್ದು ಇನ್ನೂ ಭಾರತೀಯ ಕ್ರೀಡಾಭಿಮಾನಿಗಳು ಮರೆತಿಲ್ಲ.

ಅತ್ತ ಪ್ರಮುಖ ಬೌಲರ್‌ಗಳ ಗೈರು ಹಾಜರಾತಿಯಿಂದ ಕಳೆಗುಂದಿರುವ ಆಸೀಸ್‌, ಬ್ಯಾಟರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಭಾರತ ಐವರು ಸ್ಪಿನ್ನರ್‌ಗಳನ್ನು ತಂಡಕ್ಕೆ ಸೇರ್ಪಡೆಗೊಳಿಸಿದ ನಿರ್ಧಾರ ಈ ಹಿಂದೆ ಟೀಕೆಗಳಿಗೆ ಗುರಿಯಾಗಿತ್ತು. ಆದರೆ, ಟೂರ್ನಿಯಲ್ಲಿ ಈ ನಿರ್ಧಾರದಿಂದ ತಂಡಕ್ಕೆ ಭಾರಿ ಪ್ರಯೋಜನವೇ ಆಗಿದೆ. ವರುಣ್‌ ಚಕ್ರವರ್ತಿ, ಕುಲ್ದೀಪ್‌ ಯಾದವ್‌, ರವೀಂದ್ರ ಜಡೇಜಾ ಮತ್ತು ಅಕ್ಷರ್‌ ಪಟೇಲ್‌ ತಂಡಕ್ಕೆ ಬಲ ತುಂಬಿದ್ದಾರೆ. ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಪಡೆಯಿಂದ ಕ್ರೀಡಾಭಿಮಾನಿಗಳು ಹೆಚ್ಚು ನಿರೀಕ್ಷೆ ಇರಿಸಿದ್ದಾರೆ.

2023j ವಿಶ್ವಕಪ್ ಸೋಲಿಗೆ ತಿರುಗೇಟು?

ಈ ಹಿಂದಿನ ಕಿವೀಸ್‌ ಎದುರಿನ ಪಂದ್ಯದಲ್ಲಿ ರೋಹಿತ್‌ ಶರ್ಮ, ಗಿಲ್‌, ಕೊಹ್ಲಿ, ಕೆ.ಎಲ್‌. ರಾಹುಲ್‌ ನಿರೀಕ್ಷಿತ ಪ್ರದರ್ಶನ ನೀಡದೇ ಇದ್ದಿದ್ದು ತಂಡಕ್ಕೆ ಹಿನ್ನಡೆಯಾಗಿತ್ತು. ಆಸೀಸ್‌ ವಿರುದ್ಧವೂ ಅದೇ ಪ್ರದರ್ಶನ ಮರುಕಳಿಸದಂತೆ ರೋಹಿತ್‌ ಪಡೆ ಎಚ್ಚರ ವಹಿಸಬೇಕಿದೆ. ಬ್ಯಾಟರ್‌ಗಳಾದ ಜೋಸ್‌ ಇಂಗ್ಲಿಸ್‌, ಟ್ರಾವಿಸ್‌ ಹೆಡ್‌, ಮ್ಯಾಕ್ಸ್‌ವೆಲ್‌ರನ್ನು ಕಟ್ಟಿಹಾಕಲು ಭಾರತೀಯರು ರಣತಂತ್ರ ಹೆಣೆಯಬೇಕಿದೆ. ಒಟ್ಟಾರೆಯಾಗಿ ಆಸೀಸ್‌ ವಿರುದ್ಧದ 2023ರ ಏಕದಿನ ವಿಶ್ವಕಪ್‌ ಫೈನಲ್‌ ಸೋಲಿನ ಪ್ರತೀಕಾರವನ್ನು ಭಾರತ ತೀರಿಸಿಕೊಳ್ಳುವುದೇ ಎಂಬುದನ್ನು ತಿಳಿಯಲು ಕ್ರೀಡಾಭಿಮಾನಿಗಳು ಉತ್ಸುಕರಾಗಿದ್ದಾರೆ.



Read more

[wpas_products keywords=”deal of the day sale today offer all”]