Karnataka news paper

ಓಮಿಕ್ರಾನ್‌ ಕುರಿತು ಈ ತಿಂಗಳ ಅಂತ್ಯದಲ್ಲಿ ಸಿಗಲಿದೆ ಚಿತ್ರಣ: ತಜ್ಞರ ಅಭಿಮತ


ಹೈಲೈಟ್ಸ್‌:

  • ವೈರಾಣುಗಳ ಹೊಸ ರೂಪಾಂತರಿಗಳು ಆರಂಭದಲ್ಲಿ ಸೌಮ್ಯ ಲಕ್ಷಣಗಳಿಂದ ಕೂಡಿರುತ್ತದೆ
  • ಓಮಿಕ್ರಾನ್‌ ಕೋವಿಡ್ ತಳಿ ಆರ್ಭಟದ ಬಗ್ಗೆ ಡಿಸೆಂಬರ್‌ ಅಂತ್ಯಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ
  • ದೇಶದಲ್ಲಿ ಓಮಿಕ್ರಾನ್‌ನಿಂದ ಯಾವ ರೀತಿ ಬೇಕಾದರೂ ತೊಂದರೆಗಳು ಎದುರಾಗಬಹುದು
  • ಕರ್ನಾಟಕದಲ್ಲಿ ಐದು, ತೆಲಂಗಾಣದಲ್ಲಿ ನಾಲ್ಕು ಹೊಸ ಓಮಿಕ್ರಾನ್ ಪ್ರಕರಣಗಳು ಪತ್ತೆ

ಹೊಸದಿಲ್ಲಿ: ಕೊರೊನಾ ವೈರಸ್ ಹೊಸ ರೂಪಾಂತರಿ ವೈರಾಣು ‘ಓಮಿಕ್ರಾನ್‌’ನ ಪರಿಣಾಮಗಳು ಎಷ್ಟು ಗಂಭೀರವಾಗಿವೆ ಎಂಬುದರ ಸ್ಪಷ್ಟ ಚಿತ್ರಣ ಈ ತಿಂಗಳ ಕೊನೆ ವೇಳೆಗೆ ಸಿಗಲಿದೆ ಎಂದು ಹಿರಿಯ ವೈರಾಣು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

”ವೈರಾಣುಗಳ ಹೊಸ ರೂಪಾಂತರಿಗಳ ದಾಳಿಯು ಆರಂಭದಲ್ಲಿ ಸೌಮ್ಯ ಲಕ್ಷಣಗಳಿಂದಲೇ ಕೂಡಿರುತ್ತದೆ. ಹಾಗೆಂದು ನಿರ್ಲಕ್ಷ್ಯ ಮಾಡಿದಲ್ಲಿ ಹೆಚ್ಚಿನ ಜನಸಂಖ್ಯೆಯು ಸೋಂಕಿಗೆ ತುತ್ತಾಗಿ, ಗಂಭೀರ ಅನಾರೋಗ್ಯಕ್ಕೀಡಾಗುತ್ತಾರೆ. ಪರಿಣಾಮ ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚುತ್ತದೆ. ಓಮಿಕ್ರಾನ್‌ ಆರ್ಭಟದ ಬಗ್ಗೆ ಡಿಸೆಂಬರ್‌ ಅಂತ್ಯಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ,” ಎಂದು ಹಿರಿಯ ವಿಜ್ಞಾನಿ ಹಾಗೂ ಇನ್‌ಸ್ಟಿಟ್ಯೂಟ್‌ ಆಫ್‌ ಜಿನೊಮಿಕ್ಸ್‌ ಮತ್ತು ಇಂಟಗ್ರೆಟೀವ್‌ ಬಯಾಲಜಿ (ಐಜಿಐಬಿ) ನಿರ್ದೇಶಕ ಡಾ. ಅನುರಾಗ್‌ ಅಗರ್‌ವಾಲ್‌ ಹೇಳಿದ್ದಾರೆ.
ಕರ್ನಾಟಕದಲ್ಲಿ ಮತ್ತೆ 5 ಓಮಿಕ್ರಾನ್ ಪ್ರಕರಣ: ಮೂವರು ವಿದೇಶ, ಇಬ್ಬರು ದಿಲ್ಲಿಯಿಂದ ಬಂದವರು
”ವಿಪರೀತ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಪ್ರಸರಣ ವೇಗವು ಅತ್ಯಧಿಕವಾಗಿರುವ ಓಮಿಕ್ರಾನ್‌ನಿಂದ ಯಾವ ರೀತಿ ಬೇಕಾದರೂ ತೊಂದರೆಗಳು ಎದುರಾಗಬಹುದು. ಆರೋಗ್ಯ ವ್ಯವಸ್ಥೆ, ಜನಸಾಮಾನ್ಯರು ಆದಷ್ಟು ಮುನ್ನೆಚ್ಚರಿಕೆ ಕ್ರಮಗಳು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಯುವ ಜನರು ಬಹಳ ತಿರುಗಾಡುತ್ತಾರೆ. ಹಾಗಾಗಿ ಅವರಲ್ಲಿ ಓಮಿಕ್ರಾನ್‌ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದರೆ ಅವರು ಶೀಘ್ರ ಚೇತರಿಕೆ ಕಂಡುಕೊಳ್ಳುತ್ತಾರೆ. ಈ ನಡುವೆ ಯುವಕರಿರುವ ಮನೆಗಳಲ್ಲಿ ವಾಸಮಾಡುತ್ತಿರುವ ವೃದ್ಧರಿಗೆ ಅಥವಾ ಮಕ್ಕಳಿಗೆ ಓಮಿಕ್ರಾನ್‌ ತಗುಲಿದರೆ ಸೋಂಕಿನ ಗಂಭೀರತೆ ಹೆಚ್ಚುವ ಸಾಧ್ಯತೆ ಇದೆ,” ಎಂದು ಅಗರ್‌ವಾಲ್‌ ತಿಳಿಸಿದ್ದಾರೆ.

ಕ್ಯಾಪ್ಸೂಲ್‌ ಪ್ರಯೋಗ ಶುರು
ಅಮೆರಿಕ ಹಾಗೂ ಇಸ್ರೇಲ್‌ ಜಂಟಿ ಸಹಭಾಗಿತ್ವ ಇರುವ ಒರಾವ್ಯಾಕ್ಸ್‌ ಮೆಡಿಕಲ್‌ ಎಂಬ ಕಂಪನಿಯು ಕೊರೊನಾ ನಿರೋಧಕ ಮಾತ್ರೆ ‘ಒರಾಮೆಡ್‌’ನ ಪ್ರಥಮ ಹಂತದ ಪ್ರಯೋಗವನ್ನು ದಕ್ಷಿಣ ಆಫ್ರಿಕಾದಲ್ಲಿ ಆರಂಭಿಸಿದೆ. ”ಲಸಿಕೆಗಳು ಮೂಲಕ ಸಾಮೂಹಿಕ ರೋಗನಿರೋಧಕ ಹೆಚ್ಚಿಸಿ ಓಮಿಕ್ರಾನ್‌ ಪ್ರಸರಣ ಹತ್ತಿಕ್ಕಲು ದಕ್ಷಿಣ ಆಫ್ರಿಕಾ ಸರಕಾರ ಶ್ರಮಿಸುತ್ತಿದೆ. ಹೀಗಾಗಿ ಇಲ್ಲಿಂದಲೇ ಪ್ರಯೋಗ ಆರಂಭಿಸಿದ್ದೇವೆ,” ಎಂದು ಕಂಪನಿಯು ತಿಳಿಸಿದೆ.
ಕರ್ನಾಟಕದಲ್ಲಿ ಓಮಿಕ್ರಾನ್ ಕ್ಲಸ್ಟರ್ ಇಲ್ಲ, ಆದರೆ ಅಪಾಯ ತಪ್ಪಿದ್ದಲ್ಲ: ವೈದ್ಯರ ಎಚ್ಚರಿಕೆ
”ಲಸಿಕೆಗಳನ್ನು ಸೂಜಿಗಳ ಮೂಲಕ ನೀಡಬೇಕಿರುವ ಅನಿವಾರ್ಯತೆಯನ್ನು ನೀಗಿಸಲು ಒರಾಮೆಡ್‌ ಔಷಧದ ಪ್ರಯೋಗ ಕ್ಷಿಪ್ರವಾಗಿ ಸಾಗಿದೆ. ಇದು ಯಶಸ್ವಿಯಾದಲ್ಲಿ, ಬಹುಬೇಗನೇ ಹೆಚ್ಚೆಚ್ಚು ಜನರಿಗೆ ಕೊರೊನಾ ನಿರೋಧಕ ಮಾತ್ರೆ ಅಥವಾ ಬಾಯಿಯಿಂದ ನೀಡಬಹುದಾದ ಲಸಿಕೆಯು ತಲುಪಲಿದೆ. ಮನುಷ್ಯರ ಮೇಲೆ ಎರಡು ಹಂತಗಳ ಪ್ರಯೋಗಕ್ಕೆ ಸದ್ಯ ಅನುಮತಿ ಪಡೆಯಲು ಸಿದ್ಧತೆ ನಡೆಸಿದ್ದೇವೆ,” ಎಂದು ಒರಾವ್ಯಾಕ್ಸ್‌ ಕಂಪನಿಯ ಸಿಇಒ ನದಾವ್‌ ಕಿದ್ರೊನ್‌ ತಿಳಿಸಿದ್ದಾರೆ.

ಸಕ್ಕರೆ ಕಾಯಿಲೆಯುಳ್ಳವರಿಗೆ ಇನ್ಸುಲಿನ್‌ ಅನ್ನು ಬಾಯಿಯ ಮೂಲಕ ನೀಡುವ ಕ್ಯಾಪ್ಸೂಲ್‌ ಅನ್ನು ಸಹ ಒರಾವ್ಯಾಕ್ಸ್‌ ಅಭಿವೃದ್ಧಿಪಡಿಸಿದ್ದು, ಅಂತಿಮ ಹಂತದ ಪ್ರಯೋಗ ನಡೆಯುತ್ತಿದೆ.

ದೇಶದ ಒಟ್ಟು ಓಮಿಕ್ರಾನ್ ಕೋವಿಡ್ 19 ಪ್ರಕರಣಗಳ ಸಂಖ್ಯೆ 87ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಐದು ಹೊಸ ಓಮಿಕ್ರಾನ್ ಪ್ರಕರಣ ವರದಿಯಾಗಿವೆ. ಇದರಿಂದ ರಾಜ್ಯದ ಒಟ್ಟು ಕೇಸ್‌ಗಳು ಎಂಟಕ್ಕೆ ತಲುಪಿವೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಕೂಡ ನಾಲ್ಕು ಹೊಸ ಪ್ರಕರಣ ದಾಖಲಾಗಿವೆ.



Read more