Source : Online Desk
ಅಮರಾವತಿ: ವೃದ್ಧರು ಮತ್ತು ವಿಧವೆಯರಿಗೆ ನೀಡಲಾಗುತ್ತಿರುವ ಮಾಸಿಕ ಪಿಂಚಣಿಯನ್ನು ಮುಂದಿನ ವರ್ಷ ಅಂದರೆ ಜನವರಿ 2022 ರಿಂದ 2500 ರೂ. ಗಳಿಗೆ ಹೆಚ್ಚಿಸಲಾಗಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಹೇಳಿದ್ದಾರೆ.
ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗಳ ಜೊತೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಜಗನ್, ಯಾವ ಯಾವ ಯೋಜನೆಗಳನ್ನು ಯಾವಾಗ ಜಾರಿಗೆ ತರಬೇಕು ಎಂಬ ತೀರ್ಮಾನಗಳನ್ನು ತಿಳಿಸಿದರು. ಇದೇ ತಿಂಗಳು 21 ರಂದು ಸಂಪೂರ್ಣ ಗೃಹ ಹಕ್ಕು ಯೋಜನೆಯನ್ನು ಜಾರಿಗೆ ತರಲಿದ್ದೇವೆ ಮತ್ತು ಇಲ್ಲಿಯವರೆಗೂ ಸರ್ಕಾರದಿಂದ ಬೇರೆ ಯಾವುದೇ ಯೋಜನೆಗಳ ಲಾಭ ಪಡೆಯದವರಿಗೆ ಇದೇ ತಿಂಗಳು ಅವರಿಗೆ ಈ ಯೋಜನೆಯಲ್ಲಿ ಮನೆಗಳನ್ನ ನೀಡುವ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.
ಇದನ್ನು ಓದಿ: ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ಸೇತುವೆಯಿಂದ ಹೊಳೆಗೆ ಬಸ್ ಬಿದ್ದು ಅಪಘಾತ: ಕನಿಷ್ಠ 9 ಪ್ರಯಾಣಿಕರು ಸಾವು
ಬರುವ ಜನವರಿ 09 ರಂದು 45 ರಿಂದ 60 ವರ್ಷ ವಯೋಮಿತಿಯ ಕಡುಬಡವ(ಇಸಿಬಿ) ಮಹಿಳೆಯರಿಗೆ ವರ್ಷಕ್ಕೆ 15 ಸಾವಿರ ಹಣ ನೀಡಲಿದ್ದೇವೆ. ಇದೇ ರೀತಿ ಮೂರು ವರ್ಷಗಳವರೆಗೂ ನೀಡಲಾಗುವುದು. ಜನವರಿಯಲ್ಲೇ ರೈತ ಭರವಸೆ ಯೋಜನೆಯ ಮೂರನೇ ಕಂತು ಬಿಡುಗಡೆ ಮಾಡಲಾಗುವುದು. ಬಿಡುಗಡೆ ಮಾಡಲಿರುವ ದಿನಾಂಕವನ್ನ ಅತಿ ಶೀಘ್ರದಲ್ಲೆ ತಿಳಿಸಲಾಗುವುದು ಎಂದರು.
ಹೈಕೋರ್ಟ್ ಆದೇಶದಿಂದ ಮನೆ ನಿರ್ಮಾಣಕ್ಕೆ ಹೆಚ್ಚಿನ ಉತ್ತೇಜನ ಸಿಕ್ಕಿದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ತಿಳಿಸಿದರು. ಮಂಜೂರಾದ ಪ್ರತಿಯೊಂದು ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರ ಈ ಯೋಜನೆಯಡಿ 10.000 ಕೋಟಿಯಷ್ಟು ಬಾಕಿ ಹಣವನ್ನು ಮನ್ನಾ ಮಾಡಲಿದೆ. ಈ ಯೋಜನೆಯಡಿ ಬರಲಿರುವ ಮನೆಗಳಿಗೆ 5 ಲಕ್ಷ ರೂ.ಗಳ ವೆಚ್ಚ ತಗುಲಲಿದ್ದು, ನಿರ್ಮಾಣ ಕಾರ್ಯ ಪೂರ್ತಿಯಾದ ಮೇಲೆ ಮನೆಯ ನೋಂದಣಿಯನ್ನು ಉಚಿತವಾಗಿ ಮಾಡಿಕೊಡಲಾಗುವುದು. ಈ ಹಿಂದೆ ಇದ್ದ ಸರ್ಕಾರ ಜನವಿರೋಧಿಯಾದ ಕಾರಣ ಈ ಯೋಜನೆಯನ್ನ ಜಾರಿ ಮಾಡಲಿಲ್ಲ. ಕನಿಷ್ಟ ಬಡ್ಡಿಯನ್ನು ಕೂಡ ಮನ್ನಾ ಮಾಡಲಿಲ್ಲ. 90 ದಿನಗಳೊಳಗಾಗಿ ಮನೆಗೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕೆಂದರು. ಮದ್ಯಮ ವರ್ಗದವರಿಗೆ ಸ್ಮಾರ್ಟ್ ಟೌನ್ ಶಿಪ್ ನಿರ್ಮಿಸಬೇಕೆಂದು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.