Karnataka news paper

ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಅಪಘಾತ, ಇಬ್ಬರು ಬಲಿ


ಬೆಂಗಳೂರು: ನಗರದ ಮೆಜೆಸ್ಟಿಕ್‌ ಹಾಗೂ ಹೆಣ್ಣೂರು-ಬಾಗಲೂರು ರಸ್ತೆಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸೋಮವಾರ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಪಶ್ಚಿಮ ಬಂಗಾಳ ಮೂಲದ ಭಿಷ್ವಾದೇಬ್‌ ದಾಸ್‌ (36) ಎಂಬುವರು ಸಾವನ್ನಪ್ಪಿದ್ದಾರೆ.

ಶಿವಮೊಗ್ಗದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ ಭಿಷ್ವಾದೇಬ್‌ ದಾಸ್‌, ಸ್ನೇಹಿತನನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ಅವರು ಭಾನುವಾರ ರಾತ್ರಿ ಶಿವಮೊಗ್ಗದಿಂದ ಹೊರಟು ಸೋಮವಾರ ಬೆಳಗಿನ ಜಾವ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಟರ್ಮಿನಲ್‌ 2ಎನಲ್ಲಿ ಅವರಿಗೆ ಬಸ್‌ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಭಿಷ್ವಾದೇಬ್‌ ಮೇಲೆ ಬಸ್‌ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಸಂದರ್ಭದಲ್ಲಿ ಭಿಷ್ವಾದೇಬ್‌ ಪಾನಮತ್ತರಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಬಸ್‌ ಚಾಲಕನನ್ನು ಬಂಧಿಸಿ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಉಪ್ಪಾರಪೇಟೆ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಎಂಟಿಸಿಗೆ ಬಲಿ

ಹೆಣ್ಣೂರು-ಬಾಗಲೂರು ರಸ್ತೆಯ ಗುಂಡಪ್ಪ ಸರ್ಕಲ್‌ ಬಳಿ ಭಾನುವಾರ ರಾತ್ರಿ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ವಯಸ್ಸು ಸುಮಾರು 40 ವರ್ಷ. ಆದರೆ, ಅವರ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆ ವ್ಯಕ್ತಿಯು ರಸ್ತೆ ದಾಟುತ್ತಿದ್ದಾಗ ಬಸ್‌ ಡಿಕ್ಕಿ ಹೊಡೆದಿದೆ. ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಬಸ್‌ ಚಾಲಕನನ್ನು ಬಂಧಿಸಿ, ವಾಹನ ವಶಪಡಿಸಿಕೊಂಡಿದ್ದಾರೆ. ದೂರು ದಾಖಲಾಗಿದೆ.

ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ನಲ್ಲಿ ಭೀಕರ ಅಪಘಾತ, ಐವರ ಸಾವು

ಬಂಗಾರಪೇಟೆ: ತಾಲೂಕಿನ ಕುಪ್ಪನಹಳ್ಳಿ ಬಳಿಯ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಇನ್ನೋವಾ ಕಾರ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಹೊಟ್ಟೆಯಲ್ಲಿದ್ದ ಮಗುವೂ ಸಾವನಪ್ಪಿದೆ.

ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್‌ನಲ್ಲಿದ್ದ ಕೆಜಿಎಫ್‌ ತಾಲೂಕಿನ ಕಮ್ಮಸಂದ್ರ ಗ್ರಾಮದ ಮಹೇಶ (45) , ಉದ್ವಿತ (2), ರತ್ನಮ್ಮ (60) ಹಾಗೂ ಬೈಕ್‌ ಸವಾರ ಶ್ರೀನಾಥ್‌ (30) ಮೃತ ದುರ್ದೈವಿಗಳು.

ಸುಶ್ಮಿತಾ, ವಿನುತ, ಸುಜಾತ, ಸುನಿಲ್‌ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಕಮ್ಮಸಂದ್ರ ಗ್ರಾಮಕ್ಕೆ ವಾಪಸ್‌ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇನ್ನೇನು ಕೇವಲ ಹತ್ತು ನಿಮಿಷಗಳಲ್ಲಿ ಮನೆಗೆ ತಲುಪಬೇಕಾದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ಹೆಡ್‌ಲೈಟ್‌ ಹಾಕದೇ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಇನ್ನೋವಾ ಡಿಕ್ಕಿ ಹೊಡೆದು ನಂತರ ರಸ್ತೆ ಬದಿಯ ಕಾಲುವೆಗೆ ನುಗ್ಗಿ ಅಪಘಾತ ಸಂಭವಿಸಿದೆ.

ಪ್ರತ್ಯಕ್ಷದರ್ಶಿ ಕುಪ್ಪನಹಳ್ಳಿಯ ಮಂಜು ಮಾತನಾಡಿ, ಚೆನ್ನೈ ಎಕ್ಸ್‌ಪ್ರೆಸ್‌ ಹೈವೇನಲ್ಲಿ ರಾತ್ರಿ 11:30ರಲ್ಲಿ ಜೋರಾದ ಶಬ್ದ ಕೇಳಿಬಂತು. ಎಚ್ಚರಗೊಂಡು ಹೈವೇಯಲ್ಲಿ ಬಂದು ನೋಡಿದಾಗ, ಬೈಕ್‌ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ, ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು. ಒಂದು ಮಗು ಮಾತ್ರ ಕಾರಿನಲ್ಲಿ ಅಳುತ್ತಿತ್ತು. ಆ ಮಗುವನ್ನು ತಕ್ಷಣ ಬೈಕ್‌ನಲ್ಲಿ ಬಂಗಾರಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದೆವು. ನಂತರ ಬಂಗಾರಪೇಟೆ ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್‌ ಗೆ ಕರೆ ಮಾಡಿ ತಿಳಿಸಿದೆವು. ಅಷ್ಟರಲ್ಲೇ ನಾಲ್ವರು ಮೃತಪಟ್ಟಿದ್ದರು ಎಂದರು.

ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.



Read more

[wpas_products keywords=”deal of the day sale today offer all”]