Karnataka news paper

ಬರಲಿದೆ ಟಾಟಾ ಕಂಪನಿಯ ಮೆಗಾ ಐಪಿಒ, ₹17,500 ಕೋಟಿ ಸಂಗ್ರಹಿಸಲು ಹೊರಟಿದೆ Tata Capital


ಟಾಟಾ ಸಮೂಹವು ಮತ್ತೊಂದು ಬೃಹತ್‌ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ (ಐಪಿಒ) ತೆರೆಯಲು ಸಜ್ಜಾಗಿದೆ. ಸಮೂಹವು ತನ್ನ ಹಣಕಾಸು ಸೇವಾ ಘಟಕವಾದ ಟಾಟಾ ಕ್ಯಾಪಿಟಲ್ ಲಿಮಿಟೆಡ್‌ನ ಐಪಿಒ ಮೂಲಕ ಈ ವರ್ಷದ ಅತಿದೊಡ್ಡ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ ಆರಂಭಿಸಲು ಯೋಜನೆ ರೂಪಿಸಿದೆ.ಐಪಿಒದಲ್ಲಿ ಕಂಪನಿಯು 11 ಬಿಲಿಯನ್‌ ಡಾಲರ್‌ (ಸುಮಾರು 96,000 ಕೋಟಿ ರೂ.) ಮೌಲ್ಯವನ್ನು ಗುರಿಯಾಗಿಸಿಕೊಂಡಿದೆ. ಈ ಐಪಿಒ ಮೂಲಕ ಟಾಟಾ ಕ್ಯಾಪಿಟಲ್‌ 2 ಬಿಲಿಯನ್‌ ಡಾಲರ್‌ (ಸುಮಾರು 17,500 ಕೋಟಿ ರೂ.) ಹಣವನ್ನು ಸಂಗ್ರಹಿಸುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮನಿ ಕಂಟ್ರೋಲ್‌ ವರದಿ ಮಾಡಿದೆ.

ಟಾಟಾ ಕ್ಯಾಪಿಟಲ್‌ನ ಆಡಳಿತ ಮಂಡಳಿಯು ಕಳೆದ ವಾರ 23 ಕೋಟಿ ಷೇರುಗಳನ್ನು ಪಟ್ಟಿ ಮಾಡಲು ಒಪ್ಪಿಗೆ ನೀಡಿತ್ತು. ಇದರ ಜೊತೆಗೆ ಹಾಲಿ ಷೇರುದಾರರಿಂದ ಷೇರುಗಳ ಮಾರಾಟವನ್ನೂ (ಒಎಫ್‌ಎಸ್‌) ಘೋಷಿಸಲಾಗಿದೆ. ಕಂಪನಿಯು 1,504 ಕೋಟಿ ರೂ. ಮೊತ್ತದ ಹಕ್ಕುಗಳ ವಿತರಣೆಯನ್ನೂ (ರೈಟ್ಸ್ ಇಶ್ಯೂ) ಘೋಷಿಸಿದೆ.

ಷೇರುಪೇಟೆ ಕುಸಿತದಲ್ಲೂ ಐಪಿಒ ಭರಾಟೆ

ಷೇರು ಮಾರುಕಟ್ಟೆ ಸೂಚ್ಯಂಕಗಳು ಇತ್ತೀಚಿನ ದಿನಗಳಲ್ಲಿ ಭಾರೀ ಕುಸಿತ ಕಂಡಿದ್ದು, ನೆಲಕಚ್ಚಿವೆ. ಆದರೆ, ಇದನ್ನು ಗಣನೆಗೆ ತೆಗೆದುಕೊಳ್ಳದೆ ಕಂಪನಿಗಳು ಐಪಿಒಗೆ ಸಿದ್ಧತೆ ನಡೆಸುತ್ತಿವೆ. ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಸಹ ಈ ವರ್ಷ ಐಪಿಒ ಆರಂಭಿಸಲು ಯೋಜಿಸುತ್ತಿದೆ. ಸುಮಾರು 1.5 ಬಿಲಿಯನ್‌ ಡಾಲರ್‌ ಸಂಗ್ರಹಿಸುವ ಗುರಿಯನ್ನು ಕೊರಿಯಾ ಮೂಲದ ಕಂಪನಿಯು ಹೊಂದಿದೆ.

ಇನ್ನೊಂದೆಡೆ ಪ್ರುಡೆನ್ಷಿಯಲ್ ಪಿಎಲ್‌ಸಿ ತನ್ನ ಭಾರತೀಯ ಘಟಕದ ಐಪಿಒಗಾಗಿ ಬ್ಯಾಂಕರ್‌ಗಳನ್ನು ನೇಮಿಸಿದೆ. ಇದು 1 ಬಿಲಿಯನ್‌ ಡಾಲರ್‌ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಕಳೆದ ವರ್ಷ, ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ದಾಖಲೆಯ 3.3 ಬಿಲಿಯನ್‌ ಡಾಲರ್‌ (27,870 ಕೋಟಿ ರೂ.) ಮೊತ್ತವನ್ನು ಐಪಿಒ ಮೂಲಕ ಸಂಗ್ರಹಿಸಿ ದಾಖಲೆ ಬರೆದಿತ್ತು.

ಟಾಟಾ ಕ್ಯಾಪಿಟಲ್ ಒಂದು ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ) ಆಗಿದ್ದು, ಭಾರತದ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿದೆ. ಟಾಟಾ ಒಡೆತಕ್ಕೆ ಸೇರಿದ ಮುಂಬೈ ಮೂಲದ ಟಾಟಾ ಕ್ಯಾಪಿಟಲ್ ಭಾರತದಾದ್ಯಂತ 900ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಬಲವಾಗಿ ನೆಲೆಯೂರಿದೆ.

ಟಾಟಾದ ಈ ವರ್ಷದ ಬೃಹತ್‌ ಐಪಿಒಗೆ ಸಿರಿಲ್ ಅಮರ್‌ಚಂದ್ ಮಂಗಲದಾಸ್ ಮತ್ತು ಕೋಟಕ್‌ ಮಹೀಂದ್ರಾ ಕ್ಯಾಪಿಟಲ್ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿವೆ. ಐಪಿಒಗೆ ಸಿದ್ಧತೆಗಳಷ್ಟೇ ಆರಂಭವಾಗಿದ್ದು. ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿವೆ.



Read more

[wpas_products keywords=”deal of the day sale today offer all”]