Karnataka news paper

ಕರ್ನಾಟಕ ಬಜೆಟ್ ಅಧಿವೇಶನ; ರಾಜ್ಯಪಾಲರ ಭಾಷಣಕ್ಕೆ ಬಿಜೆಪಿ ವಿರೋಧ ಮಾಡಿದ್ದೇಕೆ? ಇಲ್ಲಿದೆ ಡೇ -1 ಹೈಲೈಟ್ಸ್


ಬೆಂಗಳೂರು: ವಿಧಾನಮಂಡಲ ಬಜೆಟ್ ಅಧಿವೇಶನ ಸೋಮವಾರದಿಂದ ಅರಂಭಗೊಂಡಿದ್ದು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಭಾಷಣ ಮಾಡಿದರು. ರಾಜ್ಯಪಾಲರು ಸರ್ಕಾರದ ಸಾಧನೆಗಳನ್ನು ಹೊಗಳಿದರೆ, ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಅಭಿವೃದ್ದಿ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ವಿಧಾನಕ್ಕೆ ಗವರ್ನರ್ ಮೆಚ್ಚುಗೆ ಸೂಚಿಸಿದರು.ಕರ್ನಾಟಕದಲ್ಲಿ ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನ ಸ್ನೇಹಿಯಾಗಿ ಕೆಲಸ ಮಾಡ್ತಿವೆ. ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ, ಹಣಕಾಸು ವ್ಯವಸ್ಥೆ ಹದಗೆಡುತ್ತಿದೆ ಎಂಬ ವಿರೋಧ ಪಕ್ಷದ ಭವಿಷ್ಯ ಸುಳ್ಳಾಗಿದೆ. ಪ್ರತಿಯೊಂದು ವಲಯದಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದೆ ಎಂದು ಮೆಚ್ಚುಗೆ ಸೂಚಿಸಿದರು.

ರಾಜ್ಯಪಾಲರ ಭಾಷಣಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಶೂನ್ಯ ಸಾಧನೆ ತೋರಿದ್ದರೂ, ನಾವು ಚಾಂಪಿಯನ್‌ ಎಂದು ಕಾಂಗ್ರೆಸ್‌ ಸರ್ಕಾರ ಹೇಳಿಕೊಂಡಿದೆ. ರಾಜ್ಯಪಾಲರ ಅಧಿಕಾರಗಳನ್ನು ಕಿತ್ತುಕೊಂಡು ಈಗ ಅವರ ಮೂಲಕವೇ ಸಾಧನೆ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಳ್ಳಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಭಾಷಣದ ಬಳಿಕ ಸುದ್ದಿಗಾರರೊಂದಿಗೆ ಆರ್‌.ಅಶೋಕ ಮಾತನಾಡಿ, ಅಭಿವೃದ್ಧಿ ಶೂನ್ಯವಾದ ಕಾಂಗ್ರೆಸ್‌ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದೆ. ಅಭಿವೃದ್ಧಿ ಹಾಗೂ ವಿಕಾಸ ಎಂಬ ಮಾತನ್ನು ಅವರ ಬಾಯಲ್ಲಿ ಹೇಳಿಸಿದ್ದಾರೆ. ಕಾಂಗ್ರೆಸ್‌ ನಾಯಕರ ಜೇಬು ತುಂಬಿದೆ, ಕಾಂಗ್ರೆಸ್‌ ಶಾಸಕರ ಮನೆ ತುಂಬಿದೆಯೇ ಹೊರತು ರಾಜ್ಯದ ಅಭಿವೃದ್ಧಿ ಆಗಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ರಾಜ್ಯಪಾಲರನ್ನು ಹೀಯಾಳಿಸುವ ಮಾತಾಡಿ, ಅವರ ಅಧಿಕಾರಗಳನ್ನು ಕಿತ್ತುಕೊಂಡು, ಈಗ ಅವರ ಕೈಯಲ್ಲೇ ನಾವೇ ನಂ.1 ಎಂಬ ರೀತಿಯಲ್ಲಿ ಹೇಳಿಸಲಾಗಿದೆ ಎಂದು ದೂರಿದರು.

ಮೊದಲ ದಿನದ ಇತರ ಹೈಲೈಟ್ಸ್

*ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಶಾಸಕರ ಭವನದಿಂದ ಕಾಲ್ನಡಿಗೆಯಲ್ಲಿ ಆಗಮಿಸಿದ ಶಾಸಕರು ಬಿತ್ತಿ ಪತ್ರವನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

*ರಾಜ್ಯಪಾಲರವನ್ನು ಸ್ವಾಗತಿಸುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಲು ನೋವು ಇದ್ದ ಕಾರಣದಿಂದಾಗಿ ಸಂಪ್ರದಾಯ ಪಾಲಿಸಲು ಸಾಧ್ಯವಾಗಿಲ್ಲ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಗೆ ಅವಮಾನ ಆಗಿದೆ ಎಂದು ಬಿಜೆಪಿ ಶಾಸಕ ಚನ್ನಬಸಪ್ಪ ( ಚೆನ್ನಿ) ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ‘ಅವಮಾನ’ ಎಂದು ಕೂಗಿದ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಶಾಸಕರೊಬ್ಬರು ‘ಸುಮ್ಮನಿರಿ’ ಎಂದು ಗದರಿಸಿದರು. ರಾಜ್ಯಪಾಲರನ್ನು ಸ್ವಾಗತ ಮಾಡಿ ಸದನಕ್ಕೆ ಸಿಎಂ ನಡೆದುಕೊಂಡು ಬರುತ್ತಿದ್ದರು. ಕಾಲು ನೋವು ಕಾರಣದಿಂದ ಸಿಎಂ ನಡೆದು ಬರುವುದು ತಡವಾಗುತ್ತು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯಗಾಗಿ ಕೆಲ ನಿಮಿಷಗಳ ಕಾಲ ರಾಜ್ಯಪಾಲರು ಕಾಯಬೇಕಾಯಿತು.

*ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಸಂತಾಪ ಸೂಚನ ನಿರ್ಣಯವನ್ನು ಸ್ಪೀಕರ್ ಯು.ಟಿ ಖಾದರ್ ಮಂಡಿಸಿದರೆ ಸಿಎಂ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸೇರಿದಂತೆ ಸದಸ್ಯರು ನಿರ್ಣಯ ಬೆಂಬಲಿಸಿ ಮಾತನಾಡಿದರು. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಮಾಜಿ ಶಾಸಕ ಎಂ ಶ್ರೀನಿವಾಸ್, ಮಾಜಿ ಶಾಸಕಿ ಜಯವಾಣಿ ಮಂಚೇಗೌಡ, ಸಿನಿಮಾ ನಿರ್ದೇಶಕ ಶಾಮ್ ಬೆನಗಲ್, ಸಾಹಿತಿ ನಾ ಡಿಸೋಜ, ಹಾಲಕ್ಕಿ ಜನಾಂಗದ ಪದ್ಮಶ್ರೀ ಪುರಸ್ಕೃತೆ ಸುಕ್ರೀ ಬೊಮ್ಮಗೌಡಗೆ ಸಂತಾಪ ಸೂಚಿಸಲಾಯ್ತು.

’ಎಂತಹ ದುರ್ಗತಿ, ರಾಜ್ಯಪಾಲರ ಅಧಿಕಾರವನ್ನೇ ಕಿತ್ತುಕೊಂಡು ಈಗ ಅವರಿಂದಲೇ ಸುಳ್ಳು ಹೇಳಿಸಿದ ಸರ್ಕಾರ’
*ಇನ್ನು ವಿಧಾನಸೌಧ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಮೇಳದಲ್ಲಿ ಆಡಳಿತ ಹಾಗೂ ವಿಪಕ್ಷಗಳ ಶಾಸಕರು ಭಾಗಿಯಾಗಿ ಪುಸ್ತಕ ಖರೀದಿ ಮಾಡಿದರು. ಪುಸ್ತಕ ಖರೀದಿಗೆ ಶಾಸಕರ ಹಣವನ್ನು ಬಳಕೆ ಮಾಡುವ ವಿಚಾರವಾಗಿ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಶಾಸಕರ ಅನುದಾನದಲ್ಲಿ ಏಕೆ ಖರೀದಿ ಮಾಡಬೇಕು ಬದಲಾಗಿ ಸರ್ಕಾರವೇ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

*ಇನ್ನು ಸಂತಾಪ ಸಭೆಯ ಬಳಿಕ ಸದನವನ್ನು ಮಂಗಳವಾರ ಬೆಳಗ್ಗೆ 10 ಗಂಟೆಗೆ ಮುಂದೂಡಲಾಯ್ತು.



Read more

[wpas_products keywords=”deal of the day sale today offer all”]