Karnataka news paper

ಅಮಿತ್ ಶಾ ನಂಬರ್ ನಕಲು ಮಾಡಿ ಜಾಕ್ವೆಲಿನ್ ಫರ್ನಾಂಡಿಸ್ ಸ್ನೇಹ ಸಂಪಾದಿಸಿದ್ದ ವಂಚಕ ಸುಕೇಶ್


ಹೈಲೈಟ್ಸ್‌:

  • ವಂಚಕ ಸುಕೇಶ್ ಚಂದ್ರಶೇಖರ್ ಮತ್ತಿತರರ ವಿರುದ್ಧ ಇ.ಡಿ ಆರೋಪಪಟ್ಟಿ ಸಲ್ಲಿಕೆ
  • ಜಾಕ್ವೆಲಿನ್ ಫರ್ನಾಂಡಿಸ್ ಸ್ನೇಹ ಸಂಪಾದಿಸಲು ಅಮಿತ್ ಶಾ ಕಚೇರಿ ಸಂಖ್ಯೆ ಬಳಕೆ
  • ಜಾಕ್ವೆಲಿನ್ ಹಾಗೂ ಅವರ ಕುಟುಂಬಕ್ಕೆ ಮಿನಿ ಚಾಪರ್, ಕಾರು ಸೇರಿ ದುಬಾರಿ ಕಾಣಿಕೆ
  • ಸನ್ ಟಿವಿ ಮಾಲೀಕ, ಜಯಲಲಿತಾ ಕುಟುಂಬದವ ಎಂದು ಪರಿಚಯಿಸಿಕೊಂಡಿದ್ದ

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ವಂಚಕ ಸುಕೇಶ್ ಚಂದ್ರಶೇಖರ್‌ನ ಕರ್ಮಕಾಂಡಗಳನ್ನು ಬಯಲಿಗೆಳೆಯುತ್ತಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ‘ರಾಜಕೀಯ ಕುಟುಂಬ’ದಿಂದ ಬಂದವನು ಎಂದು ಹೇಳಿಕೊಂಡಿದ್ದ ಆತ, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ನೇಹ ಬಳಸಲು ಗೃಹ ಸಚಿವ ಅಮಿತ್ ಶಾ ಅವರ ಕಚೇರಿ ಸಂಖ್ಯೆಯನ್ನೇ ಹೋಲುವ ಸಂಖ್ಯೆಯಿಂದ ವಂಚನೆಯ ಕರೆಗಳನ್ನು ಮಾಡುತ್ತಿದ್ದ ಎಂದು ಇ.ಡಿ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ.

ಜಾಕ್ವೆಲಿನ್ ಫರ್ನಾಂಡಿಸ್ ಅವರಿಂದ ಇ.ಡಿ ಈ ವರ್ಷ ಎರಡು ಬಾರಿ ಹೇಳಿಕೆ ದಾಖಲಿಸಿಕೊಂಡಿತ್ತು. ಆಗ ಅವರು ಸುಕೇಶ್ ಚಂದ್ರಶೇಖರ್ ತನ್ನನ್ನು ‘ಶೇಖಾರ್ ರತ್ನ ವೇಲ’ ಎಂದು ಪರಿಚಯಿಸಿಕೊಂಡಿದ್ದಾಗಿ ತಿಳಿಸಿದ್ದರು.
ದೇಶ ಬಿಟ್ಟು ಹೋಗುವಂತಿಲ್ಲ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌! ಈ ಸಂಕಷ್ಟಕ್ಕೆ ಕಾರಣವೇನು?
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಸುಕೇಶ್ ಚಂದ್ರಶೇಖರ್, ಆತನ ಪತ್ನಿ ಲೀನಾ ಮರಿಯಾ ಪೌಲ್ ಮತ್ತು ಇತರೆ ಆರು ಮಂದಿಯನ್ನು ಹೆಸರಿಸಿದೆ. ‘ಜಾಕ್ವೆಲಿನ್ ಅವರನ್ನು ಸಂಪರ್ಕಿಸಲು ಸುಕೇಶ್ 2020ರ ಡಿಸೆಂಬರ್ ಹಾಗೂ 2021ರ ಜನವರಿಯಲ್ಲಿ ಹಲವು ಬಾರಿ ಪ್ರಯತ್ನಿಸಿದ್ದ. ಆತನಿಂದ ಅನೇಕ ಕರೆಗಳು ಬಂದಿದ್ದವು. ಆ ವ್ಯಕ್ತಿ ಯಾರು ಎಂದು ಸರಿಯಾಗಿ ಗೊತ್ತಿಲ್ಲದ್ದರಿಂದ ಅವರು ಅದಕ್ಕೆ ಸ್ಪಂದಿಸಿರಲಿಲ್ಲ’ ಎಂದು ಇ.ಡಿ ತಿಳಿಸಿದೆ.

‘ಜಾಕ್ವೆಲಿನ್ ಅವರ ಮೇಕಪ್ ಕಲಾವಿದ ಶಾನ್ ಮುಥಾದಿಲ್ ಅವರಿಗೆ ಸರ್ಕಾರಿ ಕಚೇರಿಯಿಂದ ಕರೆ ಬಂದಿತ್ತು. ಶೇಖಾರ್ ಬಹಳ ಮುಖ್ಯ ವ್ಯಕ್ತಿಯಾಗಿದ್ದು, ಆಕೆಯೊಂದಿಗೆ ಮಾತನಾಡಲು ಬಯಸಿದ್ದಾರೆ. ಹೀಗಾಗಿ ಅವರೊಂದಿಗೆ ಜಾಕ್ವೆಲಿನ್ ಸಂಪರ್ಕದಲ್ಲಿ ಇರಬೇಕು ಸೂಚಿಸಲಾಗಿತ್ತು. ಇದರ ಬಳಿಕ ಆ ವಂಚಕನ ಜತೆ ಜಾಕ್ವೆಲಿನ್ ಸಂಪರ್ಕ ಹೊಂದಿದ್ದರು. ಆತ ತನ್ನ ಕುಟುಂಬದೊಂದಿಗೆ ಸನ್ ಟಿವಿ ಮಾಲೀಕ ಎಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ತಾನು ಜಯಲಲಿತಾ ಅವರ ರಾಜಕೀಯ ಕುಟುಂಬದವನಾಗಿದ್ದು, ಚೆನ್ನೈ ಮೂಲದವನಾಗಿರುವುದಾಗಿ ಹೇಳಿಕೊಂಡಿದ್ದ’ ಎಂದು ಇ.ಡಿ ತಿಳಿಸಿದೆ.

‘ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿದ್ದು, ನೀವು ದಕ್ಷಿಣ ಚಿತ್ರರಂಗದಲ್ಲಿ ನಟಿಸಬೇಕು. ಸನ್ ಟಿವಿ ಅನೇಕ ಪ್ರಾಜೆಕ್ಟ್‌ಗಳನ್ನು ಹೊಂದಿದೆ’ ಎಂದು ಆತ ಹೇಳಿದ್ದಾಗಿ ಆರೋಪಪಟ್ಟಿಯಲ್ಲಿ ವಿವರಿಸಿದೆ.
16 ಐಷಾರಾಮಿ ಕಾರು, ದುಬಾರಿ ವಸ್ತುಗಳು: ವಂಚಕನ ಭವ್ಯ ಬಂಗಲೆ ಕಂಡು ಬೆರಗಾದ ಇ.ಡಿ ಅಧಿಕಾರಿಗಳು
ತನಗೆ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯಿಂದ ಕರೆ ಬಂದಿದ್ದಾಗಿ ಮೇಕಪ್ ಕಲಾವಿದ ತಿಳಿಸಿದ್ದಾರೆ. ಈ ಫೋನ್ ಸಂಖ್ಯೆ ಗೃಹ ಸಚಿವಾಲಯದ ಫೋನ್ ಸಂಖ್ಯೆಗೆ ಹೋಲುತ್ತಿದ್ದರಿಂದ ಅವರೂ ಅದನ್ನು ನಂಬಿ, ಸುಕೇಶ್‌ನ ಮೊಬೈಲ್ ಸಂಖ್ಯೆಯನ್ನು ಜಾಕ್ವೆಲಿನ್ ಅವರೊಂದಿಗೆ ಹಂಚಿಕೊಂಡಿದ್ದರು.

ಫೆಬ್ರವರಿಯಿಂದ ಆಗಸ್ಟ್ 7ರಂದು ಸುಕೇಶ್ ಬಂಧನವಾಗುವವರೆಗೂ ಜಾಕ್ವೆಲಿನ್ ಮತ್ತು ಸುಕೇಶ್ ಸಂಪರ್ಕದಲ್ಲಿ ಇದ್ದರು. ಜಾಕ್ವೆಲಿನ್‌ಗೆ ದುಬಾರಿ ಕೈಚೀಲಗಳು, ವಜ್ರದ ಕಿವಿಯೋಲೆಗಳು, ಬ್ರೇಸ್‌ಲೆಟ್‌ಗಳು ಉಡುಗೊರೆಯಾಗಿ ಸಿಕ್ಕಿದ್ದವು. ಅಷ್ಟೇ ಅಲ್ಲ, ಒಂದು ಬಿಎಂಡಬ್ಲ್ಯೂ ಕಾರನ್ನು ಅಮೆರಿಕದಲ್ಲಿರುವ ಜಾಕ್ವೆಲಿನ್ ತಂಗಿ ಗೆರಾಲ್ಡಿನ್ ಫರ್ನಾಂಡಿಸ್‌ಗೆ ಉಡುಗೊರೆಯಾಗಿ ನೀಡಿದ್ದ. ಜಾಕ್ವೆಲಿನ್ ತಾಯಿಗೆ 1,80,000 ಡಾಲರ್ ಮತ್ತು ಪೋರ್ಷೆ ಕಾರ್ ಕೊಟ್ಟಿದ್ದ. ಜಾಕ್ವೆಲಿನ್ ಅವರಿಗೆ ಮಿನಿ ಚಾಪರ್ ಕೂಡ ನೀಡಿದ್ದ. ಅದನ್ನು ಅವರು ಹಿಂದಿರುಗಿಸಿದ್ದರು.

ಸುಕೇಶ್ ಮತ್ತು ಆತನ ಪತ್ನಿ ಅನೇಕ ಶ್ರೀಮಂತರ ಸಂಪರ್ಕ ಮಾಡಿಕೊಂಡು ಅವರನ್ನು ವಂಚಿಸಿದ ಆರೋಪವಿದೆ. ಅವರ ಜತೆಗೆ ಪ್ರದೀಪ್ ರಮ್ನಾನಿ, ದೀಪಕ್ ರಮ್ನಾನಿ ಹಾಗೂ ಸುಕೇಶ್‌ನ ಸಹವರ್ತಿ ಪಿಂಕಿ ಇರಾನಿಯನ್ನು ಇ.ಡಿ ಇತ್ತೀಚೆಗೆ ಬಂಧಿಸಿದೆ. ಸುಕೇಶ್‌ಗೆ ಸೇರಿದ ಕೆಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಇ.ಡಿ, ಸಮುದ್ರಕ್ಕೆ ಮುಖ ಮಾಡಿದ್ದ ಬಲು ದುಬಾರಿ, ಐಷಾರಾಮಿ ಬಂಗಲೆ, 82.5 ಲಕ್ಷ ನಗದು ಹಾಗೂ ಡಜನ್‌ಗೂ ಅಧಿಕ ಲಕ್ಸುರಿ ಕಾರ್‌ಗಳನ್ನು ವಶಪಡಿಸಿಕೊಂಡಿತ್ತು.



Read more