ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭಾಷಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ, ” ಅಭಿವೃದ್ಧಿ ಶೂನ್ಯವಾದ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದೆ. ಅಭಿವೃದ್ಧಿ ಹಾಗೂ ವಿಕಾಸ ಎಂಬ ಮಾತನ್ನು ಅವರ ಬಾಯಲ್ಲಿ ಹೇಳಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ಕಾಂಗ್ರೆಸ್ ನಾಯಕರ ಜೇಬು ತುಂಬಿದೆ, ಕಾಂಗ್ರೆಸ್ ಶಾಸಕರ ಮನೆ ತುಂಬಿದೆಯೇ ಹೊರತು ರಾಜ್ಯದ ಅಭಿವೃದ್ಧಿ ಆಗಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ರಾಜ್ಯಪಾಲರನ್ನು ಹೀಯಾಳಿಸುವ ಮಾತಾಡಿ, ಅವರ ಅಧಿಕಾರಗಳನ್ನು ಕಿತ್ತುಕೊಂಡು, ಈಗ ಅವರ ಕೈಯಲ್ಲೇ ನಾವೇ ನಂ.1 ಎಂಬ ರೀತಿಯಲ್ಲಿ ಹೇಳಿಸಲಾಗಿದೆ” ಎಂದು ವಿಪಕ್ಷದ ನಾಯಕರು ದೂರಿದರು.
ಆರೋಗ್ಯ ಕೈಗೆಟುಕುತ್ತಿದೆ ಎನ್ನಲಾಗಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕಗಳನ್ನು ಹೆಚ್ಚಿಸಲಾಗಿದೆ. ಬಾಣಂತಿಯರು ಹಾಗೂ ಮಕ್ಕಳು ಸಾಯುತ್ತಿದ್ದಾರೆ. ಆದರೆ ಮಕ್ಕಳನ್ನು ಕಾಪಾಡಲು ಕಟಿಬದ್ಧ ಎನ್ನಲಾಗಿದೆ. ಪರಿಶಿಷ್ಟ ಜಾತಿ, ವರ್ಗದವರ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎನ್ನುತ್ತಾರೆ. ಇತ್ತ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಆರ್.ಅಶೋಕ ಲೇವಡಿ ಮಾಡಿದರು.
ದಲಿತರಿಗೆ ಮೀಸಲಾದ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಹೆಚ್ಚಾಗಿವೆ. ಕಸದ ರಾಶಿ ಕಂಡುಬಂದಿದೆ. ಇಂತಹ ಸಮಯದಲ್ಲಿ ಹೊಸ ರಸ್ತೆಗಳನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ. ಇ-ಖಾತಾ ಮಾಡಿಸಿಕೊಡಲು ಹಣ ಕೊಡಿ ಎಂದು ಜಾಹೀರಾತು ನೀಡಲಾಗುತ್ತಿದೆ. ನೀರಾವರಿಗೆ ಆದ್ಯತೆ ಎಂದಿದ್ದಾರೆ. ಈವರೆಗೆ ಎಷ್ಟು ಯೋಜನೆ ತರಲಾಗಿದೆ? ಗುದ್ದಲಿ ಪೂಜೆ ಮಾಡಲಾಗಿದೆ? ಎಷ್ಟು ಅನುದಾನ ನೀಡಲಾಗಿದೆ ಎಂದು ತಿಳಿಸಲಿ ಎಂದು ಅಶೋಕ ಸವಾಲು ಎಸೆದರು.
ಕಳೆದ 19 ತಿಂಗಳಲ್ಲಿ ಗಂಭೀರ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ. ಅತ್ಯಾಚಾರಗಳು, ಬ್ಯಾಂಕ್ ದರೋಡೆ, ಮೈಸೂರಿನಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಸೇರಿದಂತೆ ಅನೇಕ ಘಟನೆಗಳು ನಡೆದಿವೆ. ಆದರೂ ಸರ್ಕಾರದ ಪ್ರಕಾರ ಇವೆಲ್ಲ ಗಂಭೀರ ಘಟನೆಗಳಲ್ಲ ಎಂದು ಅಶೋಕ ವ್ಯಂಗ್ಯವಾಡಿದರು.
ಮೈಕ್ರೋ ಫೈನಾನ್ಸ್‌ನಿಂದ ಜನರು ಸಾಯುತ್ತಿದ್ದರೂ ಅದು ಸರ್ಕಾರಕ್ಕೆ ಗಂಭೀರವಾಗಿ ಕಂಡಿಲ್ಲ. ಲೂಟಿ ಮಾಡುತ್ತಿದ್ದರೂ ಪಾರದರ್ಶಕ ಆಡಳಿತ ಎಂದು ಹೇಳಿದ್ದಾರೆ. ಹಾಲಿನ ಪ್ರೋತ್ಸಾಹಧನವನ್ನೇ ಬಿಡುಗಡೆ ಮಾಡದೆ ಅದರ ಬಗ್ಗೆಯೇ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಶೇ.30 ರಷ್ಟು ಕಡಿತವಾಗಿದೆ. ಕಲಾವಿದರಿಗೆ ಮಾಸಾಶಾನ ನೀಡಿಲ್ಲ. ನಿಗಮಗಳಲ್ಲಿ ಹಣವಿಲ್ಲ. ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಿಲ್ಲ. ಇಷ್ಟಾದರೂ ಆಡಳಿತದ ಬಗ್ಗೆ ಹೊಗಳಿದ್ದಾರೆ ಎಂದು ವಿಪಕ್ಷದ ನಾಯಕ ಅಶೋಕ ಬೇಸರ ವ್ಯಕ್ತ ಪಡಿಸಿದರು.
” ಸಾಮಾನ್ಯವಾಗಿ ರಾಜ್ಯಪಾಲರ ಭಾಷಣ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ವರ್ಷಕ್ಕೆ ಇರಬೇಕಾದ ಮುನ್ನೋಟದ ಗುರಿಗಳನ್ನು ಒಳಗೊಂಡಿರುತ್ತದೆ. ಆದರೆ ಈ ಸರ್ಕಾರ ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ, ಮುಂದೆ ಏನನ್ನಾದರೂ ಮಾಡಲು ಯಾವ ದೂರದೃಷ್ಟಿಯೂ ಹೊಂದಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ”.
” ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಹೇಳಿಸಿ, ಅವರ ದಾರಿ ತಪ್ಪಿಸಿದ್ದಲ್ಲದೆ ನಾಡಿನ ಜನರ ದಿಕ್ಕನ್ನೂ ತಪ್ಪಿಸಿದೆ. ರಾಜ್ಯಪಾಲರ ಭಾಷಣ ಕೇಳಿದರೆ ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿಯಿಲ್ಲ ಎಂಬುದು ಸ್ಪಷ್ಟ. ಕನ್ನಡಿಗರನ್ನು ಸಾಲದ ಪ್ರಪಾತಕ್ಕೆ ತಳ್ಳಿರುವುದರ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಲ್‌ಜೀವನ್ ಮಿಷನ್, ಆವಾಸ್ ವಸತಿ, ಸ್ವಾಮಿತ್ವ ಸೇರಿದಂತೆ ಕೆಲವು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತನ್ನ ಯೋಜನೆಗಳು ಎಂದು ಬಿಂಬಿಸಿಕೊಂಡಿರುವುದೇ ದೊಡ್ಡ ಸಾಧನೆಯಾಗಿದೆ” ಎಂದು ಅಶೋಕ ದೂರಿದರು.
ಯಾವುದೇ ಸರ್ಕಾರಕ್ಕೆ ಪ್ರಮುಖವಾಗಿ ಎರಡು ಆದ್ಯತೆಗಳಿರುತ್ತವೆ. ಒಂದು ಜನಕಲ್ಯಾಣ ಮತ್ತೊಂದು ಅಭಿವೃದ್ಧಿ. ಆದರೆ ಕಾಂಗ್ರೆಸ್ ಸರ್ಕಾರ ಇವೆರಡರ ನಡುವೆ ಸಮತೋಲನ ಸಾಧಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ನಾನು ನನ್ನ ರಾಜಕೀಯ ಜೀವನದಲ್ಲೇ ಇಷ್ಟೊಂದು ನಿಸ್ಸಾರವಾದ ರಾಜ್ಯಪಾಲರ ಭಾಷಣವನ್ನು ಎಂದೂ ಕೇಳಿರಲಿಲ್ಲ. ಏನನ್ನೂ ಮಾಡದ, ಮಾಡಲಾಗದ ಸರ್ಕಾರವನ್ನು ಆರಿಸಿ ಕಳುಹಿಸಿದ್ದು ಈ ನಾಡಿನ ದೌರ್ಭಾಗ್ಯ ಎಂಬುದು ರಾಜ್ಯಪಾಲರ ಭಾಷಣದಿಂದ ರಾಜ್ಯದ ಜನರಿಗೆ ಇಂದು ಮನವರಿಕೆಯಾಗಿದೆ ಎಂದು ಆರ್. ಅಶೋಕ ಹೇಳಿದರು.
Read more
[wpas_products keywords=”deal of the day sale today offer all”]