ಶಮಾ ಮೊಹಮ್ಮದ್ ‘ಎಕ್ಸ್’ನಲ್ಲಿ ರೋಹಿತ್ ಶರ್ಮಾ ಬಗ್ಗೆ ಮಾಡಿರುವ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ. ಅಭಿಮಾನಿಗಳು ಕಮೆಂಟ್ ಬಾಕ್ಸ್‌ನಲ್ಲಿ ರೋಹಿತ್ ಶರ್ಮಾ ಪರವಾಗಿ ಬ್ಯಾಟ್ ಬೀಸಿದ್ದು, ‘ಅವರ ಬ್ಯಾಟಿಂಗ್‌ಗಾಗಿಯೇ ಅವರನ್ನು ಹಿಟ್‌ಮ್ಯಾನ್’ ಎನ್ನುತ್ತಾರೆ ಎಂದು ತಿಳಿಸಿದ್ದಾರೆ. ನಿರಂತರ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತಕೊಂಡ ಶಮಾ ಮೊಹಮ್ಮದ್, ಎಕ್ಸ್ ಖಾತೆಯಿಂದ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಶಮಾ ಪೋಸ್ಟ್‌ಗೆ ಬಿಜೆಪಿ ತಿರುಗೇಟು
‘ಕಾಂಗ್ರೆಸ್‌ಗೆ ಇದು ಅವಮಾನದ ಸಂಗತಿಯಾಗಿದೆ. ಎಲ್ಲವನ್ನೂ ಬಿಟ್ಟು ಈಗ ಭಾರತೀಯ ಕ್ರಿಕೆಟ್ ತಂಡದ ನಾಯಕನ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾದರೆ ರಾಜಕೀಯದಲ್ಲಿ ವಿಫಲವಾದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಕ್ರಿಕೆಟ್ ಆಡುತ್ತಾರೆ ಎಂದು ಅವರು ನಿರೀಕ್ಷಿಸುತ್ತಾರೆಯೇ?’ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪ್ರಶ್ನಿಸಿದ್ದಾರೆ. ‘ಶಮಾ ಪೋಸ್ಟ್ ಭಾರತೀಯ ಕ್ರಿಕೆಟ್ ತಂಡವನ್ನು ಎಲ್ಲಾ ಕಷ್ಟಗಳಲ್ಲೂ ಬೆಂಬಲಿಸುವ ಪ್ರತಿಯೊಬ್ಬ ದೇಶಭಕ್ತನಿಗೂ ಮಾಡಿದ ಅವಮಾನ. ಕಾಂಗ್ರೆಸ್ ಟೀಕೆಯನ್ನು ನಾನು ಪ್ರಶ್ನಿಸುತ್ತೇನೆ’ ಎಂದಿದ್ದಾರೆ.
ರೋಹಿತ್ ಶರ್ಮಾ ಕುರಿತಾಗಿ ಶಮಾ ಮೊಹಮ್ಮದ್ ಪೋಸ್ಟ್‌ಗೆ ಪಾಕಿಸ್ತಾನ ಮೂಲದ ಪತ್ರಕರ್ತರೊಬ್ಬರು ‘ಪರಿಣಾಮಕಾರಿ ಮತ್ತು ವಿಶ್ವ ದರ್ಜೆಯ ಪ್ರದರ್ಶಕ’ ಎಂದು ರಿಪ್ಲೈ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ, ‘ಗಂಗೂಲಿ, ತೆಂಡೂಲ್ಕರ್, ದ್ರಾವಿಡ್, ಕೊಹ್ಲಿ, ಕಪಿಲ್ ದೇವ್ ಮತ್ತು ರವಿಶಾಸ್ತ್ರಿ ಅವರಿಗೆ ಹೋಲಿಸಿದರೆ ರೋಹಿತ್ ಶರ್ಮಾ ಅವರಲ್ಲಿ ವಿಶ್ವದರ್ಜೆ ಏನಿದೆ? ಅವರೊಬ್ಬ ಸಾಧಾರಣ ನಾಯಕ ಮತ್ತು ಸಾಧಾರಣ ಆಟಗಾರ. ಅದೃಷ್ಟದಿಂದ ಟೀಂ ಇಂಡಿಯಾ ನಾಯಕರಾಗಿದ್ದಾರೆ’ ಎಂದಿದ್ದಾರೆ.
ಬಿಜೆಪಿ ನಾಯಕಿ ರಾಧಿಕಾ ಖೇರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಸ್ವಜನಪಕ್ಷಪಾತದ ಮೂಲಕ ಅಭಿವೃದ್ಧಿ ಹೊಂದುವ ಪಕ್ಷವು ಸ್ವಯಂ ನಿರ್ಮಿತ ಚಾಂಪಿಯನ್‌ಗೆ ಉಪನ್ಯಾಸ ನೀಡುತ್ತಿದೆಯೇ?’ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಅವರನ್ನು ಟೀಕಿಸಿದ ರಾಧಿಕಾ ಖೇರಾ, ‘ರೋಹಿತ್ ಶರ್ಮಾ ಭಾರತವನ್ನು ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದರು, ಆದರೆ ರಾಹುಲ್ ಗಾಂಧಿ ತಮ್ಮದೇ ಪಕ್ಷವನ್ನು ಗೊಂದಲದಲ್ಲಿ ಮುಳುಗಿಸದೆ ಮುನ್ನಡೆಸಲು ಸಾಧ್ಯವಿಲ್ಲ!’ ಎಂದು ವ್ಯಂಗ್ಯವಾಡಿದ್ದಾರೆ.
ಶಮಾ ಮೊಹಮ್ಮದ್ ಯಾರು?
ಶಮಾ ಮೊಹಮ್ಮದ್ ಕಾಂಗ್ರೆಸ್ ವಕ್ತಾರೆಯಾಗಿದ್ದು, ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ಯಾನೆಲಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ದಂತವೈದ್ಯೆಯೂ ಹೌದು. 17 ಮೇ 1973 ರಂದು ಕೇರಳದ ಕಣ್ಣೂರಿನ ನ್ಯೂ ಮಾಹೆ ಬಳಿಯ ಚೆರುಕಲ್ಲೈನಲ್ಲಿ ಜನಿಸಿದ ಶಮಾ, ಕುವೈತ್‌ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಭಾರತಕ್ಕೆ ಹಿಂದಿರುಗಿದ ಬಳಿಕ ಶಮಾ ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾಲಯದಿಂದ ದಂತ ವಿಜ್ಞಾನದಲ್ಲಿ ಪದವಿ ಪಡೆದರು.
ಬಳಿಕ ಕೆಲಕಾಲ ಝೀ ಟಿವಿಯಲ್ಲಿ ಪತ್ರಕರ್ತೆಯಾಗಿಯೂ ಕೆಲಸ ಮಾಡಿದರು. 2015ರಲ್ಲಿ ಕಾಂಗ್ರೆಸ್ ಸೇರಿದರು. ಬಳಿಕ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿ ನೇಮಕಗೊಂಡರು. ಡಿಸೆಂಬರ್ 2018ರಲ್ಲಿ, ಶಮಾ ಮೊಹಮ್ಮದ್ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ಪ್ಯಾನೆಲಿಸ್ಟ್ ಆಗಿ ನೇಮಿಸಿತು. ಶಮಾ ವಿವಾಹಿತರಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಈವರೆಗೆ ತಮ್ಮ ವೈಯಕ್ತಿಕ ಜೀವನವನ್ನು ಗೌಪ್ಯವಾಗಿಟ್ಟುಕೊಂಡಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳಾ ಅಭ್ಯರ್ಥಿಗಳ ಕೊರತೆಯನ್ನು ಶಮಾ ಟೀಕಿಸಿದ್ದರು.
Read more
[wpas_products keywords=”deal of the day sale today offer all”]