Karnataka news paper

ನಿರಂತರ ಟಾಸ್ ಸೋತಿದ್ದಕ್ಕೆ ಕಿಚಾಯಿಸಿದ ದಿನೇಶ್ ಕಾರ್ತಿಕ್: `ನೀನು ತೊಲಗಾಚೆ’ ಎಂದು ಕೈತೋರಿದ ರೋಹಿತ್ ಶರ್ಮಾ!


ಏಕೋ ಏನೋ ಭಾರತ ತಂಡಕ್ಕೂ ಟಾಸ್ ಗೂ ಆಗಿ ಬರುತ್ತಿಲ್ಲ. ಭಾರತ ತಂಡ ಟಾಸ್ ಸೋತು ವಿಶ್ವದಾಖಲೆ ನಿರ್ಮಿಸಿದ್ದಾಯಿತು. ಇದೀಗ ನ್ಯೂಜಿಲೆಂಡ್ ವಿರುದ್ಧ ಭಾನುವಾರವೂ ನಡೆದ ಪಂದ್ಯದಲ್ಲೂ ಭಾರತ ಟಾಸ್ ಸೋತಿದೆ. ಈ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ನಡುವೆ ನಡೆದ ತಮಾಷೆಯ ಘಟನೆ ಎಲ್ಲರನ್ನೂ ನಕ್ಕು ನಗಿಸಿದೆ.

ಭಾರತ ತಂಡ ನ್ಯೂಜಿಲೆಂಡ್ ತಂಡದ ವಿರುದ್ಧದ ಪಂದ್ಯಕ್ಕೂ ಮೊದಲು ನಿರಂತರ 12 ಬಾರಿ ಟಾಸ್ ಸೋತು ಬೇಡದ ವಿಶ್ವದಾಖಲೆಯೊಂದನ್ನು ತನ್ನ ಹೆಸರಿಗೆಬರೆಸಿಕೊಂಡದ್ದಾಗಿದೆ. ಅದರಲ್ಲಿ ರೋಹಿತ್ ಶರ್ಮಾ 9 ಬಾರಿ ಟಾಸ್ ಸೋತಿದ್ದರೆ, ಹಂಗಾಮಿ ನಾಯಕನಾಗಿ ಕಾರ್ಯ ನಿರ್ವಹಿಸಿದ್ದ ಕೆಎಲ್ ರಾಹುಲ್ ಅವರು 3 ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಹೀಗಾಗಿ ಭಾನುವಾರವೂ ಭಾರತ ಟಾಸ್ ಸೋತಾಗ ಭಾರತ ತಂಡ 13ನೇ ಬಾರಿ ಟಾಸ್ ಸೋತಂತಾಯಿತು. ಅದರಲ್ಲೂ ನಾಯಕ ರೋಹಿತ್ ಶರ್ಮಾ ಅವರಂತೂ ನಿರಂತರ 10ನೇ ಪಂದ್ಯದಲ್ಲಿ ಟಾಸ್ ಸೋತ ನಿದರ್ಶನವಿದು.

ಮೈದಾನದಲ್ಲಿ ನಡೆದಿದ್ದೇನು?

ಈ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ದಿನೇಶ್ ಕಾರ್ತಿಕ್ ಅವರು ಮೈದಾನದಲ್ಲಿ ಇದ್ದರು. ಅವರಿದ್ದ ಸ್ಥಳಕ್ಕೂ ಟಾಸ್ ಪ್ರಕ್ರಿಯೆ ನಡೆಸದ ಸ್ಥಳಕ್ಕೂ ಕೆಲ ಹೆಜ್ಜೆಗಳಷ್ಟೇ ಅಂತರವಿತ್ತು. ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ವೀಕ್ಷಕ ವಿವರಣೆಕಾರ ಇಯಾನ್ ಬಿಷಪ್ ಜೊತೆ ಮಾತನಾಡುತ್ತಿರುವಾಗಲೇ ಹಿಂದುಗಡೆ ನಿಂತಿದ್ದ ದಿನೇಶ್ ಕಾರ್ತಿಕ್ ಅವರು ರೋಹಿತ್ ಶರ್ಮಾ ಅವರು ಟಾಸ್ ಸೋತದ್ದಕ್ಕೆ ಕಾಲೆಳೆದಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಅವರು ತಮಾಷೆಗೆ `ತೂ ನಿಕಲ್ ಯಹಾಂಸೆ’ ( ಮೊದಲು ನೀನು ಇಲ್ಲಿಂದ ತೊಗಲು) ಎಂದು ನಗುತ್ತಾ ಮೈದಾನದ ಹೊರಗೆ ಕೈ ತೋರಿದ್ದಾರೆ. ಈ ವೇಳೆ ಇಬ್ಬರ ನಡುವೆಯೂ ನಗುವಿನ ವಿನಿಮಯ ಆಗಿದೆ. ಅದರೊಂದಿಗೆ ಸ್ಥಳದಲ್ಲಿದ್ದವರೂ ಇವರಿಬ್ಬರ ತಮಾಷೆಯನ್ನು ನೋಡಿ ಮನಸಾರೆ ನಕ್ಕಿದ್ದಾರೆ.

ಭಾರತ ತಂಡದ ಟಾಸ್ ಸೋಲಿನ ಅಭಿಯಾನ ಪ್ರಾರಂಭ ಆಗಿದ್ದು 2023ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ . ಅಂದು ಅಹ್ಮದಾಬಾದ್ ನ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಚ್ರೇಲಿಯಾ ವಿರುದ್ಧ ಟಾಸ್ ಸೋತ ಭಾರತ ತಂಡ ವಿಶ್ವಕಪ್ ಅನ್ನೂ ಸೋತಿತ್ತು.ವಿಶ್ವಕಪ್ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.

3 ಬಾರಿ ಕೆಎಲ್ ರಾಹುಲ್

ಈ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿಗೆ ಹಂಗಾಮಿ ನಾಯಕನಾಗಿ ಕೆಎಲ್ ರಾಹುಲ್ ಅವರು ಕಾರ್ಯ ನಿರ್ವಹಿಸಿದ್ದರು. ಅವರು ಮೂರೂ ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಅಂದರೆ ಕಳೆದ ಒಂದೂವರೆ ವರ್ಷದಲ್ಲಿ ಭಾರತ ತಂಡ ಏಕದಿನ ಪಂದ್ಯಗಳಲ್ಲಿ ಒಂದು ಬಾರಿಯೂ ಟಾಸ್ ಗೆದ್ದಿಲ್ಲ. ಇದೀಗ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲೂ ಭಾರತ ತಂಡ ಟಾಸ್ ಸೋತಿದೆ. ಆದರೆ ಪಂದ್ಯವನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ ಎಂಬುದೇ ಸಂತಸದ ಸಂಗತಿ.



Read more

[wpas_products keywords=”deal of the day sale today offer all”]