ಜನಸಾಮಾನ್ಯರು ಸರ್ಕಾರಕ್ಕೆ ಮಾಡುವ ಮನವಿಗಳನ್ನು “ಭಿಕ್ಷೆ” ಎಂದು ಕರೆದಿರುವ ಪ್ರಹ್ಲಾದ್ ಪಟೇಲ್, “ಜನರಿಗೆ ಸರ್ಕಾರದಿಂದ ಭಿಕ್ಷೆ ಬೇಡುವ ಅಭ್ಯಾಸ ಬೆಳೆದಿದೆ”..ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಧ್ಯಪ್ರದೇಶದ ರಾಜ್‌ಘರ್ ಜಿಲ್ಲೆಯಲ್ಲಿ ವೀರಾಂಗಣಿ ರಾಣಿ ಅವಂತಿಬಾಯಿ ಲೋಧಿ ಅವರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಪ್ರಹ್ಲಾದ್ ಪಟೇಲ್, “ಸರ್ಕಾರದಿಂದ ಭಿಕ್ಷೆ ಬೇಡುವ ಪರಿಪಾಠವನ್ನು ಜನರು ಬೆಳೆಸಿಕೊಂಡಿದ್ದಾರೆ..” ಎಂದು ಹೇಳಿರುವುದು ಪ್ರತಿಪಕ್ಷಗಳಿಗೆ ಆಹಾರವಾಗಿದೆ.
“ನಾಯಕರು ಬಂದಾಗ ಜನರು ಅವರಿಗೆ ಮನವಿಗಳ ಪಟ್ಟಿಯನ್ನೇ ಸಲ್ಲಿಸುತ್ತಾರೆ. ವೇದಿಕೆಯ ಮೇಲೆ ಮಾಲೆ ಹಾಕಿ, ಕೈಯಲ್ಲಿ ಮನವಿ ಪತ್ರ ಇಡುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ಕೇಳುವ ಬದಲು, ಕೊಡುವ ಮನಸ್ಥಿತಿ ಬೆಳೆಸಿಕೊಳ್ಳಿ. ಇದು ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ ಮತ್ತು ಸುಸಂಸ್ಕೃತ ಸಮಾಜವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ನಾನು ಭರವಸೆ ನೀಡುತ್ತೇನೆ..” ಎಂದು ಪ್ರಹ್ಲಾದ್ ಪಟೇಲ್ ಹೇಳಿದ್ದಾರೆ.
“ಉಚಿತ ವಸ್ತುಗಳ ಮೇಲಿನ ಅತಿಯಾದ ಅವಲಂಬನೆಯು ಸಮಾಜವನ್ನು ಬಲಪಡಿಸುವ ಬದಲು ದುರ್ಬಲಗೊಳಿಸುತ್ತದೆ. ಈ ಭಿಕ್ಷುಕರ ಸೈನ್ಯವು ಸಮಾಜವನ್ನು ಬಲಪಡಿಸುತ್ತಿಲ್ಲ ಬದಲಿಗೆ ಅದನ್ನು ದುರ್ಬಲಗೊಳಿಸುತ್ತಿದೆ. ಉಚಿತ ವಸ್ತುಗಳ ಮೇಲಿನ ಆಕರ್ಷಣೆಯು ಶ್ರೇಷ್ಠ ಮಹಿಳೆಯರಿಗೆ ಗೌರವದ ಸಂಕೇತವಲ್ಲ. ನಾವು ಅವರ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಹುತಾತ್ಮರಿಗೆ ನಿಜವಾಗಿಯೂ ಗೌರವ ಸಲ್ಲಿಸಲಾಗುತ್ತದೆ..” ಎಂದು ಪ್ರಹ್ಲಾದ್ ಪಟೇಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಹೇಳಿದರು.
“ಭಿಕ್ಷೆ ಬೇಡಿದ ಒಬ್ಬ ಹುತಾತ್ಮರ ಹೆಸರನ್ನು ಹೇಳಬಲ್ಲಿರಾ?..” ಎಂದು ಜನರನ್ನು ಪ್ರಶ್ನಿಸಿದ ಪ್ರಹ್ಲಾದ್ ಪಟೇಲ್, ನಾವು ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ, ಭಾಷಣಗಳನ್ನು ಮಾಡುತ್ತೇವೆ ಮತ್ತು ಮುಂದುವರಿಯುತ್ತೇವೆ. ಜನ ಕೂಡ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ, ಭಾಷಣ ಕಕೇಳುತ್ತಾರೆ ತದನಂತರ ಎಲ್ಲವನ್ನೂ ಮರೆತು, ಸರ್ಕಾರದ ಬಳಿ ಭಿಕ್ಷಾ ಪಾತ್ರೆ ಹಿಡಿದು ಬರುತ್ತಾರೆ..” ಎಂದು ಹೇಳುವ ಮೂಲಕ ಮಧ್ಯಪ್ರದೇಶ ಸಚಿವರು ವಿವಾದದ ಕಿಡಿ ಹೊತ್ತಿಸಿದ್ದಾರೆ.
“ನರ್ಮದಾ ಪರಿಕ್ರಮ ಯಾತ್ರಿಕನಾಗಿ, ನಾನು ಭಿಕ್ಷೆ ಬೇಡುತ್ತೇನೆ. ಆದರೆ ಈ ಬೇಡಿಕೆ ಎಂದಿಗೂ ನನಗಾಗಿ ಅಲ್ಲ. ಪ್ರಹ್ಲಾದ್ ಪಟೇಲ್‌ಗೆ ಯಾರು ಏನನ್ನೂ ಕೊಟ್ಟಿದ್ದಾರೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ..” ಎಂದು ಸಚಿವರು ಹೇಳಿದರು.
ಕಾಂಗ್ರೆಸ್ ಕಿಡಿ
ಇನ್ನು ಪ್ರಹ್ಲಾದ್ ಪಟೇಲ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಪ್ರತಿಪಕ್ಷ ಕಾಂಗ್ರೆಸ್, “ಸರ್ಕಾರದ ಬಳಿ ನ್ಯಾಯುತವಾದುದನ್ನು ಕೇಳುವುದು ಜನರ ಹಕ್ಕು..” ಎಂದು ತಿರುಗೇಟು ನೀಡಿದೆ.
ಈ ಕುರಿತು ಮಾತನಾಡಿರುವ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪಟ್ವಾರಿ, “ಜನ ಸರ್ಕಾರದ ಬಳಿ ಭಿಕ್ಷೆ ಬೇಡುತ್ತಾರೆ ಎಂದು ಹೇಳುವ ಮೂಲಕ ಸಚಿವ ಪ್ರಹ್ಲಾದ್ ಪಟೇಲ್ ಮಧ್ಯಪ್ರದೇಶದ ಜನರನ್ನು ಅವಮಾನಿಸಿದ್ದಾರೆ..” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಬಿಜೆಪಿಯ ದುರಹಂಕಾರ ಎಷ್ಟರ ಮಟ್ಟಕ್ಕೆ ತಲುಪಿದೆ ಎಂದರೆ, ಅವರು ಈಗ ಜನಸಾಮಾನ್ಯರನ್ನು ಭಿಕ್ಷುಕರು ಎಂದು ಕರೆಯುತ್ತಿದ್ದಾರೆ. ಕಷ್ಟಗಳಿಂದ ಹೋರಾಡುತ್ತಿರುವವರ ಆಶಯಗಳಿಗೆ ಮತ್ತು ಕಣ್ಣೀರಿಗೆ ಇದು ಅವಮಾನ. ಚುನಾವಣೆಗೆ ಮೊದಲು ಸುಳ್ಳು ಭರವಸೆಗಳನ್ನು ನೀಡುತ್ತಾರೆ ಮತ್ತು ನಂತರ ಅವುಗಳನ್ನು ಪೂರೈಸಲು ನಿರಾಕರಿಸುತ್ತಾರೆ..” ಎಂದು ಜಿತು ಪಟ್ವಾರಿ ಅವರು ಸಚಿವ ಪಹ್ಲಾದ್ ಪಟೇಲ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
“ಚುನಾವಣೆ ಸಂದರ್ಭದಲ್ಲಿ ನಾಚಿಕೆಯಿಲ್ಲದೇ ಮತಭಿಕ್ಷೆ ಕೇಳುವ ಬಿಜೆಪಿ ನಾಯಕರು, ಚುನಾವಣೆಯಲ್ಲಿ ಗೆದ್ದು ಅಧಿಕಾರ ಪಡೆಯುತ್ತಿದ್ದಂತೇ ಜನರನ್ನೇ ಭಿಕ್ಷುಕರು ಎನ್ನುತ್ತಿದ್ದಾರೆ. ಇಂತಹ ದುರಹಂಕಾರದ ಮಾತುಗಳಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ..” ಎಂದು ಕಾಂಗ್ರೆಸ್ ನಾಯಕ ಇದೇ ವೇಳೆ ಎಚ್ಚರಿಸಿದ್ದಾರೆ.
Read more
[wpas_products keywords=”deal of the day sale today offer all”]