Karnataka news paper

ತಾಕತ್ತಿದ್ದರೆ ಪಾಕ್ ವಿರುದ್ಧ ತಲಾ 10 ಟೆಸ್ಟ್, ಒಂಡೇ, ಟಿ20 ಆಡಿ ನೋಡಿ: ಭಾರತಕ್ಕೆ ಸಕ್ಲೈನ್ ಮುಷ್ತಾಕ್ ಸವಾಲು


ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಪರಾಭವಗೊಂಡಿರುವುದು ಅಲ್ಲಿನ ಮಾಜಿ ಆಟಗಾರರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅಪರೂಪಕ್ಕೆ ಒಂದು ಪಂದ್ಯದಲ್ಲಿ ಗೆಲ್ಲುವುದಲ್ಲ. 10 ಟೆಸ್ಟ್, 10 ಏಕದಿನ ಮತ್ತು ಸಾಧ್ಯವಿರುವಷ್ಟು ಟಿ20 ಪಂದ್ಯಗಳನ್ನು ಆಡಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್!

ಟಿವಿ ಚ್ಯಾನೆಲ್ ನ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ಅದೊಂದು ಕಾಲವಿತ್ತು. ಆಗ ಪಾಕಿಸ್ತಾನ ತಂಡ ಭಾರತದ ವಿರುದ್ಧ ಕ್ರಿಕೆಟ್ ನಲ್ಲಿ ಪ್ರಭುತ್ವ ಸಾಧಿಸಿತ್ತು. ನಂತರ ಎರಡೂ ತಂಡಗಳು ಮೈದಾನದಲ್ಲಿ ಸಮಬಲದ ಹೋರಾಟ ನಡೆಸಿ ರೋಮಾಂಚಕ ಪಲಿತಾಂಶವನ್ನು ನೀಡಲು ಪ್ರಾರಂಭಿಸಿದವು. ಇದೀಗ ಭಾರತ ವಿಶ್ವ ಕ್ರಿಕೆಟ್ ನಲ್ಲೇ ಅತ್ಯಂತ ಬಲಾಢ್ಯ ತಂಡವಾಗಿ ಹೊರಹೊಮ್ಮಿದೆ. ಅದೇ ಪಾಕಿಸ್ತಾನ ದುರ್ಬಲವಾಗಿತ್ತು. ಬಾಂಗ್ಲಾದೇಶದ ವಿರುದ್ಧವೂ ಸೋಲುವ ಪರಿಸ್ಥಿತಿ ಎದುರಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಹೋಲಿಕೆ ಮಾಡುವುದು ಸಾಧ್ಯವಿಲ್ಲ.

ನಾವು ರಾಜಕೀಯ ವಿಚಾರಗಳನ್ನು ಒತ್ತಟ್ಟಿಗಿಡೋಣ. ಭಾರತದಲ್ಲಿ ಉತ್ತಮ ಕ್ರಿಕೆಟಿಗರಿದ್ದು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ನಿಮ್ಮದು ನಿಜಕ್ಕೂ ಉತ್ತಮ ತಂಡವಾಗಿದ್ದರೆ ನೀವು 10 ಟೆಸ್ಟ್, 10 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ. ಆಗ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಕುಟುಕಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನದ ಕುರಿತಾಗಿ ಮಾತನಾಡಿದ ಅವರು, ಒಂದು ವೇಳೆ ನಮಗೆ ಸರಿಯಾದ ತಯಾರಿ ನಡೆಸಿ, ಎಲ್ಲವೂ ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಆಗ ನಾವು ಭಾರತ ಮತ್ತು ಜಗತ್ತಿಗೆ ಉತ್ತಮ ಉತ್ತರ ನೀಡುವ ಮಟ್ಟಕ್ಕೆ ತಲುಪುತ್ತೇವೆ’’ ಎಂದಿದ್ದಾರೆ.

ಭಾರತ ತಂಡ 2012ರ ಬಳಿಕ ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ಸರಣಿಯನ್ನು ಆಡಿಯೇ ಇಲ್ಲ. ಭಯೋತ್ಪಾದನೆ ಮತ್ತು ಭದ್ರತೆಯ ವಿಚಾರದ ಹಿನ್ನೆಲೆಯಲ್ಲಿ ಭಾರತ ಈ ನಿರ್ಧಾರ ತಳೆದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಎಷ್ಟೇ ಪ್ರಯತ್ನ ನಡೆಸಿದರೂ ಭಾರತ ದೃಢ ನಿರ್ಧಾರ ತಳೆದಿದೆ. ಹಾಗಾಗಿ ಐಸಿಸಿ ಟೂರ್ನಿ ಮತ್ತು ಏಷ್ಯಾ ಕಪ್ ಟೂರ್ನಿಗಳನ್ನು ಹೊರತುಪಡಿಸಿದರೆ ಇತ್ತಂಡಗಳ ನಡುವೆ ಬೇರಾವುದೇ ಪಂದ್ಯಗಳು ನಡೆಯುತ್ತಿಲ್ಲ.

ಇದೀಗ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಕಳೆದ ವರ್ಷವೇ ಸ್ಪಷ್ಟವಾಗಿ ತಿಳಿಸಿತ್ತು. ಆದರೆ ಪಿಸಿಬಿ ಮಾತ್ರ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಬೇಕು ಎಂದು ಜಿದ್ದಿಗೆ ಬಿದ್ದಿತ್ತು. ಆದರೆ ಭಾರತ ಮಾತ್ರ ಹೈಬ್ರಿಡ್ ಮಾದರಿಯಲ್ಲಿ ನಮ್ಮ ಪಂದ್ಯಗಳನ್ನು ಪಾಕಿಸ್ತಾನದಿಂದ ಹೊರಗಡೆ ಮಾಡುವುದಾದಲ್ಲಿ ಆಡುತ್ತೇವೆ, ಇಲ್ಲಾಂದ್ರೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿತು. ಪಿಸಿಬಿ ಮತ್ತು ಬಿಸಿಸಿಐ ಜೊತೆ ಸಭೆ ನಡೆಸಿದ ಐಸಿಸಿ ಅಂತಿಮವಾಗಿ 2027ರವರೆಗೂ ಎರಡೂ ದೇಶಗಳಲ್ಲಿ ನಡೆಯುವ ಐಸಿಸಿ ಟೂರ್ನಿಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಬಗ್ಗೆ ತನ್ನ ತೀರ್ಮಾನ ತಿಳಿಸಿತು. ಹೀಗಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಇದೀಗ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.



Read more

[wpas_products keywords=”deal of the day sale today offer all”]