The New Indian Express
ಬೆಂಗಳೂರು: ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ವಾಹನ ಸಂಚಾರಕ್ಕೆ ಯಾವಾಗ ಮುಕ್ತವಾಗಲಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಮಹತ್ವದ ಮಾಹಿತಿ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್ ಫ್ಲೈ ಓವರ್ ದುರಸ್ತಿ ವಿಚಾರ ಪ್ರಸ್ತಾಪ ಮಾಡಿದರು. ಪೀಣ್ಯ ಎಲಿವೇಡೆಡ್ ಮೇಲ್ಸೆತುವೆಯ 102 ಮತ್ತು 103ನೇ ಕಂಬಗಳ ನಡುವೆ ತಾಂತ್ರಿಕ ದೋಷವಿದೆ ಎಂದು 56 ದಿನಗಳಿಂದ ವಾಹನ ಸಂಚಾರ ಬಂದ್ ಮಾಡಲಾಗಿದೆ. ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಆಗಿರುವುದರಿಂದ ಹೊರ ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ಬರುವ ಮತ್ತು ಹೋಗುವ ವಾಹನಗಳಿಗೆ ತೊಂದರೆಯಾಗುತ್ತಿದೆ. ಪ್ರತಿನಿತ್ಯ ಎರಡು ಕಿ. ಮೀ. ಉದ್ದ ವಾಹನದ ಸಾಲು ಇರುತ್ತದೆ. ಆಂಬ್ಯುಲೆನ್ಸ್ ಓಡಾಟಕ್ಕೆ ಸಹ ಕಷ್ಟವಾಗುತ್ತಿದೆ. ವಾಹನ ಸಂಚಾರ ಯಾವಾಗ ಆರಂಭವಾಗಲಿದೆ? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಈ ವಿಚಾರಕ್ಕೆ ಧ್ವನಿಗೂಡಿಸಿ, ಇದೊಂದು ಪ್ರಮುಖ ವಿಷಯವಾಗಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿದ ಸೂಕ್ತ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆಯ ಫ್ಲೈ ಓವರ್ ಇದಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪ್ರಶ್ನೆಗೆ ಉತ್ತರ ನೀಡಿದರು. “ಮೇಲ್ಸೆತುವೆ ಭಾರೀ ವಾಹನಗಳ ಸಂಚಾರಕ್ಕೆ ಸುರಕ್ಷಿತವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವರದಿ ನೀಡಿದೆ. ಆದರೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಸಂಬಂಧ ಒಂದು ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ” ಎಂದರು.
ಅಲ್ಲದೆ ‘ಮೇಲ್ಸೆತುವೆ ನಿರ್ಮಾಣ ಮಾಡುವಾಗ ಗುಣಮಟ್ಟ ಪಾಲನೆ ಮಾಡಿಲ್ಲ. ಕಳಪೆ ಕಾಮಗಾರಿಯಿಂದ ಈಗ ಸಮಸ್ಯೆ ಉಂಟಾಗಿದೆ. ಐಐಎಸ್‌ಸಿ ಮೇಲ್ಸೆತುವೆ ಮೇಲೆ ಸ್ಪೀಡ್ ಟೆಸ್ಟ್ ನಡೆಸಿದೆ, ಲೋಡ್ ಟೆಸ್ಟ್ ಸಹ ಮಾಡಿದೆ. ಭಾರೀ ವಾಹನಗಳು ಸಂಚಾರ ನಡೆಸಿದಾಗ ಕಂಬಗಳ ಒಳಗಿನ ಕೇಬಲ್ ಬಾಗುತ್ತದೆ. ಆದ್ದರಿಂದ ಭಾರೀ ವಾಹನಗಳ ಸಂಚಾರಕ್ಕೆ ಫ್ಲೈ ಓವರ್ ಸುರಕ್ಷಿತವಲ್ಲ ಎಂಬ ವರದಿ ನೀಡಿದೆ ಎಂದರು.
“ಫ್ಲೈ ಓವರ್ ಮೇಲೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬ ಮನವಿಯೂ ಬಂದಿದೆ. ಈ ಬಗ್ಗೆ ಲೋಡ್ ಟೆಸ್ಟ್ ಮಾಡಿಸಿ ಒಪ್ಪಿಗೆ ಸಿಕ್ಕರೆ ಒಂದು ವಾರದಲ್ಲಿ ತೀರ್ಮಾನ ಪ್ರಕಟಿಸುತ್ತೇವೆ. ಫ್ಲೈ ಓವರ್ ನಿರ್ಮಾಣದ ವೇಳೆ ಈ ಹಿಂದೆ ಆದ ಕಳಪೆ ಕಾಮಗಾರಿಗೆ ಈಗ ಯಾರು ಹೊಣೆ. ಒತ್ತಡಕ್ಕೆ ಮಣಿದು ವಾಹನ ಸಂಚಾರಕ್ಕೆ ಅವಕಾಶ ನೀಡಿದರೆ ಅವಘಡ ನಡೆದರೆ ಸರ್ಕಾರವನ್ನು ಜನರು ದೂರುತ್ತಾರೆ ಎಂದು ಬೊಮ್ಮಾಯಿ ಹೇಳಿದರು.
Read more
[wpas_products keywords=”deal of the day”]