Karnataka news paper

ಮತಾಂತರ ನಿಷೇಧ ಕಾಯಿದೆ ಕರ್ನಾಟಕದ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ: ಡಿಕೆ ಶಿವಕುಮಾರ್


Source : The New Indian Express

ಬೆಳಗಾವಿ: ಬಿಜೆಪಿ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ ಕಾಯಿದೆ ವಿರುದ್ಧ ಉಭಯ ಸದನಗಳ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಪ್ರಬಲವಾದ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ, ಶಿವಕುಮಾರ್‌ ಅವರು ಬುಧವಾರ ಹೇಳಿದ್ದಾರೆ.

ಇಂದು ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಮತಾಂತರ ನಿಷೇಧ ಕಾಯಿದೆ ತರಲು ಹೊರಟಿರುವುದರಿಂದ ರಾಜ್ಯದ ರಾಜಸ್ವದ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ. ಇಡೀ ರಾಷ್ಟ್ರದಲ್ಲಿಯೇ ಕರ್ನಾಟಕ ಅತಿ ಹೆಚ್ಚು ರಾಜಸ್ವ ಗಳಿಸುವ ರಾಜ್ಯವಾಗಿದೆ. ಇಂಥ ಹೆಗ್ಗಳಿಕೆಗೆ ಉದ್ದೇಶಿತ ವಿಧೇಯಕದಿಂದ ಹಿನ್ನಡೆಯಾಗಲಿದೆ. ಬಂಡವಾಳ ಹಿಂತೆಗೆತ, ಬಂಡವಾಳ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

ಇದನ್ನು ಓದಿ: ಮತಾಂತರ ನಿಷೇಧ ಕಾಯ್ದೆ ಬಗ್ಗೆ ಬಿಜೆಪಿ ಶಾಸಕಾಂಗ ಪಕ್ಷದಲ್ಲಿ ವಿಸ್ತೃತ ಚರ್ಚೆ: ಗೃಹ ಸಚಿವ​

ರಾಜ್ಯದಲ್ಲಿ ಜೈನ, ಬೌದ್ಧ, ಕ್ರೈಸ್ತ, ಸಿಖ್‌ ಹೀಗೆ ಹಲವಾರು ಧರ್ಮಗಳಿವೆ. ಯಾವುದೇ ಒಂದು ನಿರ್ದಿಷ್ಟ ಧರ್ಮವನ್ನು  ಗುರಿಯಾಗಿಸಿಕೊಂಡು ವಿಧೇಯಕ ತರುವುದು ಸೂಕ್ತವಲ್ಲ. ಕಾಂಗ್ರೆಸ್‌ ಈ ವಿಧೇಯಕವನ್ನು ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

ಮತಾಂತರ ಕುರಿತಂತೆ ಈಗಾಗಲೇ ಕಾನೂನು ಇದೆ. ಇರುವ ಕಾನೂನನ್ನು ಪ್ರಯೋಗ ಮಾಡಬೇಕು. ಅದನ್ನು ಬಿಟ್ಟು ಹೊಸದಾಗಿ ಮತಾಂತರ ನಿಷೇಧ ಕಾಯಿದೆ ತರಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹೊರಟಿರುವುದರ ಹಿಂದೆ ಚುನಾವಣಾ ಉದ್ದೇಶವಿದೆ. ರಾಜಕೀಯ ದುರುದ್ದೇಶದಿಂದ ಈ ವಿಧೇಯಕವನ್ನು ತರುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ ಎಂದು ಅವರು ದೂರಿದರು.

ಇದುವರೆಗೂ ಮತಾಂತರ ನಿಷೇಧ ವಿಧೇಯಕಕ್ಕೆ ಸಂಬಂಧಿಸಿದ ಕರಡು ಪ್ರತಿ ಲಭ್ಯವಾಗಿಲ್ಲ. ಸಚಿವ ಸಂಪುಟದ ಮುಂದೆಯೂ ಚರ್ಚೆಯಾಗಿಲ್ಲ. ಸಾಕಷ್ಟು ಸಚಿವರಿಗೆ ಈ ವಿಧೇಯಕದ ಬಗ್ಗೆ ವಿರೋಧವಿದೆ ಎನ್ನಲಾಗಿದೆ. ಇದು ಸಂವಿಧಾನ ಬಾಹಿರ ಎನ್ನುವುದು ಅವರಿಗೆ ಅರಿವಾಗಿದೆ. ಇಷ್ಟೆಲ್ಲ ಇದ್ದರೂ ಬಿಜೆಪಿ ವಿಧೇಯಕ ಮಂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.



Read more