Karnataka news paper

ಸಾಹಿತಿ ಡಾ.ಚೆನ್ನವೀರ ಕಣವಿ ನಿಧನ: ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ


Online Desk

ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ಅವರು ನಿಧನರಾಗಿದ್ದು, ಕನ್ನಡ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದ ಇವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಸೇರಿದಂತೆ ಇತರೆ ರಾಜಕೀಯ ಮುಖಂಡರು, ಸಾಹಿತಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ, ನಾಡು ಕಂಡಂತಹ ಅತ್ಯಂತ ಸೃಜನಶೀಲ ಸಾಹಿತ್ಯ ರಚನೆಕಾರರು, ಚಂಬೆಳಕಿನ ಕವಿ, ನಾಡೋಜ ಶ್ರೀ ಚೆನ್ನವೀರ ಕಣವಿ ಅವರು ನಿಧನರಾದ ವಿಷಯ ತಿಳಿದು ತುಂಬಾ ದುಃಖಿತನಾಗಿದ್ದೇನೆ‌. ಸಾಹಿತ್ಯದ ಮುಖಾಂತರ ಅವರು ತಮ್ಮ ಕಲ್ಪನೆ ಹಾಗೂ ವಾಸ್ತವಾಂಶವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ ಕವಿ ಆಗಿದ್ದರು. ಪ್ರಶಸ್ತಿಗಳಿಗೆ ಗೌರವ ಬರುವ ವ್ಯಕ್ತಿತ್ವ ಅವರದಾಗಿತ್ತು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ಹಾನಿಯಾಗಿದೆ. ವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗು ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿಯೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡದ ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ನಿಧನ

ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದು, ವಿಶ್ವ ಭಾರತಿಗೆ ಕನ್ನಡಧಾರತಿ ಬೆಳಗಿದ ಕನ್ನಡಿಗರ ಮನದಲ್ಲಿ ಕನ್ನಡ ಜಾಗೃತಿ ಮೂಡಿಸಿದ ಕನ್ನಡದ ಮಹಾಕವಿ ನಾಡೋಜ ಚೆನ್ನವೀರ ಕಣವಿಯವರ ನಿಧನದ ಸುದ್ಧಿ ಕೇಳಿ ತೀವ್ರ ಬೇಸರವಾಯಿತು. ಚೆನ್ನವೀರ ಕಣವಿ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಕನ್ನಡ ಕಾವ್ಯಲೋಕದ ಚೆಂಬೆಳಕಾಗಿದ್ದ, ಸೌಹಾರ್ದತೆಯನ್ನು ಸಾರುತ್ತಾ ಸಮನ್ವಯ ಕವಿ ಎಂದೇ ಖ್ಯಾತರಾಗಿದ್ದ ಕವಿ ಚೆನ್ನವೀರ ಕಣವಿ ಅವರ ನಿಧನದಿಂದ ಅತೀವ ದು:ಖಕ್ಕೀಡಾಗಿದ್ದೇನೆ. ಅವರ ಕುಟುಂಬ ವರ್ಗದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ‌ ಕೋರುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂದು ಏಳು ದಶಕಗಳ ಕಾಲ ಕನ್ನಡದ ಸಾಹಿತ್ಯ ಕೃಷಿ ಮಾಡಿದ ಸಮನ್ವಯ ಕವಿ ನಾಡೋಜ ಶ್ರೀ ಚನ್ನವೀರ ಕಣವಿಯವರ ನಿಧನಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ, ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ದುಃಖ ವ್ಯಕ್ತಪಡಿಸಿದ್ದಾರೆ.



Read more

[wpas_products keywords=”deal of the day”]